ಸನ್ನಿ ಡಿಯೋಲ್ ‘ಸೂರ್ಯ’ ಚಿತ್ರದಲ್ಲಿ ವೈದ್ಯರ ನಿಂದನೆ; ವೈದ್ಯಕೀಯ ಸಂಘ ಅಸಮಾಧಾನ

ಸನ್ನಿ ಡಿಯೋಲ್ ನಟಿಸಿರುವ ಹೊಸ ಸಿನಿಮಾ ಈಗ ವಿವಾದಕ್ಕೆ ಕಾರಣ ಆಗಿದೆ. ‘ಸೂರ್ಯ’ ಚಿತ್ರದಲ್ಲಿ ವೈದ್ಯಕೀಯ ಕ್ಷೇತ್ರವನ್ನು ಆಕ್ಷೇಪಾರ್ಹವಾಗಿ ತೋರಿಸಲಾಗಿದೆ ಎಂಬ ಆರೋಪ ಎದುರಾಗಿದೆ. ಈ ವಿವಾದವು ಈಗ ಚಿತ್ರರಂಗ ಹಾಗೂ ವೈದ್ಯಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ..

ಸನ್ನಿ ಡಿಯೋಲ್ ‘ಸೂರ್ಯ’ ಚಿತ್ರದಲ್ಲಿ ವೈದ್ಯರ ನಿಂದನೆ; ವೈದ್ಯಕೀಯ ಸಂಘ ಅಸಮಾಧಾನ
Sunny Deol
Image Credit source: Zee Music Company

Updated on: Oct 27, 2026 | 8:07 PM

ಬಾಲಿವುಡ್ ನಟ ಸನ್ನಿ ಡಿಯೋಲ್ ಅಭಿನಯದ ‘ಸೂರ್ಯ’ ಸಿನಿಮಾದಲ್ಲಿ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನು ತಪ್ಪು ರೀತಿಯಲ್ಲಿ ಬಿಂಬಿಸಲಾಗಿದೆ ಹಾಗೂ ಅವರ ಮೇಲಿನ ಹಿಂಸಾಚಾರವನ್ನು ವೈಭವೀಕರಿಸಲಾಗಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಸಂಘವು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದು, ಚಿತ್ರದ ತುರ್ತು ಪರಾಮರ್ಶೆಗೆ ಒತ್ತಾಯಿಸಿದೆ.

ಎಂ. ಪದ್ಮಕುಮಾರ್ ನಿರ್ದೇಶನದ ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ನವೆಂಬರ್ 20ರಂದು ತೆರೆಗೆ ಬರಲು ಸಜ್ಜಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟೀಸರ್‌ನಲ್ಲಿ ಕಥೆಯ ಎಳೆ ಏನು ಎಂಬುದರ ಸುಳಿವು ನೀಡಲಾಗಿದೆ. ತನ್ನ ಮಗಳ ಅನಾರೋಗ್ಯದ ಹಿಂದಿನ ಸತ್ಯವನ್ನು ಹುಡುಕುವ ತಂದೆಯೊಬ್ಬನ ಕಥೆ ಇದಾಗಿದ್ದು, ವೈದ್ಯಕೀಯ ರಂಗದಲ್ಲಿನ ಭ್ರಷ್ಟಾಚಾರವನ್ನು ಬಿಂಬಿಸಲಾಗಿದೆ.

ಚಿತ್ರದ ಟೀಸರ್‌ನಲ್ಲಿ ಇಡೀ ವೈದ್ಯಕೀಯ ಕ್ಷೇತ್ರವೇ ಭ್ರಷ್ಟ ಎಂಬಂತೆ ಬಿಂಬಿಸಲಾಗಿದೆ. ಇದು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ವೈದ್ಯರ ಹಾಗೂ ಆರೋಗ್ಯ ಕಾರ್ಯಕರ್ತರ ಶ್ರಮಕ್ಕೆ ಧಕ್ಕೆ ತರುತ್ತದೆ ಮತ್ತು ಸಾರ್ವಜನಿಕರಲ್ಲಿ ವೈದ್ಯರ ಮೇಲಿನ ನಂಬಿಕೆಯನ್ನು ಕುಸಿಯುವಂತೆ ಮಾಡುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘವು ಆತಂಕ ವ್ಯಕ್ತಪಡಿಸಿದೆ.

‘ಸೂರ್ಯ’ ಸಿನಿಮಾದ ಟೀಸರ್‌:

SURYAA: Ant Se Aarambh Tak - Official Teaser | Sunny Deol, Ravi Kishan | M Padmakumar| 20th Nov 2026

ವೈದ್ಯರು, ದಾದಿಯರು ಮತ್ತು ಆಸ್ಪತ್ರೆಯ ಸಿಬ್ಬಂದಿಯ ಮೇಲೆ ನಡೆಯುವ ಹಲ್ಲೆ ಹಾಗೂ ಹಿಂಸಾಚಾರದ ದೃಶ್ಯಗಳನ್ನು ಹೀರೋಯಿಸಂ ಅಥವಾ ಸಮರ್ಥನೀಯ ಎಂಬಂತೆ ತೋರಿಸಲಾಗಿದೆ. ಇಂತಹ ದೃಶ್ಯಗಳು ಸಮಾಜದಲ್ಲಿ ವೈದ್ಯಕೀಯ ಸಿಬ್ಬಂದಿಯ ಮೇಲಿನ ದಾಳಿಯನ್ನು ಸಾಮಾನ್ಯಗೊಳಿಸುವ ಅಪಾಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಸೂರ್ಯ’ ಚಿತ್ರದ ವಿಷಯ ವಸ್ತುವನ್ನು ನಿಷ್ಪಕ್ಷಪಾತವಾಗಿ ಪರಾಮರ್ಶಿಸಬೇಕು ಮತ್ತು ಅಗತ್ಯ ತಿದ್ದುಪಡಿಗಳನ್ನು ಮಾಡುವಂತೆ ಚಿತ್ರತಂಡಕ್ಕೆ ಸೂಚಿಸಬೇಕು. ಕಾನೂನಿನ ಅಡಿಯಲ್ಲಿ ಸೂಕ್ತವೆನಿಸಿದರೆ ಚಿತ್ರದ ಮೇಲೆ ನಿಷೇಧ ಹೇರಬೇಕು ಅಥವಾ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಘವು ಸಚಿವಾಲಯವನ್ನು ಕೋರಿದೆ.

ಇದನ್ನೂ ಓದಿ: ‘ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಲ್ಲ’ ಎಂದ ಬೆನ್ನಲ್ಲೇ ವೈರಲ್ ಆಯ್ತು ಸನ್ನಿ ಡಿಯೋಲ್ ವಿಡಿಯೋ

‘ವೈದ್ಯಕೀಯ ಕ್ಷೇತ್ರದಲ್ಲಿ ಯಾರಾದರೂ ಅಕ್ರಮ, ಭ್ರಷ್ಟಾಚಾರ ಅಥವಾ ವೃತ್ತಿಪರ ಅನಾಚಾರದಲ್ಲಿ ತೊಡಗಿದ್ದರೆ ಅವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ಬೆಂಬಲವಿದೆ. ಆದರೆ, ಕೆಲವರ ತಪ್ಪುಗಳಿಗಾಗಿ ಇಡೀ ವೈದ್ಯಕೀಯ ಸಮುದಾಯವನ್ನು ಅನುಮಾನದ ಕಣ್ಣಿನಿಂದ ನೋಡುವುದು ಸರಿಯಲ್ಲ. ವೈದ್ಯರ ಮೇಲಿನ ದಾಳಿಯನ್ನು ಪ್ರಚೋದಿಸುವಂತಹ ವಿಷಯಗಳು ಚಿಕಿತ್ಸಾ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ’ ಎಂದು ಸಂಘವು ತಿಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us