ತೆಲುಗು ಚಿತ್ರರಂಗದಲ್ಲೂ ಕೇರಳ ಮಾದರಿ ಸಮಿತಿ ಸ್ಥಾಪನೆಗೆ ಬೇಡಿಕೆ

|

Updated on: Sep 06, 2024 | 11:55 AM

ಕೇರಳದ ಹೇಮಾ ಸಮಿತಿ ವರದಿ ಇತರೆ ಚಿತ್ರರಂಗಗಳಲ್ಲಿಯೂ ಹಲ್​ಚಲ್ ಎಬ್ಬಿಸಿದೆ. ಕನ್ನಡ ಚಿತ್ರರಂಗದ ಬಳಿಕ ಈಗ ತೆಲುಗು ಚಿತ್ರರಂಗದಲ್ಲಿಯೂ ಸಮಿತಿ ರಚನೆಯಾಗಬೇಕೆಂಬ ಒತ್ತಾಯ ಕೇಳಿ ಬಂದಿದೆ.

ತೆಲುಗು ಚಿತ್ರರಂಗದಲ್ಲೂ ಕೇರಳ ಮಾದರಿ ಸಮಿತಿ ಸ್ಥಾಪನೆಗೆ ಬೇಡಿಕೆ
Follow us on

ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಮೇಲಾಗುತ್ತಿರುವ ದೌರ್ಜನ್ಯದ ಅಧ್ಯಯನಕ್ಕೆ ಕೇರಳ ಸರ್ಕಾರ ರಚಿಸಿದ್ದ ಹೇಮಾ ಸಮಿತಿ ವರದಿ ಇತ್ತೀಚೆಗೆ ಬಹಿರಂಗಗೊಂಡಿದ್ದು, ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಹಲ್​ಚಲ್ ಎಬ್ಬಿಸಿದೆ. ದೊಡ್ಡ ದೊಡ್ಡ ನಿರ್ದೇಶಕ, ನಟ, ನಿರ್ಮಾಪಕರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಮಾಡಲಾಗಿದ್ದು, ಕೆಲವರ ವಿರುದ್ಧ ಎಫ್​ಐಆರ್ ಸಹ ದಾಖಲಾಗಿದೆ. ಇದೀಗ ಪರಭಾಷೆ ಚಿತ್ರರಂಗಳಲ್ಲಿಯೂ ಸಹ ಇಂಥಹುದೇ ಒಂದು ಸಮಿತಿಯ ಸ್ಥಾಪನೆ ಆಗಬೇಕೆಂದು ನಟ-ನಟಿಯರು ಒತ್ತಾಯಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸಹ ಕೇರಳ ಮಾದರಿಯಲ್ಲಿ ಸಮಿತಿಯೊಂದರ ರಚನೆ ಆಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ನಟ ಚೇತನ್ ಅಹಿಂಸಾ, ಶ್ರುತಿ ಹರಿಹರನ್, ನೀತು ಶೆಟ್ಟಿ, ಇನ್ನೂ ಹಲವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಸಿದ್ದರಾಮಯ್ಯ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದಿದ್ದಾರೆ. ಕನ್ನಡದ ಬಳಿಕ ಈಗ ನೆರೆಯ ತೆಲುಗು ಚಿತ್ರರಂಗದಲ್ಲಿ ಸಹ ಇಂಥಹುದೇ ಬೇಡಿಕೆ ಶುರುವಾಗಿದೆ.

ತೆಲುಗು ಚಿತ್ರರಂಗದ ಪವರ್​ಫುಲ್ ಕಲಾವಿದರ ಸಂಘ ‘ಮಾ’ ಅಧ್ಯಕ್ಷ ಮಂಚು ವಿಷ್ಣು ಹೀಗೊಂದು ಬೇಡಿಕೆಯನ್ನು ಚಿತ್ರರಂಗದ ಪರವಾಗಿ ಸರ್ಕಾರದ ಮುಂದಿರಿಸಿದ್ದಾರೆ. ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಮಂಚು ವಿಷ್ಣು, ‘ಚಿತ್ರರಂಗದಲ್ಲಿ ಮಹಿಳೆಯರಿಗೆ ಸುರಕ್ಷತೆ, ಭದ್ರತೆ ಒದಿಗಿಸುವುದು ಅತ್ಯಂತ ಅವಶ್ಯಕವಾಗಿದೆ. ತೆರೆ ಮುಂದೆ ಕಾಣಿಸುವವರಿಗಷ್ಟೆ ಅಲ್ಲದೆ ತೆರೆಯ ಹಿಂದೆ ಕೆಲಸ ಮಾಡುವ ಮಹಿಳೆಯರ ಸುರಕ್ಷತೆ, ಭದ್ರತೆ ಬಗ್ಗೆ ಗಮನಹರಿಸುವುದು ಅಗತ್ಯವಾಗಿದೆ. ‘ಮಾ’ (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಪಾಲಿಗೆ ಮಹಿಳೆಯರ ಸುರಕ್ಷತೆ ಎನ್ನುವುದು ಮೊದಲ ಆದ್ಯತೆಯಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ:‘ಆನಂದ್​ ಆಡಿಯೋ’ ಪಾಲಾದ ‘ಫೈರ್ ಫ್ಲೈ’ ಹಾಡುಗಳು; ಚರಣ್ ರಾಜ್​ಗೆ ಹೆಚ್ಚಿದ ಬೇಡಿಕೆ

ಮುಂದುವರೆದು, ‘ಕಲಾವಿದರ ಸಂಘದ ಅಧ್ಯಕ್ಷನಾಗಿ, ತೆಲಂಗಾಣ ಸಿಎಂ ಬಳಿ, ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ ಕುರಿತಂತೆ ಅಧ್ಯಯನ ನಡೆಸಲು ಸಮಿತಿಯೊಂದನ್ನು ಸ್ಥಾಪಿಸುವಂತೆ ಅಧಿಕೃತವಾಗಿ ಮನವಿ ಮಾಡುತ್ತಿದ್ದೇನೆ. ಕಲಾವಿದರ ಸಂಘವು, ಮಹಿಳೆಯರ ಸುರಕ್ಷತೆ ಕುರಿತಂತೆ ಸದಾ ಮುಂದೆ ಇದ್ದು, ಕಾಲ ಕಾಲಕ್ಕೆ ಸಲಹೆಗಳನ್ನು, ನಿಯಮಗಳನ್ನು, ಮಾರ್ಗದರ್ಶನಗಳನ್ನು ಸ್ವೀಕರಿಸುತ್ತಲೇ ಬಂದಿದೆ’ ಎಂದಿದ್ದಾರೆ.

ಮಲಯಾಳಂನಲ್ಲಿ ಈಗಾಗಲೇ ಸಮಿತಿ ವರದಿ ಸಲ್ಲಿಸಿದೆ. ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಶುರುವಾಗಿದೆ. ಇದೀಗ ತೆಲುಗು ಚಿತ್ರರಂಗದಲ್ಲಿಯೂ ಸಹ ಬೇಡಿಕೆಗಳನ್ನು ಮಾಡಲಾಗುತ್ತಿದೆ. ತಮಿಳು ಚಿತ್ರರಂಗದಲ್ಲಿ ಇಂಥಹಾ ಬೇಡಿಕೆಗ ಬಗ್ಗೆ ವರದಿ ಆಗಿಲ್ಲವಾದರೂ ಶೀಘ್ರವೇ ಅಲ್ಲಿಯೂ ಸಹ ಕೆಲ ನಟಿಯರು ಸರ್ಕಾರವನ್ನು ಒತ್ತಾಯಿಸುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ