
ರಜನೀಕಾಂತ್ ಮತ್ತು ಕಮಲ್ ಹಾಸನ್ ಭಾರತ ಚಿತ್ರರಂಗದ ಸೂಪರ್ ಸ್ಟಾರ್ ನಟರು. ಇಬ್ಬರಿಗೂ ಕೋಟ್ಯಂತರ ಅಭಿಮಾನಿಗಳಿದ್ದಾರೆ. ತಮಿಳು ಚಿತ್ರರಂಗ ಈ ಸೂಪರ್ ಸ್ಟಾರ್ಗಳು ಒಟ್ಟಿಗೆ ನಟಿಸಿ ದಶಕಗಳೇ ಕಳೆದಿವೆ. ಇಬ್ಬರೂ ಒಟ್ಟಿಗೆ ನಟಿಸಬೇಕೆಂಬುದು ಸಿನಿಮಾ ಪ್ರೇಮಿಗಳ ಬಹು ವರ್ಷದ ಬೇಡಿಕೆ ಆಗಿತ್ತು. ಇದೀಗ ಆ ಬೇಡಿಕೆ ಈಡೇರುತ್ತಿದೆ. ಕೆಲ ತಿಂಗಳ ಹಿಂದೆ ರಜನಿ ಮತ್ತು ಕಮಲ್ ಅವರು ಒಟ್ಟಿಗೆ ನಟಿಸುತ್ತಿರುವ ಸಿನಿಮಾದ ಬಗ್ಗೆ ಘೋಷಣೆ ಆಗಿತ್ತು. ಸಿನಿಮಾಕ್ಕಾಗಿ ಒಂದು ಕಿರು ಟೀಸರ್ ಅನ್ನು ಸಹ ಬಿಡುಗಡೆ ಮಾಡಲಾಗಿತ್ತು. ಆದರೆ ಅದಾದ ಮೇಲೆ ಸಿನಿಮಾದ ಅಪ್ಡೇಟ್ ಏನೂ ಹೊರಗೆ ಬಂದಿರಲಿಲ್ಲ.
ರಜನಿ ಮತ್ತು ಕಮಲ್, ನಿರ್ದೇಶಕ ನೆಲ್ಸನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ಸಹ ಒಟ್ಟಿಗೆ ಕಾರಿನಲ್ಲಿ ಕೂತು ಹೋಗುತ್ತಿರುವ ದೃಶ್ಯವಿರುವ ಟೀಸರ್ ಒಂದನ್ನು ಬಿಡುಗಡೆ ಮಾಡಲಾಗಿತ್ತು. ಇದು ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿತ್ತು. ಸಿನಿಮಾ ಅನ್ನು ನೆಲ್ಸನ್ ನಿರ್ದೇಶಿಸಲಿದ್ದಾರೆ ಎಂದು ಸಹ ಘೋಷಣೆ ಆಗಿತ್ತು. ಆದರೆ ಅದಾದ ಬಳಿಕ ಸಿನಿಮಾದ ಅಪ್ಡೇಟ್ ಹೊರಬಿದ್ದಿರಲಿಲ್ಲ. ಕೆಲವೆಡೆಯಂತೂ ಸಿನಿಮಾ ನಿಂತು ಹೋಗಿದೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಆದರೆ ಈಗ ಹೊರಬಿದ್ದಿರುವ ಸುದ್ದಿಯ ಪ್ರಕಾರ, ಸಿನಿಮಾದ ಪ್ರೀ ಪ್ರೊಡಕ್ಷನ್ ಆರಂಭ ಮಾಡಲಾಗಿದೆಯಂತೆ.
ನೆಲ್ಸನ್ ಅವರು ಚಿತ್ರಕತೆಯನ್ನು ಸಿದ್ಧಪಡಿಸಿಕೊಂಡಿದ್ದು, ರಜನಿ ಮತ್ತು ಕಮಲ್ ಇಬ್ಬರೂ ಸಹ ಚಿತ್ರಕತೆಯನ್ನು ಅಂತಿಮಗೊಳಿಸಿದ್ದು, ಸಿನಿಮಾದ ಚಿತ್ರೀಕರಣ ಮುಂದಿನ ವರ್ಷ ಮೇ ತಿಂಗಳಲ್ಲಿ ಆರಂಭವಾಗಲಿದೆಯಂತೆ. ಸದ್ಯಕ್ಕೆ ರಜನೀಕಾಂತ್, ‘ಧರ್ಮನ್’ ಹೆಸರಿನ ಸಿನಿಮಾನಲ್ಲಿ ನಟನೆ ಮಾಡುತ್ತಿದ್ದಾರೆ. ಆ ಸಿನಿಮಾಕ್ಕೆ ಕಮಲ್ ಹಾಸನ್ ಅವರೇ ನಿರ್ಮಾಪಕ. ನಿರ್ದೇಶನ ಮಾಡುತ್ತಿರುವುದು ಅಶ್ವತ್ಥ್ ನಾರಾಯಣ್. ಆ ಸಿನಿಮಾ ಬಿಡುಗಡೆ ಆದ ಕೂಡಲೇ ರಜನಿ ಮತ್ತು ಕಮಲ್ ಅವರ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲಿದೆಯಂತೆ.
ಇದನ್ನೂ ಓದಿ:ರಜನೀಕಾಂತ್ ಬಳಿಕ ಚಿರಂಜೀವಿಗೆ ಸಿನಿಮಾ ನಿರ್ದೇಶಿಸಲಿರುವ ಕಾರ್ತಿಕ್ ಸುಬ್ಬರಾಜು
ರಜನೀಕಾಂತ್ ಮತ್ತು ಕಮಲ್ ಹಾಸನ್ ಅವರುಗಳು ದಶಕಗಳ ಹಿಂದೆ ಕೆಲ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. 1985 ರಲ್ಲಿ ಬಿಡುಗಡೆ ಆಗಿದ್ದ ‘ಗಿರ್ಫ್ತಾರ್’ ಸಿನಿಮಾನಲ್ಲಿ ರಜನೀಕಾಂತ್ ಮತ್ತು ಕಮಲ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ಸಿನಿಮಾನಲ್ಲಿ ಅಮಿತಾಬ್ ಬಚ್ಚನ್ ಸಹ ಇದ್ದರು. ಅದಾದ ಬಳಿಕ ಇಬ್ಬರೂ ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಿಲ್ಲ. ಈಗ ನಾಲ್ಕು ದಶಕಗಳ ಬಳಿಕ ಇಬ್ಬರೂ ಒಟ್ಟಿಗೆ ನಟನೆ ಮಾಡಲಿದ್ದಾರೆ. ರಜನೀಕಾಂತ್ ನಾಯಕರಾಗಿ ನಟಿಸುತ್ತಿರುವ ‘ಧರ್ಮನ್’ ಸಿನಿಮಾನಲ್ಲೂ ಸಹ ಕಮಲ್ ಹಾಸನ್ ಅವರ ಅತಿಥಿ ಪಾತ್ರ ಇರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ