Ayogya 2 Review: ಮುಗ್ಗರಿಸಿದ ‘ಅಯೋಗ್ಯ 2’; ನಿರೀಕ್ಷೆ ಇಟ್ಟುಕೊಂಡವರಿಗೆ ವಿಪರೀತ ನಿರಾಸೆ

Ayogya 2 Review: ಮುಗ್ಗರಿಸಿದ ‘ಅಯೋಗ್ಯ 2’; ನಿರೀಕ್ಷೆ ಇಟ್ಟುಕೊಂಡವರಿಗೆ ವಿಪರೀತ ನಿರಾಸೆ
Ayogya 2 Film Review
ಅಯೋಗ್ಯ 2
UA
  • Time - 152 Minutes
  • Released - August 07, 2026
  • Language - Kannada
  • Genre - Action, Drama, Romantic
Cast - ಸತೀಶ್ ನೀನಾಸಂ, ರಚಿತಾ ರಾಮ್, ರವಿಶಂಕರ್ ಪಿ., ಸಾಧು ಕೋಕಿಲ, ಗಿರೀಶ್ ಶಿವಣ್ಣ, ಶಿವರಾಜ್ ಕೆ.ಆರ್. ಪೇಟೆ, ದೇವರಾಜ್, ತಬಲಾ ನಾಣಿ, ಸುಂದರ್ ರಾಜ್, ರವಿಚಂದ್ರನ್ ಮುಂತಾದವರು.
Director - ಎಸ್. ಮಹೇಶ್ ಕುಮಾರ್.
2
Critic's Rating

Updated on: Aug 07, 2026 | 3:43 PM

2018ರಲ್ಲಿ ‘ಅಯೋಗ್ಯ’ ಸಿನಿಮಾ ರಿಲೀಸ್ ಆಗಿ ಗಮನ ಸೆಳೆದಿತ್ತು. ಹಾಡುಗಳ ಮೂಲಕ ಸದ್ದು ಮಾಡಿದ್ದ ಆ ಸಿನಿಮಾಗೆ ಎಸ್. ಮಹೇಶ್ ಕುಮಾರ್ ಅವರು ನಿರ್ದೇಶನ ಮಾಡಿದ್ದರು. ಸತೀಶ್ ನೀನಾಸಂ (Sathish Ninasam), ರಚಿತಾ ರಾಮ್, ಪಿ. ರವಿಶಂಕರ್, ತಬಲಾ ನಾಣಿ, ಅರುಣಾ ಬಾಲರಾಜ್, ಸುಂದರ್ ರಾಜ್ ಮುಂತಾದವರು ನಟಿಸಿದ್ದ ಆ ಸಿನಿಮಾಗೆ ಈಗ ಸೀಕ್ವೆಲ್ ಬಂದಿದೆ. ಬಹುತೇಕ ಅದೇ ಪಾತ್ರವರ್ಗವನ್ನು ಇಟ್ಟುಕೊಂಡು ನಿರ್ದೇಶಕ ಮಹೇಶ್ ಕುಮಾರ್ ಅವರು ‘ಅಯೋಗ್ಯ 2’ ಸಿನಿಮಾ ಮಾಡಿದ್ದಾರೆ. ಆಗಸ್ಟ್ 7ರಂದು ಬಿಡುಗಡೆ ಆಗಿರುವ ಈ ಚಿತ್ರದ ವಿಮರ್ಶೆ (Ayogya 2 Film Review) ಇಲ್ಲಿದೆ..

ಯಾವುದೇ ಸಿನಿಮಾಗೆ ಸೀಕ್ವೆಲ್ ಬರುತ್ತದೆ ಎಂದಾಗ ಪ್ರೇಕ್ಷಕರಿಗೆ ನಿರೀಕ್ಷೆ ಹುಟ್ಟುವುದು ಸಹಜ. ಮೊದಲ ಪಾರ್ಟ್‌ಗಿಂತ ಹೆಚ್ಚಿನದ್ದು ಎರಡನೇ ಪಾರ್ಟ್‌ನಲ್ಲಿ ನೋಡಲು ಜನರು ಇಷ್ಟಪಡುತ್ತಾರೆ. ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆದಂತಹ ಕಥೆ, ಮೇಕಿಂಗ್ ಇರಲಿ ಎಂದು ಪ್ರೇಕ್ಷಕರು ನಿರೀಕ್ಷಿಸುತ್ತಾರೆ. ಆದರೆ ‘ಅಯೋಗ್ಯ 2’ ಸಿನಿಮಾ ಈ ವಿಚಾರದಲ್ಲಿ ಎಡವಿದೆ. ಮೊದಲ ಪಾರ್ಟ್‌ನಲ್ಲಿ ಸರಳವಾದ ಒಂದು ಕಥೆ ಇತ್ತು. ಗ್ರಾಮ‌ ನೈರ್ಮಲ್ಯ ಹಿನ್ನೆಲೆಯಲ್ಲಿ ಆ ಕಥೆಯನ್ನು ತೋರಿಸಲಾಗಿತ್ತು. ಇದೇ ಕಥೆಯ ಮುಂದುವರಿದ ಭಾಗ ‘ಅಯೋಗ್ಯ 2’ ಚಿತ್ರದಲ್ಲಿದೆ. ಆದರೆ ಈ ಬಾರಿ ಸೀಕ್ವೆಲ್ ಸಲುವಾಗಿ ಕಥೆಯನ್ನು ಕಷ್ಟಪಟ್ಟು ಎಳೆದಾಡಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ.

ಶುರುವಿನಲ್ಲೇ ಪ್ರೇಕ್ಷಕರಿಗೆ ನಿರಾಸೆ:

ಆರಂಭದಲ್ಲೇ ಹೀರೋ ಪಾತ್ರಕ್ಕೆ ವಿಪರೀತ ಬಿಲ್ಡಪ್ ನೀಡಲಾಗಿದೆ. ಅದಕ್ಕಾಗಿ ಒಂದು ಫೈಟ್ ಹಾಗೂ ಹಾಡನ್ನು ಮೀಸಲಿಡಲಾಗಿದೆ. ಮೊದಲ ದೃಶ್ಯವು ‘ರೆಬಲ್ ಸ್ಟಾರ್’ ಅಂಬರೀಷ್ ಅಭಿಮಾನಿಗಳನ್ನು ಓಲೈಸುವ ಪ್ರಯತ್ನವೇ ಹೊರತು ಬೇರೇನೂ ಅಲ್ಲ. ನಂತರದ ದೃಶ್ಯಗಳಲ್ಲಾದರೂ ಏನಾದರೂ ಗಟ್ಟಿಯಾದ ಕಥಾಹಂದರ ಸಿಗುತ್ತದೆ ಎಂದುಕೊಂಡರೆ ಆಗಲೂ ಪ್ರೇಕ್ಷಕರಿಗೆ ನಿರಾಸೆ ಎದುರಾಗುತ್ತದೆ. ಸಿನಿಮಾ ಶುರುವಾಗಿ ಅರ್ಧ ಗಂಟೆ ಕಳೆದರೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ‘ಅಯೋಗ್ಯ 2’ ವಿಫಲವಾಗುತ್ತದೆ.

ಕೈಕೊಟ್ಟ ಕಾಮಿಡಿ ದೃಶ್ಯಗಳು:

ಸತೀಶ್ ಅವರ ಸಿನಿಮಾದಲ್ಲಿ ಜನರು ಕಾಮಿಡಿ ಇಷ್ಟಪಡುತ್ತಾರೆ. ಈ ಸಿನಿಮಾದಲ್ಲಿ ಸತೀಶ್ ಜೊತೆ ಗಿರೀಶ್ ಶಿವಣ್ಣ, ಶಿವರಾಜ್ ಕೆ.ಆರ್. ಪೇಟೆ, ಮಂಜು ಪಾವಗಡ ಕೂಡ ಸಾಥ್ ನೀಡಿದ್ದಾರೆ. ಆದರೂ ಕಾಮಿಡಿ ದೃಶ್ಯಗಳು ಉತ್ತಮವಾಗಿ ಮೂಡಿಬಂದಿಲ್ಲ. ಕೆಲವು ದೃಶ್ಯಗಳಂತೂ ನಗು ಉಕ್ಕಿಸುವುದಕ್ಕಿಂತಲೂ ಕಿರಿಕಿರಿ ಉಂಟುಮಾಡುವುದೇ ಜಾಸ್ತಿ ಆಗಿದೆ. ಹಾಸ್ಯದ ಹೆಸರಿನಲ್ಲಿ ಕೆಲವು ದೃಶ್ಯಗಳು ಸಭ್ಯತೆಯ ಗಡಿ ಮೀರಿವೆ. ಡಬಲ್ ಮೀನಿಂಗ್ ಸಂಭಾಷಣೆಗಳು ಚಿತ್ರದ ಘನತೆಯನ್ನು ತಗ್ಗಿಸಿವೆ.

ಕಥೆಗೆ ಹೊರೆಯಾದ ಹಾಡುಗಳು:

‘ಅಯೋಗ್ಯ 2’ ಸಿನಿಮಾದೊಳಗೆ ಹಾಡುಗಳು ಒಂದು ರೀತಿಯ ಹೊರೆಯಂತೆ ಭಾಸವಾಗುತ್ತಿವೆ. ಅನಗತ್ಯವಾಗಿ ಕಥೆಯ ಹರಿವಿಗೆ ಈ ಹಾಡುಗಳು ಅಡ್ಡಗಾಲು ಹಾಕಿದಂತೆ ಆಗಿದೆ. ಅರ್ಜುನ್ ಜನ್ಯ ಅವರು ಸಂಗೀತ ನೀಡಿರುವ ಹಾಡುಗಳು ಬಿಡಿಬಿಡಿಯಾಗಿ ಕೇಳಲು ಪರವಾಗಿಲ್ಲ ಎನಿಸಿದರೂ ಕೂಡ ಸಿನಿಮಾ ಕಥೆಯೊಳಗೆ ನಿರ್ದೇಶಕರು ಅನಗತ್ಯವಾಗಿ ತುರುಕಿದಂತಿವೆ. ಕಥೆಯನ್ನು ಮುಂದುವರಿಸುವ ದೃಷ್ಟಿಯಿಂದ ಹಾಡುಗಳು ಪೂರಕವಾಗಿಲ್ಲ.

ರಚಿತಾ ರಾಮ್ ಅಭಿಮಾನಿಗಳಿಗೆ ಬೇಸರ:

ನಟಿ ರಚಿತಾ ರಾಮ್ ಅವರು ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಆದರೆ ‘ಅಯೋಗ್ಯ 2’ ಸಿನಿಮಾದಲ್ಲಿ ಅವರ ಪಾತ್ರವನ್ನು ನೋಡಿದರೆ ಅಭಿಮಾನಿಗಳಿಗೆ ಬೇಸರ ಆಗುವುದು ಖಚಿತ. ಇಡೀ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಇರುವ ಸಮಯಾವಕಾಶ ತುಂಬಾ ಕಡಿಮೆ. ಆರಂಭದಲ್ಲಿ ಎರಡು ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಅವರು ನಂತರ ಮಾಯವಾಗುತ್ತಾರೆ. ಮಧ್ಯಂತರದ ವೇಳೆಗೆ ಮತ್ತೆ ಪ್ರತ್ಯಕ್ಷ ಆಗುತ್ತಾರೆ. ಆದರೆ ಹೆಚ್ಚು ಡೈಲಾಗ್ ಇಲ್ಲ. ದ್ವಿತೀಯಾರ್ಧದಲ್ಲಿ ಕೂಡ ಅವರು ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಇದ್ದೂ ಇಲ್ಲದಂತಹ ಪಾತ್ರವನ್ನು ಅವರಿಗೆ ನೀಡಲಾಗಿದೆ.

ಇದನ್ನೂ ಓದಿ: Boss Movie Review: ಶಿವಸ್ವಾಮಿ ಕೊಲೆ ರಹಸ್ಯದ ಕಥೆ ‘ಬಾಸ್’ ಹೇಗಿದೆ? ಇಲ್ಲಿದೆ ವಿಮರ್ಶೆ

‘ಅಯೋಗ್ಯ 2’ ಚಿತ್ರದ ಕಥೆಯಲ್ಲಿ ಬಲವಿಲ್ಲ:

ಈ ಸಿನಿಮಾದ ಮಧ್ಯಂತರದ ವೇಳೆಗೆ ಒಂದು ಸಣ್ಣ ಟ್ವಿಸ್ಟ್ ಇದೆ ಎಂಬುದು ಬಿಟ್ಟರೆ ಉಳಿದಂತೆ ಹೆಚ್ಚೇನೂ ಇಲ್ಲ. ಇಡೀ ಸಿನಿಮಾದಲ್ಲಿ ಇರುವುದು ಆರಕ್ಕೆ ಏರದ ಮೂರಕ್ಕೆ ಇಳಿಯದ ಕಥೆ. ಸಿದ್ದೇಗೌಡ (ಸತೀಶ್) ವರ್ಸಸ್ ಬಚ್ಚೇಗೌಡ (ರವಿಶಂಕರ್) ನಡುವಿನ ಸವಕಲು ಜಗಳದ ವಿಷಯ ಬಿಟ್ಟು ಬೇರೆ ಏನೂ ಇಲ್ಲ. ಡೈಲಾಗ್​ಗಳಲ್ಲಿ ಪ್ರಾಸ ಜೋಡಿಸುವ ಪ್ರಯತ್ನ ಆಗಿದೆ ಅಷ್ಟೇ. ಇಡೀ ಸಿನಿಮಾದಲ್ಲಿ ಲಾಜಿಕ್ ಹುಡುಕುವಂತೆಯೇ ಇಲ್ಲ. ಲಾಜಿಕ್ ಮರೆತು ಕಾಮಿಡಿಯನ್ನಾದರೂ ಎಂಜಾಯ್ ಮಾಡೋಣ ಎಂದರೆ ಅಲ್ಲಿಯೂ ಪ್ರೇಕ್ಷಕರಿಗೆ ನಿರಾಸೆ.

ಸತೀಶ್ ಎಚ್ಚರಿಕೆ ವಹಿಸಬೇಕಿತ್ತು:

ಸತೀಶ್ ನೀನಾಸಂ ಅವರು ತಾನೊಬ್ಬ ಪ್ರತಿಭಾವಂತ ನಟ ಎಂಬುದನ್ನು ‘ಡ್ರಾಮಾ’, ‘ಲೂಸಿಯಾ’ ರೀತಿಯ ಸಿನಿಮಾಗಳ ಮೂಲಕ ದಶಕದ ಹಿಂದೆಯೇ ಸಾಬೀತು ಮಾಡಿದವರು. ಆದರೆ ‘ಅಯೋಗ್ಯ 2’ ರೀತಿಯ ಕಥೆ ಅವರಿಗೆ ಹಿನ್ನಡೆ ಉಂಟುಮಾಡಿದೆ. ಕಥೆಯ ಆಯ್ಕೆಯಲ್ಲಿ ಅವರು ಇನ್ನಾದರೂ ಎಚ್ಚರಿಕೆ ವಹಿಸಬೇಕಾಗಿದೆ. 2018ರಲ್ಲಿ ‘ಅಯೋಗ್ಯ’ ಸಿನಿಮಾ ಬಂದಾಗ ಆ ಕಥೆಯಲ್ಲಿ ಸ್ವಲ್ಪ ಹೊಸತನ ಇತ್ತು. ಆದರೆ ಸೀಕ್ವೆಲ್ ಕಥೆಯಲ್ಲಿ ಏನೂ ಸುಧಾರಣೆ ಕಂಡಿಲ್ಲ.

ಇದನ್ನೂ ಓದಿ: Karavali Movie Review: ಕಂಬಳದ ಓಟದ ಮಧ್ಯೆ ಸೇಡಿನ ಸುಳಿ; ಹೀಗಿದೆ ‘ಕರಾವಳಿ’

ಕಥೆ, ಚಿತ್ರಕಥೆ, ನಿರ್ದೇಶನವೇ ಮೈನಸ್:

ರವಿಶಂಕರ್, ಸತೀಶ್, ಅರುಣಾ ಬಾಲರಾಜ್, ಸಂದರ್ ರಾಜ್, ಸಾಧು ಕೋಕಿಲ, ತಬಲಾ ನಾಣಿ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆದರೂ ಕೂಡ ಕಥೆಯಲ್ಲಿ, ಚಿತ್ರಕಥೆಯಲ್ಲಿ, ನಿರ್ದೇಶನದಲ್ಲಿ ‘ಅಯೋಗ್ಯ 2’ ಸಿನಿಮಾ ಸಂಪೂರ್ಣವಾಗಿ ಎಡವಿದೆ. ಪ್ರತಿಭಾವಂತ ಕಲಾವಿದರಿದ್ದರೂ ಸಿನಿಮಾ ಇಷ್ಟು ಸಪ್ಪೆ ಆಗಿರುವುದಕ್ಕೆ ಅದೇ ಕಾರಣ. ಕ್ಲೈಮ್ಯಾಕ್ಸ್‌ನಲ್ಲಿ ರವಿಚಂದ್ರನ್ ಬಂದಾಗ ಸಿನಿಮಾದಲ್ಲಿ ಹೊಡಿಬಡಿ ಅಬ್ಬರ ಜಾಸ್ತಿ ಆಗಿದೆ ಎಂಬುದು ಬಿಟ್ಟರೆ ದೃಶ್ಯದ ತೂಕ ಹೆಚ್ಚಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us