ಕೆಲವು ವರ್ಷಗಳ ಹಿಂದೆ ರಸ್ತೆ ಬದಿಯ ಟೀ ಸ್ಟಾಲ್ನಲ್ಲಿ ಟೀ ಮಾರುತ್ತಿದ್ದ ಓರ್ವ ಸುಂದರ ಯುವಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದರು. ಅರ್ಷದ್ ಖಾನ್ ಎಂಬುದು ಈ ಹುಡುಗನ ಹೆಸರು. ಈ ಫೋಟೋ ವೈರಲ್ ಆಗಿದ್ದು 2016 ರಲ್ಲಿ. ಅರ್ಷದ್ನ ಸಂಪೂರ್ಣ ಭವಿಷ್ಯ ಈಗ ಬದಲಾಗಿದೆ. ಅವರು ‘ಶಾರ್ಕ್ ಟ್ಯಾಂಕ್ ಪಾಕಿಸ್ತಾನ’ದಲ್ಲಿ ತಮ್ಮ ಕೆಫೆ ವ್ಯವಹಾರಕ್ಕಾಗಿ ಹೂಡಿಕೆ ಪಡೆದುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಅರ್ಷದ್ ತಮ್ಮ ಆನ್ಲೈನ್ ಜನಪ್ರಿಯತೆ ಮತ್ತು ಭವಿಷ್ಯದ ಕನಸುಗಳನ್ನು ಪ್ರಸ್ತಾಪಿಸಿದರು. ಈ ಕಾರ್ಯಕ್ರಮದಲ್ಲಿ ಅವರ ಜೊತೆಗಾರ ಕಾಜಿಮ್ ಹಾಸನ್ ಕೂಡ ಇದ್ದರು. ಅವರು ತಮ್ಮ ಬ್ರಾಂಡ್ ‘ಕೆಫೆ ಚಾಯ್ವಾಲಾ’ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು ಮತ್ತು 1 ಕೋಟಿ ಪಾಕಿಸ್ತಾನಿ ರೂಪಾಯಿ ಹೂಡಿಕೆಯನ್ನು ಕೇಳಿದರು.
‘ಶಾರ್ಕ್ ಟ್ಯಾಂಕ್’ ಶೋನಲ್ಲಿ ಕೆಲವು ದೊಡ್ಡ ಉದ್ಯಮಿಗಳು ಕುಳಿತಿರುತ್ತಾರೆ ಮತ್ತು ವಿವಿಧ ವ್ಯವಹಾರಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. ಇದು ಸ್ಟಾರ್ಟ್ಅಪ್ಗಳು, ಸಣ್ಣ ಉದ್ಯಮಗಳಿಗೆ ಹೂಡಿಕೆ ಪಡೆಯಲು ಸಹಾಯ ಮಾಡುತ್ತದೆ. ಈ ಕಾರ್ಯಕ್ರಮದಲ್ಲಿ ಅರ್ಷದ್ ತಮ್ಮ ಬಗ್ಗೆ ಮಾಹಿತಿ ನೀಡಿದರು. ‘2016 ರಲ್ಲಿ, ನನ್ನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅದರ ನಂತರ ಕೆಲವು ತಿಂಗಳುಗಳವರೆಗೆ ನನಗೆ ನಿಜವಾಗಿಯೂ ಏನಾಗುತ್ತಿದೆ ಎಂದು ನನಗೆ ಅರ್ಥವಾಗಲಿಲ್ಲ. ನಾನು ಮಾಡೆಲಿಂಗ್ ಮತ್ತು ನಟನೆಯನ್ನು ಸಹ ಪ್ರಾರಂಭಿಸಿದೆ. ಅದಕ್ಕೂ ಮೊದಲು ನಾನು ಇಸ್ಲಾಮಾಬಾದ್ನ ಹೊರಗೆ ಹೋಗಿರಲಿಲ್ಲ. ನನ್ನದೇ ಕೆಫೆ ಆರಂಭಿಸುವಂತೆ ಅನೇಕರು ಸಲಹೆ ನೀಡಿದ್ದಾರೆ. ಇತರರ ಧಾಬಾಗಳಲ್ಲಿ ಕೆಲಸ ಮಾಡುವಾಗ, ನಾನು ನನ್ನದೇ ಆದ ಕೆಫೆಯನ್ನು ಹೊಂದುವ ಕನಸು ಕಾಣುತ್ತಿದ್ದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಸದ್ದೇ ಇಲ್ಲದೆ ಸಿನಿಮಾ ಮುಗಿಸಿದ ಶ್ರೀಲೀಲಾ, ರಾಬಿನ್ಹುಡ್ಗೆ ನಾಯಕಿ
ಅರ್ಷದ್ ಅವರ ಸಹ ಉದ್ಯಮಿ ಕಾಜಿಮ್ ‘2020 ರಲ್ಲಿ, ನಾವು ನಮ್ಮ ಮೊದಲ ಕೆಫೆಯನ್ನು ಪ್ರಾರಂಭಿಸಿದ್ದೇವೆ. ಅದು ಇಸ್ಲಾಮಾಬಾದ್ನ ಮೇಲ್ಛಾವಣಿಯ ಕೆಫೆಯಾಗಿತ್ತು. ಆದರೆ ಈ ಕೆಫೆ ಪ್ರಾರಂಭವಾದ ಕೂಡಲೇ ಕೊರೊನಾ ಮಹಾಮಾರಿ ಬಂದಿತು. ನಂತರ ಅಕ್ಟೋಬರ್ನಲ್ಲಿ ನಾವು ಮತ್ತೆ ಪ್ರಾರಂಭಿಸಿದೆವು. ಈಗ ನಾವು ಪಾಕಿಸ್ತಾನದಲ್ಲಿ ಎರಡು ಮತ್ತು ಇಂಗ್ಲೆಂಡ್ನಲ್ಲಿ ಮೂರು ಮಳಿಗೆಗಳನ್ನು ಹೊಂದಿದ್ದೇವೆ. ನಾವು ಫ್ರ್ಯಾಂಚೈಸ್ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದೇವೆ. 35 ಸಾವಿರ ಪಾಕಿಸ್ತಾನದ ರೂಪಾಯಿಗಳಿಗೆ ನಾವು ಕೆಫೆಯನ್ನು ಫ್ರಾಂಚೈಸ್ ಮಾಡುತ್ತೇವೆ ಮತ್ತು 5 ಪ್ರತಿಶತ ರಾಯಲ್ಟಿ ಸ್ವೀಕರಿಸುತ್ತೇವೆ’ ಎಂದರು ಅವರು.
ಮೂರು ವರ್ಷಗಳಲ್ಲಿ ಅವರ ಒಟ್ಟು ಗಳಿಕೆ ಸುಮಾರು 2 ಕೋಟಿ ಪಾಕಿಸ್ತಾನಿ ರೂಪಾಯಿ ಎಂದು ಕಾರ್ಯಕ್ರಮದ ತೀರ್ಪುಗಾರ ಜುನೈದ್ ಇಕ್ಬಾಲ್ ಉಲ್ಲೇಖಿಸಿದ್ದಾರೆ. ರಬೀಲ್ ವಾರಾಯಿಚ್ ಅರ್ಷದ್ ಮತ್ತು ಕಾಜಿಮ್ಗೆ 1 ಕೋಟಿ ರೂ. ನೀಡಲು ಒಪ್ಪಿದ್ದಾರೆ. ಆದರೆ ಆದಾಯ ಕಡಿಮೆ ಇರುವುದರಿಂದ ವ್ಯಾಪಾರಕ್ಕೆ ಹೆಚ್ಚಿನ ಗಮನ ನೀಡಬೇಕಾಗಿರುವುದರಿಂದ ಶೇ.24ರಷ್ಟು ಈಕ್ವಿಟಿ ನೀಡುವಂತೆ ಕೋರಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Sun, 17 November 24