ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ವಿಶ್ವಮಟ್ಟದಲ್ಲಿ ಭಾರತೀಯ ಚಿತ್ರರಂಗಕ್ಕೆ ಹೊಸ ಗುರುತು ತಂದುಕೊಟ್ಟಿತು. ಆಸ್ಕರ್ ಅಂಗಳಕ್ಕೆ ಹೋದ ಈ ಸಿನಿಮಾ ಅದಕ್ಕೂ ಮುಂಚೆಯೇ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಯ್ತು. ವಿದೇಶಿ ಜನ ಮುಗಿಬಿದ್ದು ‘ಆರ್ಆರ್ಆರ್’ ಸಿನಿಮಾ ನೋಡಿದರು. ಸಿನಿಮಾ ಪ್ರೇಕ್ಷಕರು ಮಾತ್ರವೇ ಅಲ್ಲದೆ, ದೊಡ್ಡ ದೊಡ್ಡ ಹಾಲಿವುಡ್ ತಂತ್ರಜ್ಞರು, ನಿರ್ಮಾಪಕರು, ಸಿನಿಮಾ ತಾರೆಯರು ಸಹ ‘ಆರ್ಆರ್ಆರ್’ ಸಿನಿಮಾ ನೋಡಿದ್ದು ಮಾತ್ರವೇ ಅಲ್ಲದೆ ಬಹುವಾಗಿ ಮೆಚ್ಚಿಕೊಂಡಿದ್ದರು. ಇದೀಗ ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಬ್ರಿಟೀಷ್ ತಾರೆಯೊಬ್ಬರು ‘ಆರ್ಆರ್ಆರ್’ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಎಎನ್ಐ ಜೊತೆ ಮಾತನಾಡಿರುವ ನಟಿ ಮೈನಿ ಡ್ರೈವರ್, ‘ಆರ್ಆರ್ಆರ್ ನನಗೆ ಹಾಗೂ ನನ್ನ ಮಗನಿಗೆ ಬಹಳ ಇಷ್ಟದ ಸಿನಿಮಾ. ಅದು ಮೂರು ಗಂಟೆಯ ಸಿನಿಮಾ ಆಗಿದ್ದರೂ ಸಹ ಕುತೂಹಲದಿಂದ ನೋಡಿಸಿಕೊಳ್ಳುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ನಾನು ಹಾಗೂ ನನ್ನ ಪುತ್ರ ಕುಳಿತು ಆ ಸಿನಿಮಾ ನೋಡುತ್ತೇವೆ. ಇತ್ತೀಚೆಗಿನ ವರ್ಷಗಳಲ್ಲಿ ನಾನು ನೋಡಿದ ಅದ್ಭುತವಾದ ಸಿನಿಮಾ ಅದು’ ಎಂದಿದ್ದಾರೆ ಮೈನಿ.
ಇದನ್ನೂ ಓದಿ:ಮೈಸೂರು ದಸರಾ 2024: ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಲೈವ್ ಆಗಿ ನೋಡಿ
ಭಾರತದ ಬಗ್ಗೆ ತಮಗಿರುವ ಪ್ರೀತಿಯ ಬಗ್ಗೆಯೂ ಮಾತನಾಡಿರುವ ಮೈನಿ ಡ್ರೈವರ್, ‘ಜನಪ್ರಿಯ ಶೆಫ್ ರೋಮಿ ಗಿಲ್ ನನ್ನ ಆತ್ಮೀಯ ಗೆಳತಿ. ಆಕೆಯಿಂದ ಭಾರತದ ಬಗ್ಗೆ ಹಲವು ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಭಾರತೀಯ ಆಹಾರಗಳ ರುಚಿ ನೋಡಿದ್ದೇನೆ. ಪಂಜಾಬಿ, ಪಶ್ಚಿಮ ಬಂಗಾಳದ ಪರಿಚಯ ನನಗೆ ಇದೆ. ನನಗೆ ಭಾರತವನ್ನು ಸುತ್ತುವ, ಅದರ ಅನುಭೂತಿಯನ್ನು ಪಡೆಯುವ ಆಸೆಯಿದೆ. ಆದಷ್ಟು ಶೀಘ್ರವಾಗಿ ಆ ಆಸೆಯನ್ನು ಈಡೇರಿಸಿಕೊಳ್ಳುತ್ತೇನೆ’ ಎಂದಿದ್ದಾರೆ.
‘ಆರ್ಆರ್ಆರ್’ ಸಿನಿಮಾ ಅಮೆರಿಕದಲ್ಲಿ ಬಿಡುಗಡೆ ಆದಾಗ ಬ್ಲಾಕ್ ಬಸ್ಟರ್ ಆಗಿತ್ತು. ಆಸ್ಕರ್ನಲ್ಲಿ ಪ್ರದರ್ಶಿಸುವಾಗಂತೂ ಸ್ಟಿಫಲ್ ಸ್ಪೀಲ್ಬರ್ಜ್, ಜೇಮ್ಸ್ ಕ್ಯಾಮರನ್ ಅಂಥಹಾ ವಿಶ್ವಶ್ರೇಷ್ಠ ನಿರ್ದೇಶಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಲ್ಲದೆ, ನಿರ್ದೇಶಕ ರಾಜಮೌಳಿಗೆ ಹಾಲಿವುಡ್ನಲ್ಲಿ ಸಿನಿಮಾ ನಿರ್ದೇಶಿಸಲು ಆಹ್ವಾನ ಸಹ ನೀಡಿದರು. ಜೇಮ್ಸ್ ಅಂತೂ ತಾವೇ ಪ್ರೊಡಕ್ಷನ್ ಹೌಸ್ ಜೊತೆ ಮಾತನಾಡುವುದಾಗಿ ಹೇಳಿದರು. ನೆಟ್ಫ್ಲಿಕ್ಸ್ ಸಿಇಓ ಸಹ ‘ಆರ್ಆರ್ಆರ್’ ಸಿನಿಮಾವನ್ನು ಹಲವು ಬಾರಿ ವೀಕ್ಷಿಸಿದ್ದಾಗಿ ಹೇಳಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ