ಡಾ. ರಾಜ್​ಕುಮಾರ್ ಮೇಲಿನ ಅಭಿಮಾನಕ್ಕೆ ಅಮೆರಿಕದಲ್ಲಿ ಕನ್ನಡ ಗೀತೆ ಹಾಡಿದ ಮೋಹನ್​ಲಾಲ್

ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ‘ಎಂದೆಂದೂ ನಿನ್ನನು ಮರೆತು..’ ಗೀತೆಯನ್ನು ಹಾಡಿದ್ದಾರೆ. ಅಪ್ಪಟ ಕನ್ನಡಿಗನ ರೀತಿ ಅವರು ಹಾಡಿರುವುದು ಕಂಡು ಎಲ್ಲರಿಗೂ ಅಚ್ಚರಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಗೀತೆಯನ್ನು ಕಂಡು ಡಾ. ರಾಜ್​​ಕುಮಾರ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಡಾ. ರಾಜ್​ಕುಮಾರ್ ಮೇಲಿನ ಅಭಿಮಾನಕ್ಕೆ ಅಮೆರಿಕದಲ್ಲಿ ಕನ್ನಡ ಗೀತೆ ಹಾಡಿದ ಮೋಹನ್​ಲಾಲ್
Mohanlal, Dr Rajkumar, Manjula

Updated on: Apr 23, 2026 | 10:16 PM

ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್​ಲಾಲ್ (Mohanlal) ಅವರಿಗೆ ಕನ್ನಡ ಸಿನಿಮಾಗಳ ಬಗ್ಗೆ ಒಲವು ಇದೆ. ಅದರಲ್ಲೂ ಡಾ. ರಾಜ್​ಕುಮಾರ್ (Dr Rajkumar) ಸಿನಿಮಾಗಳ ಬಗ್ಗೆ ವಿಶೇಷ ಪ್ರೀತಿ ಇದೆ. ಕನ್ನಡದ ಹಾಡುಗಳನ್ನು ಕೇಳಿ ಅವರು ಎಂಜಾಯ್ ಮಾಡುತ್ತಾರೆ. ಈ ಮೊದಲು ಅವರು ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ..’ (Endendu Ninnanu Maretu) ಹಾಡನ್ನು ನೋಡುತ್ತಾ ಆನಂದಿಸಿದ ವಿಡಿಯೋ ವೈರಲ್ ಆಗಿತ್ತು. ಈಗ ಅವರು ಅದೇ ಹಾಡನ್ನು ವೇದಿಕೆಯಲ್ಲಿ ಹಾಡಿರುವುದು ಗಮನ ಸೆಳೆದಿದೆ. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋಹನ್​ಲಾಲ್ ಅವರು ಭಾಗಿ ಆಗಿದ್ದಾರೆ. ವೇದಿಕೆಯಲ್ಲಿ ಅವರು ಲೈವ್ ಆಗಿ ಹಾಡು ಹೇಳಿದ್ದಾರೆ. ಡಾ. ರಾಜ್​ಕುಮಾರ್, ಮಂಜುಳಾ ನಟನೆಯ ‘ಎರಡು ಕನಸು’ ಸಿನಿಮಾದ ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ’ ಗೀತೆಯನ್ನು ಅವರು ಹಾಡಿದ್ದಾರೆ. ಅಪ್ಪಟ ಕನ್ನಡಿಗನ ರೀತಿ ಅವರು ಹಾಡು ಹೇಳಿದ್ದಾರೆ.

ಏಪ್ರಿಲ್ 24ರಂದು ಡಾ. ರಾಜ್​ಕುಮಾರ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿಯೇ ಮೋಹನ್​ಲಾಲ್ ಅವರ ಈ ವಿಡಿಯೋ ವೈರಲ್ ಆಗಿರುವುದು ವಿಶೇಷ. ಅಣ್ಣಾವ್ರ ಬಗ್ಗೆ ಮೋಹನ್​ಲಾಲ್ ಅವರಿಗೂ ಎಷ್ಟು ಅಭಿಮಾನ ಇದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ನಿಜಕ್ಕೂ ಅಚ್ಚರಿ ಆಯಿತು’ ಎಂದು ಅನೇಕರು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ:

ರಾಜನ್-ನಾಗೇಂದ್ರ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ‘ಎಂದೆಂದೂ ನಿನ್ನನು ಮರೆತು..’ ಹಾಡು ಇಂದಿಗೂ ಎವರ್​ಗ್ರೀನ್ ಆಗಿ ಉಳಿದುಕೊಂಡಿದೆ. ಪಿ.ಬಿ. ಶ್ರೀನಿವಾಸ್ ಮತ್ತು ವಾಣಿ ಜಯರಾಮ್ ಅವರು ಈ ಗೀತೆಗೆ ಧ್ವನಿ ನೀಡಿದ್ದರು. 1974ರಲ್ಲಿ ‘ಎರಡು ಕನಸು’ ಸಿನಿಮಾ ಬಿಡುಗಡೆ ಆಗಿತ್ತು. 50 ವರ್ಷ ಕಳೆದರೂ ಈ ಹಾಡು ಹಳೆಯದಾಗಿಲ್ಲ.

ಇದನ್ನೂ ಓದಿ: ದಾದಾಸಾಹೇಬ್ ಫಾಲ್ಕೆ ಗೌರವ ಪಡೆದ ಮಲಯಾಳಂ ನಟ ಮೋಹನ್​ಲಾಲ್​

ವಿಶೇಷವಾಗಿ ಮೋಹನ್​ಲಾಲ್ ಅವರಿಗೆ ‘ಎಂದೆಂದೂ ನಿನ್ನನು ಮರೆತು..’ ಹಾಡು ಬಹಳ ಇಷ್ಟ. ಈ ಮೊದಲು ಕೂಡ ಅವರ ವಿಡಿಯೋ ವೈರಲ್ ಆಗಿತ್ತು. ಈ ಗೀತೆಯನ್ನು ನೋಡುತ್ತಾ ಅವರು ಎಂಜಾಯ್ ಮಾಡಿದ್ದನ್ನು ಕಂಡು ಡಾ. ರಾಜ್​ಕುಮಾರ್ ಅಭಿಮಾನಿಗಳು ಸಂತಸಪಟ್ಟಿದ್ದರು. ಈ ಬಾರಿಯಂತೂ ಅವರು ಸಾಹಿತ್ಯವನ್ನು ನೋಡದೆಯೇ ಪಕ್ಕಾ ಕನ್ನಡಿಗನಂತೆ ಹಾಡಿದ್ದಾರೆ. ಅವರ ಕಂಠದಲ್ಲಿ ಈ ಗೀತೆಯನ್ನು ಕೇಳಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us