‘418’ ವಿಮರ್ಶೆ: ಸೈಕಲಾಜಿಕಲ್ ಥ್ರಿಲ್ಲರ್ ಜೊತೆ ಹಾರರ್ ಅನುಭವ ನೀಡುವ ಸಿನಿಮಾ

‘418’ ವಿಮರ್ಶೆ: ಸೈಕಲಾಜಿಕಲ್ ಥ್ರಿಲ್ಲರ್ ಜೊತೆ ಹಾರರ್ ಅನುಭವ ನೀಡುವ ಸಿನಿಮಾ
418 Movie Poster
Image Credit source: Mythri Movie Makers

418

A
  • Time - 148 Minutes
  • Released - October 23, 2026
  • Language - Telugu
  • Genre - Horror, Thriller
Cast - ಚೈತ್ರಾ ಆಚಾರ್, ಚರಣ್ ಲಕ್ಕರಾಜು, ಪ್ರೀತಿ ಪಗಡಾಲ, ರಮೇಶ್ ಇಂದಿರಾ, ಸೂರ್ಯ ರಾಜ್, ಶ್ರೀ ವೈಷ್ಣವ್ ಮುಂತಾದವರು.
Director - ಕೀರ್ತನ್ ನಾಡಗೌಡ
3
Critic's Rating

Updated on: Oct 23, 2026 | 3:32 PM

ಹಾರರ್ ಸಿನಿಮಾಗಳಿಗೆ ಪ್ರತ್ಯೇಕವಾದ ಪ್ರೇಕ್ಷಕರ ವರ್ಗವಿದೆ. ಅಂಥ ಪ್ರೇಕ್ಷಕರಿಗಾಗಿ ಈ ವಾರ (ಅಕ್ಟೋಬರ್ 23) ‘418’ ಸಿನಿಮಾ ಬಿಡುಗಡೆ ಆಗಿದೆ. ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರು ಈ ಸಿನಿಮಾವನ್ನು ಅರ್ಪಿಸಿದ್ದಾರೆ. ಅವರ ಜೊತೆ ಕೆಲಸ ಮಾಡಿ ಪಳಗಿರುವ ಕೀರ್ತನ್ ನಾಡಗೌಡ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇದು ಮೂಲತಃ ತೆಲುಗು ಸಿನಿಮಾ ಆಗಿದ್ದರೂ ಕೂಡ ಕನ್ನಡದ ಸೊಗಡನ್ನು ಹೊಂದಿದೆ. ಕನ್ನಡದ ನಟಿ ಚೈತ್ರಾ ಆಚಾರ್ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ‘418’ ಸಿನಿಮಾದ ವಿಮರ್ಶೆ ಇಲ್ಲಿದೆ ಓದಿ..

ಮೊದಲಿಗೆ ‘418’ ಸಿನಿಮಾದ ಕಥೆಯನ್ನು ಗಮನಿಸಿದರೆ ಈಗಾಗಲೇ ಬಂದು ಹೋಗಿರುವ ಹಲವು ಹಾರರ್ ಸಿನಿಮಾಗಳ ಎಳೆಯನ್ನೇ ಈ ಚಿತ್ರ ಹೊಂದಿದೆ. ಹಲವು ವರ್ಷಗಳಿಂದ ಲಾಕ್ ಆಗಿರುವ ಒಂದು ರೂಮ್. ಆ ರೂಮಿನ ಬಗ್ಗೆ ಹರಿದಾಡುತ್ತಿರುವ ಭಯಾನಕ ಕಥೆಗಳು. ಆ ರೂಮ್ ಬಾಗಿಲು ತೆರೆದರೆ ಅನಾಹುತ ಆಗುತ್ತದೆ ಎಂಬ ಭಯ. ಒಂದು ದಿನ ಆ ರೂಮಿನ ಬಾಗಿಲು ತೆಗೆಯುವ ಸಂದರ್ಭ ಬರುತ್ತದೆ. ಆಗ ಫ್ಲ್ಯಾಶ್ ಬ್ಯಾಕ್ ಕಹಾನಿ ತೆರೆದುಕೊಳ್ಳುತ್ತದೆ. ಈ ರೀತಿಯ ಎಳೆಯನ್ನು ಇಟ್ಟುಕೊಂಡು ‘418’ ಸಿನಿಮಾ ಮಾಡಲಾಗಿದೆ.

ಫ್ಲ್ಯಾಶ್ ಬ್ಯಾಕ್ ಕಥೆ ಶುರುವಾಗುವ ತನಕ ‘418’ ಚಿತ್ರ ಸಾಧಾರಣ ಎನಿಸಿಕೊಳ್ಳುತ್ತದೆ. ಆದರೆ ಫ್ಲ್ಯಾಶ್ ಬ್ಯಾಕ್ ಶುರುವಾದಾಗ ಬೇರೆಯದೇ ಫೀಲ್ ನೀಡುತ್ತದೆ. ನಟಿ ಚೈತ್ರಾ ಆಚಾರ್ ಅವರ ಪಾತ್ರವೇ ಈ ಸಿನಿಮಾದಲ್ಲಿ ಮುಖ್ಯವಾಗಿದ್ದರೂ ಕೂಡ ಆ ಪಾತ್ರ ಕಾಣಿಸಿಕೊಳ್ಳುವುದು ಮಧ್ಯಂತರ ಹಾಗೂ ಆ ಬಳಿಕ ಮಾತ್ರ! ಆರಂಭದಲ್ಲಿ ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಎನಿಸುತ್ತದೆ. ಕ್ಲೈಮ್ಯಾಕ್ಸ್ ತಲುಪುವಾಗ ಅಪ್ಪಟ ಹಾರರ್ ಅನುಭವ ನೀಡುತ್ತದೆ.

ಒಂದು ಮೆಡಿಕಲ್ ಕಾಲೇಜ್ ಕ್ಯಾಂಪಸ್​ನಲ್ಲಿ ‘418’ ಸಿನಿಮಾದ ಕಥೆ ಸಾಗುತ್ತದೆ. ಆ ಕಾಲೇಜಿನ ಹುಡುಗರ ಹಾಸ್ಟೆಲ್​ನಲ್ಲಿ 418ನೇ ಸಂಖ್ಯೆಯ ರೂಮ್ ಯಾವಾಗಲೂ ಬಂದ್ ಆಗಿರುತ್ತದೆ. ಅದರ ಹತ್ತಿರ ಹೋಗಲು ಎಲ್ಲರೂ ಭಯಪಡುತ್ತಾರೆ. ಅದರ ಪಕ್ಕದ ರೂಮಿನಲ್ಲಿ ಇರುವ ವಿದ್ಯಾರ್ಥಿಯೊಬ್ಬನಿಗೆ ವಿಚಿತ್ರ ಅನುಭವಗಳು ಆಗಲು ಶುರುವಾಗುತ್ತದೆ. ಅದಕ್ಕೆ ಕಾರಣ ಏನು ಎಂಬುದನ್ನು ಹುಡುಕಿಕೊಂಡು ಹೊರಟಾಗ ಸಿನಿಮಾದ ಅಸಲಿ ಕಥೆ ತೆರೆದುಕೊಳ್ಳುತ್ತದೆ.

ನಿರ್ದೇಶಕ ಕೀರ್ತನ್ ನಾಡಗೌಡ ಅವರು ಮೊದಲಾರ್ಧವನ್ನು ಯಾವುದೇ ಅವಸರ ಇಲ್ಲದಂತೆ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಕಥೆ ಬಹಳ ನಿಧಾನಕ್ಕೆ ಸಾಗಿದಂತೆ ಭಾಸವಾಗುತ್ತದೆ. ಅಲ್ಲದೇ, ಹಾರರ್ ಪ್ರಿಯರು ಬಯಸುವ ಭಯಾನಕ ದೃಶ್ಯಗಳು ಮೊದಲಾರ್ಧದಲ್ಲಿ ಕಾಣಸಿಗುವುದಿಲ್ಲ. ದ್ವಿತೀಯಾರ್ಧದಲ್ಲಿ ಹಾರರ್ ದೃಶ್ಯಗಳು ಎದುರಾಗುತ್ತದೆ. ಹಾಗಾಗಿ ಮೊದಲಾರ್ಧವನ್ನು ಸ್ವಲ್ಪ ತಾಳ್ಮೆಯಿಂದ ವೀಕ್ಷಿಸಿದರೆ, ದ್ವಿತೀಯಾರ್ಧವನ್ನು ಎಂಜಾಯ್ ಮಾಡಬಹುದಾಗಿದೆ. ಈ ಸಿನಿಮಾಗೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಿದೆ. ಭಯಾನಕ ಎನಿಸುವ ರಕ್ತಪಾತದ ದೃಶ್ಯಗಳೇ ಅದಕ್ಕೆ ಕಾರಣ.

ನಟಿ ಚೈತ್ರಾ ಆಚಾರ್ ಅವರು ಕನ್ನಡ ಮಾತ್ರವಲ್ಲದೇ ಪರಭಾಷೆಯ ಚಿತ್ರರಂಗದಲ್ಲೂ ಬೇಡಿಕೆ ಹೊಂದಿದ್ದಾರೆ. ಅವರು ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ವಿಶೇಷವಾಗಿರುತ್ತವೆ. ‘418’ ಚಿತ್ರ ಕೂಡ ಅವರ ಸಿನಿಖಾತೆಯಲ್ಲಿ ವಿಶೇಷ ಪ್ರಯತ್ನವಾಗಿ ನಿಲ್ಲುತ್ತದೆ. ಯಕ್ಷಗಾನ ಕಲಾವಿದೆಯಾಗಿ, ಗರ್ಭಿಣಿ ಮಹಿಳೆಯಾಗಿ, ದೆವ್ವವಾಗಿ ಅವರು ತಮ್ಮ ಅಭಿನಯ ಸಾಮರ್ಥ್ಯವನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ.

ಇದನ್ನೂ ಓದಿ: ಟ್ರೇಲರ್ ಮೂಲಕ ಭಯ ಹುಟ್ಟಿಸಿದ ‘418’ ಹಾರರ್ ಸಿನಿಮಾ ಟ್ರೇಲರ್

ಪ್ರತಿಷ್ಠಿತ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸಿದೆ. ಹಾರರ್ ಶೈಲಿಯ ಸಿನಿಮಾಗೆ ಬೇಕಾದ ಎಲ್ಲ ಅದ್ದೂರಿತನ ಈ ಚಿತ್ರದಲ್ಲಿದೆ. ತಾಂತ್ರಿಕವಾಗಿಯೂ ಈ ಸಿನಿಮಾ ಶ್ರೀಮಂತವಾಗಿದೆ. ಆದರೆ ಸಿನಿಮಾದ ಕಥೆಯಲ್ಲಿ ಹೇಳಿಕೊಳ್ಳುವಷ್ಟು ಹೊಸತನ ಕಾಣಿಸದು. ವಾಮಾಚಾರ, ಸೇಡು ಇತ್ಯಾದಿ ಅಂಶಗಳ ಬದಲು ಅವುಗಳಿಂದಾಚೆಗೆ ಇನ್ನೇನಾದರೂ ಇದ್ದಿದ್ದರೆ ಆಕರ್ಷಕ ಎನಿಸಿಕೊಳ್ಳಬಹುದಿತ್ತು. ಇನ್ನು, ಚಿತ್ರದ ಕ್ಲೈಮ್ಯಾಕ್ಸ್ ಕೊಂಚ ಗೊಂದಲಕಾರಿಯಾಗಿ ಕೂಡ ಇದೆ. ಇವುಗಳ ಬಗ್ಗೆ ನಿರ್ದೇಶಕರು ಗಮನ ಹರಿಸಿದ್ದರೆ ‘418’ ಚಿತ್ರ ಹೆಚ್ಚು ಅಂಕ ಪಡೆಯುತ್ತಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us