ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ಹಾಗೂ ಇತರೆ ದೌರ್ಜನ್ಯಗಳನ್ನು ಗುರುತಿಸಿ ಅವುಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲು ಸಮಿತಿಯೊಂದನ್ನು ರಚಿಸಬೇಕೆಂಬ ಒತ್ತಾಯ ಇತ್ತೀಚೆಗೆ ಕೇಳಿ ಬಂದಿದೆ. ನಟ ಚೇತನ್ ಅಹಿಂಸಾ ಹಾಗೂ ಇತರೆ ಕೆಲವು ನಟ-ನಟಿಯರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ಆಡಿದ್ದು, ಸಮಿತಿಯೊಂದರ ರಚನೆಗೆ ಒತ್ತಾಯಿಸಿದ್ದಾರೆ. ಮನವಿ ಪತ್ರಕ್ಕೆ ಕನ್ನಡ ಚಿತ್ರರಂಗದ ಸುಮಾರು 150ಕ್ಕೂ ಹೆಚ್ಚು ಕಲಾವಿದರು, ಪತ್ರಕರ್ತರು, ಬರಹಗಾರರು ಸಹಿ ಹಾಕಿದ್ದಾರೆ.
ಈ ಬಗ್ಗೆ ಫಿಲಂ ಚೇಂಬರ್ ಆಫ್ ಕಾಮರ್ಸ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಚೇತನ್ ಯಾರು ಎಂದು ನನಗೆ ಗೊತ್ತಿಲ್ಲವೆಂದು ನಿನ್ನೆ ಅಧ್ಯಕ್ಷ ಎನ್ಎಂ ಸುರೇಶ್ ಹೇಳಿದ್ದರು. ಆದರೆ ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಈ ವಿಷಯವಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದೆ. ಮಹಿಳಾ ಆಯೋಗದಿಂದ, ಫಿಲಂ ಚೇಂಬರ್ಗೆ ಪತ್ರ ಬಂದಿರುವ ಕಾರಣ ಸಭೆಯನ್ನು ಕರೆಯಲು ಫಿಲಂ ಚೇಂಬರ್ ಮುಂದಾಗಿದೆ.
ಚಿತ್ರರಂಗದ ನಟಿಯರನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲಿ ಸಭೆ ನಡೆಸಿ, ಸಮಿತಿ ರಚಿಸಲು ಒತ್ತಾಯಿಸುವಂತೆ ತೀರ್ಮಾನ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಸಭೆಯನ್ನು ಸೆಪ್ಟೆಂಬರ್ 13ರ ಒಳಗೆ ನಡೆಸುವಂತೆ ಮಹಿಳಾ ಆಯೋಗ ಸೂಚಿಸಿರುವ ಕಾರಣದಿಂದಾಗಿ ಇಂದು ಫಿಲಂ ಚೇಂಬರ್ ಪದಾಧಿಕಾರಿಗಳು ಸಭೆ ಕರೆದಿದ್ದು ಆಂತರಿಕ ಸಭೆ ನಡೆಸಲಿದ್ದಾರೆ. ಅದಾದ ಬಳಿಕ ಇನ್ನು ಕೆಲವೇ ದಿನಗಳಲ್ಲಿ ನಟಿಯರನ್ನು ಕರೆದು ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ:‘ಆನಂದ್ ಆಡಿಯೋ’ ಪಾಲಾದ ‘ಫೈರ್ ಫ್ಲೈ’ ಹಾಡುಗಳು; ಚರಣ್ ರಾಜ್ಗೆ ಹೆಚ್ಚಿದ ಬೇಡಿಕೆ
ನಿನ್ನೆಯಷ್ಟೆ ಈ ಬಗ್ಗೆ ಮಾತನಾಡಿದ್ದ ಅಧ್ಯಕ್ಷ ಎನ್ಎಂ ಸುರೇಶ್, ‘ನಮಗೆ ಯಾವುದೇ ದೌರ್ಜನ್ಯದ ದೂರು ಬಂದಿಲ್ಲ, ದೂರು ಬಂದರೆ ನಾವು ಪರಿಶೀಲನೆ ನಡೆಸುತ್ತೇವೆ’ ಎಂದಿದ್ದರು. ಅಲ್ಲದೆ ಸಮಿತಿ ರಚನೆಗೆ ಒತ್ತಾಯಿಸುವ ಪರ ಹೇಳಿಕೆ ನೀಡಿರಲಿಲ್ಲ. ಈಗ ಮಹಿಳಾ ಆಯೋಗದ ಸೂಚನೆಯಿಂದಾಗಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಇಕ್ಕಟ್ಟಿಗೆ ಫಿಲಂ ಚೇಂಬರ್ ಸಿಲುಕಿದಂತಿದೆ.
ಕೇರಳ ಸರ್ಕಾರ, ಮಲಯಾಳಂ ಚಿತ್ರರಂಗದಲ್ಲಾಗುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯದ ಅಧ್ಯಯನಕ್ಕೆ ಹೇಮಾ ಸಮಿತಿ ರಚಿಸಿತ್ತು, ಈ ಸಮಿತಿ ನೀಡಿರುವ ವರದಿ ಚಿತ್ರರಂಗದಲ್ಲಿ ಅಲ್ಲೋಕ ಕಲ್ಲೋಲ ಎಬ್ಬಿಸಿದೆ. ಕೆಲವು ಹೆಸರಾಂತ ನಟ, ನಿರ್ದೇಶಕರು, ನಿರ್ಮಾಪಕರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಗಳು ದಾಖಲಾಗಿವೆ. ಈಗ ಇದೇ ಮಾದರಿಯ ಸಮಿತಿಯೊಂದನ್ನು ಕನ್ನಡ ಚಿತ್ರರಂಗದಲ್ಲಿಯೂ ರಚಿಸಬೇಕೆಂದು ಸ್ಥಳೀಯ ನಟ-ನಟಿಯರು ಒತ್ತಾಯಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ