ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಇಂದು (ಜನವರಿ 15) ನಿಧನ ಹೊಂದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಕಾರಣ ಕಳೆದ ಕೆಲ ದಿನಗಳಿಂದಲೂ ಅವರು ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ 9:45ರ ಸುಮಾರಿಗೆ ಅವರು ನಿಧನ ಹೊಂದಿದ್ದಾರೆ. ಸರಿಗಮ ವಿಜಿ ಅವರು 250ಕ್ಕೂ ಹೆಚ್ಚು ಸಿನಿಮಾಗಳು, ಹಲವಾರು ಧಾರಾವಾಹಿ ಹಾಗೂ ನಾಟಕಗಳಲ್ಲಿ ನಟಿಸಿದ್ದರು.
ಸರಿಗಮ ವಿಜಿ ಅವರ ಮೂಲ ಹೆಸರು ಆರ್ ವಿಜಯ್ ಕುಮಾರ್. ಅವರು ಚಿತ್ರರಂಗಕ್ಕೆ ಬರುವ ಮುನ್ನವೇ ಅವರ ಹೆಸರಿನ ಜೊತೆ ‘ಸರಿಗಮ’ ಸೇರಿಕೊಂಡು ಬಿಟ್ಟಿತ್ತು. ವಿಜಿ ಅವರು ಸಿನಿಮಾಗಳಲ್ಲಿ ನಟಿಸುವ ಮುಂಚೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಅವರು ನಟಿಸಿದ್ದ ‘ಸಂಸಾರದಲ್ಲಿ ಸರಿಗಮ’ ಧಾರಾವಾಹಿ ಬಹಳ ಜನಪ್ರಿಯತೆ ಗಳಿಸಿತ್ತು. ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ, ಹೈದರಾಬಾದ್, ಚೆನ್ನೈ, ದೆಹಲಿಗಳಲ್ಲಿಯೂ ಆ ನಾಟಕ ಪ್ರದರ್ಶನವಾಗಿತ್ತು. ಸುಮಾರು 1390 ಪ್ರದರ್ಶನಗಳಲ್ಲಿ ‘ಸಂಸಾರದಲ್ಲಿ ಸರಿಗಮ’ ನಾಟಕ ಕಂಡಿತ್ತು. ಇದೇ ಕಾರಣಕ್ಕೆ ವಿಜಿ ಅವರ ಹೆಸರಿನ ಮುಂದೆ ‘ಸರಿಗಮ’ ಸೇರಿಕೊಂಡು ಸರಿಗಮ ವಿಜಿ ಎಂದೇ ಜನಪ್ರಿಯರಾದರು.
ಇದನ್ನೂ ಓದಿ:Breaking: ಹಿರಿಯ ನಟ ಸರಿಗಮ ವಿಜಿ ನಿಧನ
ಸರಿಗಮ ವಿಜಿ ಅವರು ನಟರಷ್ಟೆ ಅಲ್ಲದೆ ಉತ್ತಮ ನಿರ್ದೇಶಕರೂ ಆಗಿದ್ದರು. 80 ಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಸಂಭಾಷಣೆಗಳನ್ನು ಸಹ ಬರೆದಿದ್ದರು. ಟಿವಿ ಲೋಕದಲ್ಲಿಯೂ ಸಹ ಹಲವು ಧಾರಾವಾಹಿಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ವಿಕಿಪೀಡಿಯಾ ಮಾಹತಿಯಂತೆ ಸುಮಾರು 2400 ಎಪಿಸೋಡ್ಗಳನ್ನು ಸರಿಗಮ ವಿಜಿ ನಿರ್ದೇಶನ ಮಾಡಿದ್ದಾರೆ.
2018 ರ ವೇಳೆಗೆ ಸರಿಗಮ ವಿಜಿ 269 ಸಿನಿಮಾಗಳಲ್ಲಿ ನಟನೆ ಮಾಡಿದ್ದರು. ವಿಜಿ ಅವರು ನಟಿಸಿದ ಕೊನೆಯ ಸಿನಿಮಾ ‘ಡಕೋಟಾ ಪಿಕ್ಚರ್’. ಸರಿಗಮ ವಿಜಿ ಹಾಸ್ಯನಟರಷ್ಟೆ ಅಲ್ಲದೆ ಹಲವು ಗಂಭೀರ ಪಾತ್ರಗಳಲ್ಲಿಯೂ ನಟಿಸಿದ್ದರು. ಪೋಷಕ ಪಾತ್ರ, ವಿಲನ್ ಪಾತ್ರಗಳಲ್ಲಿಯೂ ಸಹ ವಿಜಿ ಅವರು ನಟನೆ ಮಾಡಿದ್ದರು. ವಿಜಿ ಅವರ ನಿಧನಕ್ಕೆ ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ