
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26 ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿತ್ತು. ಚಿತ್ರಕ್ಕೆ ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತಾದರೂ, ಎರಡನೇ ದಿನದಿಂದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಭಾರಿ ಕುಸಿತ ಕಂಡುಬಂತು. ಈಗ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡು ಹಲವು ದಿನಗಳು ಕಳೆದಿವೆ. ಈ ಬೆನ್ನಲ್ಲೇ ಚಿತ್ರದ ಒಟಿಟಿ ಬಿಡುಗಡೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆರಂಭವಾಗಿವೆ.
ವರದಿಗಳ ಪ್ರಕಾರ, ಈ ಸಿನಿಮಾ ಶೀಘ್ರದಲ್ಲೇ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ. ಕೆಲವು ವರದಿಯ ಪ್ರಕಾರ, ‘ಟಾಕ್ಸಿಕ್’ ಸಿನಿಮಾ ಇದೇ ಸೆಪ್ಟೆಂಬರ್ 25 ರಿಂದ ‘ಜಿ5’ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾಗುವ ಸಾಧ್ಯತೆಯಿದೆ. ಆದರೆ, ಈ ಬಗ್ಗೆ ಚಿತ್ರತಂಡ ಅಥವಾ ಒಟಿಟಿ ಸಂಸ್ಥೆಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಸಾಕ್ನಿಲ್ಕ್ ವರದಿ ಪ್ರಕಾರ ‘ಟಾಕ್ಸಿಕ್’ ಪ್ರಪಂಚದಾದ್ಯಂತ ಒಟ್ಟು 340.98 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇದರಲ್ಲಿ ಭಾರತದಲ್ಲೇ ಬರೋಬ್ಬರಿ 297.23 ಕೋಟಿ ರೂಪಾಯಿ ಗಳಿಕೆಯಾಗಿದ್ದರೆ, ವಿದೇಶಗಳಿಂದ 43.75 ಕೋಟಿ ರೂಪಾಯಿ ಹರಿದುಬಂದಿದೆ. ಪ್ರಪಂಚದಾದ್ಯಂತ 1,61,714 ಶೋಗಳಿಂದ 249.02 ಕೋಟಿ ರೂಪಾಯಿ ನೆಟ್ ಗಳಿಕೆ ಕಂಡಿದೆ. ಮೊದಲ ದಿನವೇ 101.10 ಕೋಟಿ ರೂಪಾಯಿ ಗಳಿಸಿದ್ದ ಚಿತ್ರ, ಎರಡನೇ ದಿನ 45.10 ಕೋಟಿ ರೂಪಾಯಿಗೆ ಕುಸಿದಿತ್ತು.
ಇದನ್ನೂ ಓದಿ: ನಿಮ್ಮ ಬುದ್ಧಿ ಉಪಯೋಗಿಸಿ ಸಿನಿಮಾ ನೋಡಿ ;ಟಾಕ್ಸಿಕ್ ನೆಗೆಟಿವ್ ವಿಮರ್ಶೆಗೆ ಯಶ್ ಸಹನಟ ಖಡಕ್ ಉತ್ತರ
‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾದಲ್ಲಿ ಅವರಿಗೆ ಮೂರು ಶೇಡ್ಗಳು ಇದ್ದವು. ಗೀತು ಮೋಹನ್ದಾಸ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಕುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಅಕ್ಷಯ್ ಒಬೆರಾಯ್ ಮುಂತಾದವರು ನಟಿಸಿದ್ದರು. ಒಟಿಟಿಯಲ್ಲಿ ಈ ಸಿನಿಮಾ ಯಾವ ರೀತಿಯ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:56 am, Tue, 15 September 26