ಈ ಸಂಕ್ರಾಂತಿಗೆ ತೆಲುಗಿನ ಮೂರು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗಿವೆ. ಮೊದಲಿಗೆ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ ಆಯ್ತು. ಆ ಸಿನಿಮಾ ಮೊದಲೆರಡು ದಿನ ಒಳ್ಳೆಯ ಕಲೆಕ್ಷನ್ ಮಾಡಿತು. ಬಳಿಕ ಎರಡನೇ ದಿನದ ಅಂತರದಲ್ಲಿ ನಂದಮೂರಿ ಬಾಲಕೃಷ್ಣ ನಟನೆಯ ‘ಢಾಕೂ ಮಹಾರಾಜ್’ ಸಿನಿಮಾ ತೆರೆಗೆ ಬಂತು. ಅದಾದ ಎರಡು ದಿನಕ್ಕೆ ವಿಕ್ಟರಿ ವೆಂಕಟೇಶ್ ನಟನೆಯ ‘ಸಂಕ್ರಾಂತಿಕಿ ವಸ್ತುನ್ನಾಮ್’ ಸಿನಿಮಾ ಬಿಡುಗಡೆ ಆಯ್ತು. ಈ ಮೂರರಲ್ಲಿ ಬಾಕ್ಸ್ ಆಫೀಸ್ನಲ್ಲಿ ಗೆಲುವು ಸಾಧಿಸಿರುವುದು ನಂದಮೂರಿ ಬಾಲಕೃಷ್ಣ ನಟನೆಯ ‘ಢಾಕೂ ಮಹಾರಾಜ್’ ಸಿನಿಮಾ.
‘ಢಾಕೂ ಮಹಾರಾಜ್’ ಸಿನಿಮಾ ಜನವರಿ 12 ರಂದು ಕೇವಲ ತೆಲುಗು ಭಾಷೆಯಲ್ಲಿ ಬಿಡುಗಡೆ ಆಯ್ತು. ಸಿನಿಮಾದ ಮೊದಲ ದಿನವೇ 25 ಕೋಟಿಗೂ ಹೆಚ್ಚು ಹಣ ಗಳಿಸಿತು. ಈ ಸಿನಿಮಾದ ಬಿಡುಗಡೆ ಇಂದಾಗಿ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ರಾಮ್ ಚರಣ್ರ ‘ಗೇಮ್ ಚೇಂಜರ್’ ಕಲೆಕ್ಷನ್ ಧಾರುಣವಾಗಿ ಕುಸಿದು ಬಿತ್ತು. ಮೊದಲ ದಿನದ ಬಳಿಕವೂ ತನ್ನ ಅದ್ಭುತ ಬಾಕ್ಸ್ ಆಫೀಸ್ ರನ್ ಮುಂದುವರೆಸಿದ ‘ಢಾಕೂ ಮಹಾರಾಜ್’ ಸಿನಿಮಾ ಕೇವಲ ಮೂರು ದಿನಗಳಲ್ಲಿ ಸೂಪರ್ ಹಿಟ್ ಎನಿಸಿಕೊಂಡಿದೆ.
‘ಢಾಕೂ ಮಹಾರಾಜ್’ ಸಿನಿಮಾ ಮೊದಲ ಮೂರು ದಿನಗಳಲ್ಲಿ 50 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಮೊದಲ ದಿನ 25 ಕೋಟಿ ಗಳಿಸಿದ್ದ ಸಿನಿಮಾ ಆ ನಂತರದ ಎರಡು ದಿನಗಳಲ್ಲಿ ಕ್ರಮವಾಗಿ 12 ಕೋಟಿಗೂ ಹೆಚ್ಚು ಮೊತ್ತ ಗಳಿಸುವ ಮೂಲಕ 50 ಕೋಟಿ ಮಾರ್ಕ್ ದಾಟಿದೆ. ಪ್ಯಾನ್ ಇಂಡಿಯಾ ಸಿನಿಮಾ ಅಲ್ಲದೇ ಇದ್ದರೂ ಕೇವಲ 3 ದಿನಗಳಲ್ಲಿ 50 ಕೋಟಿ ಕಲೆಕ್ಷನ್ ದಾಟಿರುವುದು ಸಾಮಾನ್ಯ ಸಾಧನೆಯಲ್ಲ.
ಇದನ್ನೂ ಓದಿ: ಭರ್ಜರಿ ಗಳಿಕೆ ಮಾಡಿದ ‘ಢಾಕೂ ಮಹಾರಾಜ್’, ‘ಗೇಮ್ ಚೇಂಜರ್’ಗೆ ಪೆಟ್ಟು
ಈಗ ಬಿಡುಗಡೆ ಆಗಿರುವ ಮೂರು ಸಿನಿಮಾಗಳಲ್ಲಿ ‘ಢಾಕೂ ಮಹಾರಾಜ್’ ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಹೆಚ್ಚಿನ ಧನಾತ್ಮಕ ಕಮೆಂಟ್ ವ್ಯಕ್ತವಾಗಿದೆ. ‘ಗೇಮ್ ಚೇಂಜರ್’ ಸಿನಿಮಾದ ಬಗ್ಗೆಯೂ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆಯಾದರೂ ತೆಲುಗು ರಾಜ್ಯಗಳಲ್ಲಿಯೇ ಸಿನಿಮಾದ ಕಲೆಕ್ಷನ್ ಧಾರುಣವಾಗಿ ಕುಸಿದಿದ್ದು, ಮೂರನೇ ದಿನಕ್ಕೆ ಕೇವಲ 7 ಕೋಟಿ ರೂಪಾಯಿ ಹಣ ಗಳಿಸಿತ್ತು. ಆದರೆ ಉತ್ತರ ಭಾರತದ ಪ್ರದೇಶಗಳಲ್ಲಿ ಈ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.
‘ಢಾಕೂ ಮಹಾರಾಜ್’ ಸಿನಿಮಾದಲ್ಲಿ ಬಾಲಕೃಷ್ಣ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದು, ಪುಟ್ಟ ಬಾಲಕಿಯ ಜೀವ ರಕ್ಷಿಸಲು ತನ್ನ ಜೀವ ಮುಡಿಪಾಗಿಟ್ಟ ವ್ಯಕ್ತಿಯ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಊರ್ವಶಿ ರೌಟೆಲಾ, ಶ್ರದ್ಧಾ ಶ್ರೀನಾಥ್, ಬಾಬಿ ಡಿಯೋಲ್ ಅವರುಗಳು ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ