ಶ್ರೀದೇವಿ ಹಾದಿಯಲ್ಲಿ ಸಾಗಿದ ಜಾನ್ವಿ ಕಪೂರ್; ಆ ಒಂದು ಕೆಲಸಕ್ಕೆ ಭಾರೀ ಮೆಚ್ಚುಗೆ
ಜಾನ್ವಿ ಕಪೂರ್ ಪ್ಯಾನ್-ಇಂಡಿಯಾ ಸ್ಟಾರ್ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಸಿನಿಮಾಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿ, ದಕ್ಷಿಣ ಭಾರತದತ್ತ ಮುಖ ಮಾಡಿದ್ದಾರೆ. 'ಪೆದ್ದಿ' ಚಿತ್ರದ ಮೂಲಕ ತೆಲುಗು ಪ್ರೇಕ್ಷಕರ ಎದುರು ಬರಲು ಸಿದ್ಧವಾಗಿದ್ದು, ಇತ್ತೀಚೆಗೆ ನಿರರ್ಗಳವಾಗಿ ತೆಲುಗಿನಲ್ಲಿ ಮಾತನಾಡಿ ಎಲ್ಲರ ಗಮನ ಸೆಳೆದರು. ತಾಯಿ ಶ್ರೀದೇವಿ ಅವರ ಹಾದಿಯಲ್ಲೇ ಸಾಗಲು ಜಾನ್ವಿ ರೆಡಿ ಆಗುತ್ತಿದ್ದಾರೆ.

ಬಾಲಿವುಡ್‌ನ ಯುವ ನಟಿ ಜಾನ್ವಿ ಕಪೂರ್ (Janhvi Kapoor) ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಪ್ರಯತ್ನದಲ್ಲಿ ಇದ್ದಾರೆ. ಸ್ಟಾರ್ ಹಿನ್ನೆಲೆಯಿಂದ ಬಂದರೂ ಸಹ ವೃತ್ತಿಜೀವನದ ಆರಂಭದಲ್ಲೇ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವ ಅವರು, ಸದ್ಯ ತಮ್ಮ ಸಿನಿಮಾಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದ್ದಾರೆ. ಸದ್ಯಕ್ಕೆ ಜಾನ್ವಿ ಅವರ ಸಂಪೂರ್ಣ ಗಮನ ಪ್ಯಾನ್-ಇಂಡಿಯಾ ಸಿನಿಮಾಗಳ ಮೇಲಿದ್ದು, ದಕ್ಷಿಣ ಭಾರತದತ್ತ ಹೆಜ್ಜೆ ಇಟ್ಟಿದ್ದಾರೆ. ಅವರು ಶ್ರೀದೇವಿ ಹಾದಿಯಲ್ಲೇ ಸಾಗುತ್ತಿದ್ದಾರೆ.
ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ನಟನೆಯ ಬಹುನಿರೀಕ್ಷಿತ ತೆಲುಗು ಸಿನಿಮಾ ‘ಪೆದ್ದಿ’ ಜೂನ್ 4 ರಂದು ಅದ್ಧೂರಿಯಾಗಿ ತೆರೆಕಾಣಲು ಸಿದ್ಧವಾಗಿದೆ. ಈ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರ ಎದುರು ಬರಲು ಜಾನ್ವಿ ಮತ್ತೊಮ್ಮೆ ರೆಡಿ ಆಗಿದ್ದಾರೆ. ಅವರು ತಮಗೆ ಸಿಕ್ಕ ಯಾವುದೇ ಅವಕಾಶವನ್ನು ಕೈಬಿಡುತ್ತಿಲ್ಲ.
ಇತ್ತೀಚೆಗೆ ನಡೆದ ‘ಪೆದ್ದಿ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಜಾನ್ವಿ ಕಪೂರ್ ಎಲ್ಲರಿಗೂ ಅಚ್ಚರಿ ಮೂಡಿಸಿದರು. ವೇದಿಕೆಯ ಮೇಲೆ ತಡಬಡಾಯಿಸದೇ ಅತ್ಯಂತ ಸ್ಪಷ್ಟವಾಗಿ ಮತ್ತು ನಿರರ್ಗಳವಾಗಿ ತೆಲುಗಿನಲ್ಲಿ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದರು. ಪ್ರೇಕ್ಷಕರನ್ನು ರಂಜಿಸುವುದೇ ನನ್ನ ಜೀವನದ ನಿಜವಾದ ಉದ್ದೇಶ ಎಂದರು. ‘ಪ್ರತಿಯೊಬ್ಬರೂ ತಮ್ಮ ಜೀವನದ ಉದ್ದೇಶವನ್ನು ಕಂಡುಕೊಳ್ಳಬೇಕು’ ಎಂಬ ಈ ಸಿನಿಮಾದ ಸಂದೇಶವನ್ನೇ ತಮ್ಮ ಜೀವನಕ್ಕೂ ಹೋಲಿಸಿ ಅವರು ಮಾತನಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಒಂದು ಕಾಲದಲ್ಲಿ ನಟಿ ಶ್ರೀದೇವಿ ಅವರು ಟಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿ ಮೆರೆದಿದ್ದರು. ತೆಲುಗು ಚಿತ್ರರಂಗವನ್ನು ಆಳಿದ್ದ ಶ್ರೀದೇವಿ ಅವರಿಗೆ ಅಲ್ಲಿ ಅಪಾರ ಅಭಿಮಾನಿ ಬಳಗವಿತ್ತು. ಈಗ ಜಾನ್ವಿ ಕಪೂರ್ ಕೂಡ ತಾಯಿಯ ಹಾದಿಯಲ್ಲೇ ಸಾಗಲು ಸಿದ್ಧರಾಗುತ್ತಿದ್ದಾರೆ ಎಂಬುದಕ್ಕೆ ಅವರು ಈ ಕಾರ್ಯಕ್ರಮದಲ್ಲಿ ಅರಳು ಹುರಿದಂತೆ ತೆಲುಗಿನಲ್ಲಿ ಮಾತನಾಡಿದ್ದೇ ಸಾಕ್ಷಿ. ತೆಲುಗು ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅವರ ಗೌರವ ಈ ಭಾಷಣದಲ್ಲಿ ಎದ್ದು ಕಾಣುತ್ತಿತ್ತು.
ಇದನ್ನೂ ಓದಿ: ಕನ್ನಡ ಕಲಿತು ವೇದಿಕೆ ಮೇಲೆ ಮಾತನಾಡಿದ ಜಾನ್ವಿ ಕಪೂರ್
ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆಯಾಗುತ್ತಿದೆ. ಒಂದು ವೇಳೆ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆದರೆ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಜಾನ್ವಿ ಕಪೂರ್ ಅವರ ಬೇಡಿಕೆ ದುಪ್ಪಟ್ಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದೇ ರೀತಿ ಅವರು ಮುಂದುವರಿದರೆ, ತಾಯಿಯಂತೆ ಟಾಲಿವುಡ್‌ನ ಮುಂದಿನ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




