ಕೆಲವೇ ದಿನಗಳಲ್ಲಿ 9.40 ಕೋಟಿ ರೂಪಾಯಿ ದಾನ ಮಾಡಿದ ಮೆಗಾ ಕುಟುಂಬ

|

Updated on: Sep 06, 2024 | 1:21 PM

ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಕೆಲ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಹಲವಾರು ಮಂದಿ ಮನೆ, ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ತೆಲುಗು ಚಿತ್ರರಂಗದ ನಟರು ಎರಡೂ ರಾಜ್ಯಗಳ ಸಿಎಂ ಪರಿಹಾರ ನಿಧಿಗೆ ಕೋಟ್ಯಂತರ ಹಣ ನೀಡುತ್ತಿದ್ದಾರೆ ಆದರೆ ಮೆಗಾ ಫ್ಯಾಮಿಲಿಯೊಂದೆ ಸುಮಾರು 9.40 ಕೋಟಿ ರೂಪಾಯಿ ಪರಿಹಾರ ಮೊತ್ತ ನೀಡಿದೆ.

ಕೆಲವೇ ದಿನಗಳಲ್ಲಿ 9.40 ಕೋಟಿ ರೂಪಾಯಿ ದಾನ ಮಾಡಿದ ಮೆಗಾ ಕುಟುಂಬ
Follow us on

ತೆಲುಗು ಚಿತ್ರರಂಗದವನ್ನು ಕೆಲವು ಕುಟುಂಬಗಳು ನಿಯಂತ್ರಿಸುತ್ತಿವೆ. ನಂದಮೂರಿ ಕುಟುಂಬ, ಮೆಗಾಸ್ಟಾರ್ ಕುಟುಂಬ, ಅಕ್ಕಿನೇನಿ ಕುಟುಂಬ, ದಗ್ಗುಬಾಟಿ ಕುಟುಂಬ. ಇವುಗಳಲ್ಲಿ ಪ್ರಮುಖವಾಗಿ ಇರುವುದು ನಂದಮೂರಿ ಕುಟುಂಬ ಮತ್ತು ಮೆಗಾಸ್ಟಾರ್ ಕುಟುಂಬ. ದಶಕಗಳಿಂದಲೂ ಈ ಎರಡು ಕುಟುಂಬಗಳ ನಡುವೆ ಸ್ಪರ್ಧೆ ನಡೆಯುತ್ತಲೇ ಇದೆ. ದಶಕದ ಹಿಂದೆ ನಂದಮೂರಿ ಕುಟುಂಬದಲ್ಲಿ ಹೆಚ್ಚು ಸಂಖ್ಯೆಯ ನಾಯಕ ನಟರಿದ್ದರು. ಆದರೆ ಈಗ ಮೆಗಾ ಕುಟುಂಬದಲ್ಲಿ ಹೆಚ್ಚು ಸಂಖ್ಯೆಯ ನಾಯಕ ನಟರಿದ್ದಾರೆ. ಮೆಗಾ ಕುಟುಂಬದ ಬಹುತೇಕ ಎಲ್ಲ ನಾಯಕ ನಟರು ಯಶಸ್ವಿಯಾಗಿದ್ದು, ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ದೊಡ್ಡ ಅಭಿಮಾನಿ ಸಂಖ್ಯೆಯನ್ನು ಹೊಂದಿರುವ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ಸಹ ನಿರ್ವಹಿಸುತ್ತಿದ್ದಾರೆ.

ಇದೀಗ ಮೆಗಾ ಕುಟುಂಬದ ಸದಸ್ಯರು ಕೆಲವೇ ದಿನಗಳಲ್ಲಿ 9.40 ಕೋಟಿ ರೂಪಾಯಿ ಹಣ ದಾನ ಮಾಡಿ ತೆಲುಗು ಜನರ ಮನಸ್ಸು ಗೆದ್ದಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಹವಾಮಾನ ವೈಪರಿತ್ಯದಿಂದ ಆಂಧ್ರ ಹಾಗೂ ತೆಲಂಗಾಣದ ಕೆಲ ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಸಾವಿರಾರು ಮಂದಿ ಮನೆ, ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಸರ್ಕಾರ ಇವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯದಲ್ಲಿ ನಿರತವಾಗಿದೆ. ಇದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಸೆಲೆಬ್ರಿಟಿಗಳು ಸರ್ಕಾರಕ್ಕೆ ನೆರವು ನೀಡುತ್ತಿದ್ದಾರೆ. ಮೆಗಾಸ್ಟಾರ್ ಕುಟುಂಬದಿಂದಲೇ ಕೇವಲ ಒಂದು ವಾರದ ಸಮಯದಲ್ಲಿ 9.40 ಕೋಟಿ ಹಣ ಸರ್ಕಾರಕ್ಕೆ ತಲುಪಿದೆ.

ಇದನ್ನೂ ಓದಿ:‘ಮೆಗಾಸ್ಟಾರ್​’ ಚಿರಂಜೀವಿ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದ ಆಶಿಕಾ ರಂಗನಾಥ್​

ಮೊದಲಿಗೆ ಮೆಗಾಸ್ಟಾರ್ ಚಿರಂಜೀವಿ ತೆಲಂಗಾಣ ಹಾಗೂ ಆಂಧ್ರ ಪ್ರದೇಶಕ್ಕೆ ತಲಾ ಐವತ್ತು ಲಕ್ಷ ರೂಪಾಯಿಗಳಂತೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದರು. ತಂದೆಯನ್ನು ಅನುಸರಿಸಿ ರಾಮ್ ಚರಣ್ ಸಹ ಒಂದು ಕೋಟಿ ರೂಪಾಯಿ ನೀಡಿದರು. ಅದಾದ ಬಳಿಕ ನಟ ಅಲ್ಲು ಅರ್ಜುನ್ ಸಹ ಒಂದು ಕೋಟಿ ರೂಪಾಯಿ ಹಣ ನೀಡಿದರು. ಪವನ್ ಕಲ್ಯಾಣ್ ಐದು ಕೋಟಿ ನೀಡಿದರು. ಇತರೆ ನಟರಾದ ವರುಣ್ ತೇಜ್, ಸಾಯಿ ಧರಂ ತೇಜ್ ಇನ್ನಿತರೆ ನಟರುಗಳು ಸಹ ದೇಣಿಗೆ ನೀಡಿದ್ದು ಕೇವಲ ಒಂದು ವಾರದ ಅವಧಿಯಲ್ಲಿ ಮೆಗಾ ಫ್ಯಾಮಿಲಿ ಇಂದು 9.40 ಕೋಟಿ ರೂಪಾಯಿ ಹಣವನ್ನು ಆಂಧ್ರ ಹಾಗೂ ತೆಲಂಗಾಣ ಸಿಎಂ ಪರಿಹಾರ ನಿಧಿಗೆ ನೀಡಲಾಗಿದೆ.

ನಂದಮೂರಿ ಕುಟುಂಬದಿಂದಲೂ ಹಣ ದೇಣಿಗೆ ನೀಡಲಾಗಿದೆ. ಜೂ ಎನ್​ಟಿಆರ್ ಎರಡು ರಾಜ್ಯಗಳಿಗೆ ತಲಾ ಐವತ್ತು ಲಕ್ಷದಂತೆ ಒಂದು ಕೋಟಿ ನೀಡಿದ್ದಾರೆ. ನಂದಮೂರಿ ಬಾಲಕೃಷ್ಣ ಸಹ ತಲಾ ಐವತ್ತು ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಇನ್ನು ನಟ ಪ್ರಭಾಸ್ ತಲಾ ಒಂದು ಕೋಟಿ ರೂಪಾಯಿಯಂತೆ ಎರಡು ರಾಜ್ಯಕ್ಕೆ ಸೇರಿ ಎರಡು ಕೋಟಿ ರೂಪಾಯಿ ಹಣ ನೀಡಿದ್ದಾರೆ. ‘ಕಲ್ಕಿ’ ಚಿತ್ರತಂಡ 50 ಲಕ್ಷ ನೀಡಿದೆ. ರಾಮೋಜಿ ಫಿಲಂ ಸಿಟಿ ಒಂದು ಕೋಟಿ ರೂಪಾಯಿ ಹಣ ನೀಡಿದೆ. ಕೆಲವು ನಟರುಗಳು ಊಟದ ವ್ಯವಸ್ಥೆ, ಬಟ್ಟೆ ಇನ್ನಿತರೆ ದಿನಬಳಕೆ ಸಾಮಗ್ರಿಗಳನ್ನು ನೀಡಿದ್ದಾರೆ. ಒಟ್ಟಾರೆಯಾಗಿ ತೆಲುಗು ಚಿತ್ರರಂಗ, ತೆಲುಗು ರಾಜ್ಯಗಳ ಪ್ರವಾಹ ಪರಸ್ಥಿತಿಗೆ ಸ್ಪಂದಿಸಿ ನೆರವು ನೀಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ