ಸಿನಿಮಾ: ಗಂಧದ ಗುಡಿ
ನಿರ್ಮಾಣ: ಪುನೀತ್ ರಾಜ್ಕುಮಾರ್
ನಿರ್ದೇಶನ: ಅಮೋಘವರ್ಷ
ನಿರ್ಮಾಣ: ಪಿಆರ್ಕೆ ಪ್ರೊಡಕ್ಷನ್
ಪುನೀತ್ ರಾಜ್ಕುಮಾರ್ ಅವರು ಕಮರ್ಷಿಯಲ್ ಸಿನಿಮಾಗಳ ಮೂಲಕ ಗುರುತಿಸಿಕೊಂಡವರು. ಪ್ರತಿ ಸಿನಿಮಾದಲ್ಲಿ ನಾಲ್ಕು ಫೈಟ್, ಒಂದಷ್ಟು ಮಾಸ್ ಡೈಲಾಗ್ ಇದ್ದರೆ ಮಾತ್ರ ಅದು ಪುನೀತ್ ಸಿನಿಮಾ ಎಂಬ ಫೀಲ್ ಬರುತ್ತಿತ್ತು. ಅಂತಹ ಹೀರೋ ಡಾಕ್ಯುಮೆಂಟರಿ ಮಾಡುತ್ತಾರೆ ಎಂದರೆ ಒಂದು ಕುತೂಹಲ ಮೂಡೋದು ಸಹಜ. ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಕಾಡಿನ ಜತೆ ಸಾಕಷ್ಟು ಒಡನಾಟ ಇಟ್ಟುಕೊಂಡ ಅಮೋಘವರ್ಷ ಅವರ ಜತೆಗೂಡಿ ಪುನೀತ್ ‘ಗಂಧದ ಗುಡಿ’ ನಿರ್ಮಿಸಿದ್ದರು. ಸಾಕ್ಷ್ಯಚಿತ್ರದಲ್ಲಿ ಹೇಳುವಂತೆ ಇದು, ‘ಪುನೀತ್ ನಮಗಾಗಿ ಬಿಟ್ಟುಹೋದ ಮರೆಯಲಾಗದ ಕಥೆ’.
ಕಾಡು, ವನ್ಯ ಜೀವಿಗಳ ವಿಚಾರದಲ್ಲಿ ಕರ್ನಾಟಕ ಶ್ರೀಮಂತವಾಗಿದೆ. ಅದು ಎಷ್ಟು ಶ್ರೀಮಂತವಾಗಿದೆ, ಯಾವ ಭಾಗದಲ್ಲಿ ಏನಿದೆ ಎಂಬ ಬಗ್ಗೆ ಇಲ್ಲಿರುವವರಿಗೇ ಹೆಚ್ಚಿನ ಮಾಹಿತಿ ಇಲ್ಲ. ‘ಗಂಧದ ಗುಡಿ’ ಒಂದು ರೀತಿಯಲ್ಲಿ ಕರ್ನಾಟಕ ಅರಣ್ಯ ಸಂಪತ್ತಿನ ಕೈಪಿಡಿಯಂತೆ ಕಾಣುತ್ತದೆ. ಡಾಕ್ಯುಮೆಂಟರಿ ಉದ್ದಕ್ಕೂ ವನ್ಯ ಜಗತ್ತಿನ ಹಲವು ಅಚ್ಚರಿಗಳು, ಕಾಡಿನ ಜತೆ ಮಾನವ ಹಾಗೂ ಪ್ರಾಣಿಗಳ ನಂಟಿನ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ.
ನಾಗರಹೊಳೆಯಿಂದ ಆರಂಭವಾಗುವ ಪುನೀತ್ ಹಾಗೂ ಅಮೋಘವರ್ಷ ಪಯಣ ರಾಜ್ಕುಮಾರ್ ಹುಟ್ಟೂರಾದ ಗಾಜನೂರು, ಬಿಆರ್ಟಿ ಟೈಗರ್ ರಿಸರ್ವ್, ಸಕ್ಕರೆ ಬೈಲು, ಕರಾವಳಿಯ ನೇತ್ರಾಣಿ, ಜೋಗ ಜಲಪಾತ, ಆಗುಂಬೆ, ಉತ್ತರ ಕರ್ನಾಟಕದ ವಿಜಯನಗರ, ತುಂಗಭದ್ರಾ ನದಿಯ ಕಡೆಗಳಲ್ಲಿ ಸಾಗಿ ಕಾಳಿ ನದಿಯಲ್ಲಿ ಪೂರ್ಣಗೊಳ್ಳುತ್ತದೆ. ಕರ್ನಾಟಕದ ಅರಣ್ಯ ವೈವಿಧ್ಯತೆಯ ದರ್ಶನ ನಮಗಾಗುತ್ತದೆ.
ಸಾಕ್ಷ್ಯಚಿತ್ರದುದ್ದಕ್ಕೂ ಪುನೀತ್ ಆವರಿಸಿಕೊಳ್ಳುತ್ತಾರೆ. ತೆರೆಯಮೇಲೆ ಹೀರೋ ಆಗಿ ಎಲ್ಲರಿಗೂ ಪುನೀತ್ ಗೊತ್ತು. ಆದರೆ ಡಾಕ್ಯುಮೆಂಟರಿ ಉದ್ದಕ್ಕೂ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸುತ್ತಾರೆ. ತೆರೆಮೇಲೆ ಹತ್ತಾರು ವಿಲನ್ಗಳನ್ನು ಹೊಡೆದುರುಳಿಸುವ ಪುನೀತ್ ಅವರು ಹಾವನ್ನು ಕಂಡರೆ ಮಾರು ದೂರ ಹೋಗಿ ನಿಲ್ಲುತ್ತಾರೆ. ಸಿನಿಮಾದಲ್ಲಿ ಹತ್ತಾರು ಊರುಗಳನ್ನು ಸುತ್ತಿ ವಿಲನ್ನ ಸದೆಬಡಿಯುವ ಅಪ್ಪು ರಾತ್ರಿ ಕಾಡಿನಲ್ಲಿ ಕ್ಯಾಂಪ್ ಹಾಕೋಕೆ ಹಿಂಜರಿಯುತ್ತಾರೆ. ಅಪ್ಪುವಿನ ಮಗುವಿನಂಥ ಮನಸ್ಸು ಪ್ರತಿ ಕ್ಷಣ, ಪ್ರತಿ ನಿಮಿಷ ತೆರೆಮೇಲೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆಯುವ ಪುನೀತ್ ನಮ್ಮೊಂದಿಗಿಲ್ಲ ಎಂಬುದನ್ನು ನಂಬಲು ತೆರೆಮೇಲಿನ ದೃಶ್ಯಗಳು ಬಿಡುವುದೇ ಇಲ್ಲ. ಮಕ್ಕಳೊಂದಿಗೆ, ಕುರಿಗಾಹಿಗಳೊಂದಿಗೆ ಅವರು ಬೆರೆಯುವ ರೀತಿ ಅವರ ನಿಜವಾದ ವ್ಯಕ್ತಿತ್ವ ತೋರಿಸುತ್ತದೆ.
ಕಾಡಲ್ಲಿ ಹಾವಿದೆ ಎಂದಾಗ, ‘ಅಯ್ಯೋ 3 ಸಿನಿಮಾ ಒಪ್ಪಿಕೊಂಡಿದೀನಿ, ಹೆಂಡತಿ ಮಕ್ಕಳಿದ್ದಾರೆ, ನಾವು ಬೆಂಗಳೂರಿಗೆ ಸೇಫ್ ಆಗಿ ಹೋಗಿ ಮುಟ್ತೀವಿ ತಾನೇ?’, ‘ಸಮಯ ಸಿಕ್ಕಾಗಲೆಲ್ಲ ಈ ರೀತಿ ಪ್ರಕೃತಿಯಲ್ಲಿ ಕಳೆದು ಹೋಗಬೇಕು’ ಎಂಬಿತ್ಯಾದಿ ಪುನೀತ್ ಡೈಲಾಗ್ಗಳು ಅಭಿಮಾನಿಗಳನ್ನು ಭಾವುಕರಾಗಿಸುತ್ತದೆ. ಅಪ್ಪು ನಮ್ಮ ಜತೆಗಿದ್ದಾರೆ, ಅವರು ಎಲ್ಲೂ ಹೋಗಿಲ್ಲ ಎಂಬ ಮಾತನ್ನು ಯಾರೋ ಪುನರಚ್ಚರಿಸಿದಂತೆ ಭಾಸವಾಗುತ್ತವೆ.
ರಾಜ್ಕುಮಾರ್ ನಟನೆಯ ‘ಗಂಧದ ಗುಡಿ’ ಸಿನಿಮಾಗೆ ಒಂದೊಳ್ಳೆಯ ಉದ್ದೇಶ ಇತ್ತು. ಕಾಡನ್ನು ಉಳಿಸಿ, ಬೆಳೆಸಿ, ಪ್ರಾಣಿಗಳನ್ನು ರಕ್ಷಿಸಿ ಎಂದು ರಾಜ್ಕುಮಾರ್ ಸಿನಿಮಾ ಉದ್ದಕ್ಕೂ ಹೇಳಿದ್ದರು. ಪುನೀತ್ ಅವರ ‘ಗಂಧದ ಗುಡಿ’ ಕೂಡ ಇದಕ್ಕೆ ಹೊರತಾಗಿಲ್ಲ. ಕೆಲವು ಕಡೆಗಳಲ್ಲಿ ಪ್ರಕೃತಿಗೆ ಮಾನವನಿಂದ ಆದ ಹಾನಿಯನ್ನು ತೋರಿಸಲಾಗಿದೆ. ಪ್ರಕೃತಿಯನ್ನು ಅದರ ಪಾಡಿಗೆ ಬಿಟ್ಟರೆ ಹೇಗೆ ಚೇತರಿಸಿಕೊಳ್ಳುತ್ತದೆ ಎಂಬುದನ್ನು ಅನಾವರಣಗೊಳಿಸಲಾಗಿದೆ. ಕಾಡನ್ನು ಉಳಿಸಿ, ಪ್ರಾಣಿಗಳನ್ನು ಉಳಿಸಿ ಎಂಬಿತ್ಯಾದಿ ಸಂದೇಶಗಳನ್ನು ಪುನೀತ್ ಅವರು ಅಭಿಮಾನಿಗಳಿಗೆ ಮನ ಮುಟ್ಟುವಂತೆ ಹೇಳಿದ್ದಾರೆ. ಕಾಡನ್ನು ರಕ್ಷಿಸುತ್ತಿರುವ ಅರಣ್ಯ ಸಿಬ್ಬಂದಿಗೂ ಇಲ್ಲಿ ವಿಶೇಷ ಗೌರವ ಸಲ್ಲಿಕೆ ಆಗಿದೆ. ಈ ಡಾಕ್ಯುಮೆಂಟರಿಯಲ್ಲಿ ಅಲ್ಲಲ್ಲಿ ನಗುವಿನ ಕಚಗುಳಿಯೂ ಇದೆ.
ಅಮೋಘವರ್ಷ ಅವರಿಗೆ ಕಾಡಿನ ಜತೆ ಇರುವ ನಂಟು ಈ ಡಾಕ್ಯುಮೆಂಟರಿಯಿಂದ ಗೊತ್ತಾಗುತ್ತದೆ. ಅಪ್ಪು ಹಾಗೂ ಅವರು ಹಾಕಿದ ಶ್ರಮ ತೆರೆಮೇಲೆ ಎದ್ದು ಕಾಣುತ್ತದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಇಷ್ಟವಾಗುತ್ತದೆ. ಪ್ರತೀಕ್ ಶೆಟ್ಟಿ ಅವರ ಛಾಯಾಗ್ರಹಣ ‘ಗಂಧದ ಗುಡಿ’ಯ ಅಂದವನ್ನು ಹೆಚ್ಚಿಸಿದೆ. ಕಾಡುಗಳು, ವನ್ಯಜೀವಿಗಳನ್ನು ಚೆನ್ನಾಗಿ ಸೆರೆ ಹಿಡಿದಿದ್ದಾರೆ. ಸಾಕ್ಷ್ಯಚಿತ್ರದುದ್ದಕ್ಕೂ ಅಪ್ಪು ಧ್ವನಿ ಕೇಳುತ್ತದೆ ಎಂಬುದು ಖುಷಿಯ ವಿಚಾರ. ಡಾಕ್ಯುಮೆಂಟರಿಯನ್ನು ಹೀಗೂ ಪ್ರಸ್ತುತಪಡಿಸಬಹುದು ಎಂಬುದನ್ನು ಅಪ್ಪು ತೋರಿಸಿ ಹೋಗಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಪಾತ್ರ ಕೂಡ ಈ ಡಾಕ್ಯುಮೆಂಟರಿಯಲ್ಲಿದೆ. ಅದೇನು ಎಂಬುದನ್ನು ತೆರೆಮೇಲೆ ನೋಡಬೇಕು.
ಬೆಟ್ಟದ ಹೂವಿನಿಂದ ಆರಂಭವಾಗುವ ‘ಗಂಧದ ಗುಡಿ’ ಕೊನೆಯಾಗುವುದು ನೀರಿನಲ್ಲಿ ತೇಲಿ ಹೋಗುವ ಹೂವಿನಿಂದ, ನೀರಿನಲ್ಲಿ ಕಾಣುವ ಅಪ್ಪುವಿನ ಪ್ರತಿಬಿಂಬದಿಂದ. ಆ ದೃಶ್ಯ ನೋಡಿದಾಗಲೆಲ್ಲ, ಬೆಟ್ಟದ ಹೂವು ಮತ್ತೆ ಅರಳಲಿ, ಪ್ರತಿಬಿಂಬಕ್ಕೆ ಜೀವ ಬರಲಿ ಎಂದು ಅಭಿಮಾನಿಗಳಿಗೆ ಅನ್ನಿಸದೆ ಇರದು.
Published On - 10:34 pm, Thu, 27 October 22