ಬಿಸಿಮುಟ್ಟಿದ ಮೇಲೆ ಎಚ್ಚೆತ್ತು ಹಳೆಯ ಸಾಲ ತೀರಿಸಿದ ರಾಮ್ ಗೋಪಾಲ್ ವರ್ಮ 

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಒಂಬತ್ತು ವರ್ಷಗಳ 1.11 ಕೋಟಿ ರೂಪಾಯಿ ಹಳೆಯ ಬಾಕಿ ಹಣವನ್ನು ಪಾವತಿಸಿದ್ದಾರೆ. ‘ಪೊಲೀಸ್ ಕಂಪನಿ’ ಚಿತ್ರೀಕರಣವನ್ನು ಕಾರ್ಮಿಕರ ಸಂಘಟನೆ ಸ್ಥಗಿತಗೊಳಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಸಂಘಟನೆಯ ಕಠಿಣ ನಿರ್ಧಾರದಿಂದಾಗಿ ಕೊನೆಗೂ ಕಾರ್ಮಿಕರಿಗೆ ಹಾಗೂ ತಂತ್ರಜ್ಞರಿಗೆ ನ್ಯಾಯ ಸಿಕ್ಕಂತಾಗಿದೆ.

ಬಿಸಿಮುಟ್ಟಿದ ಮೇಲೆ ಎಚ್ಚೆತ್ತು ಹಳೆಯ ಸಾಲ ತೀರಿಸಿದ ರಾಮ್ ಗೋಪಾಲ್ ವರ್ಮ 
ಆರ್​ಜಿವಿ

Updated on: Aug 20, 2026 | 8:52 AM

ಮುಖ್ಯಾಂಶಗಳು

  • ಸೆಟ್‌ನಲ್ಲೇ ಮುಷ್ಕರ: ಆರ್ಜಿವಿ ಚಿತ್ರೀಕರಣಕ್ಕೆ ಬಿದ್ದ ಬ್ರೇಕ್
  • ಕಾರ್ಮಿಕರ ಪ್ರತಿಭಟನೆಗೆ ಮಣಿದು ಕೋಟಿ ರೂ. ಪಾವತಿಸಿದ ನಿರ್ದೇಶಕ
  • 9 ವರ್ಷಗಳ ಹಳೆಯ ಬಾಕಿ: ಕೊನೆಗೂ ತಂತ್ರಜ್ಞರಿಗೆ ಸಿಕ್ತು ನ್ಯಾಯ

ಪ್ರಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಕೊನೆಗೂ ತಮ್ಮ ಹಳೆಯ ಸಾಲವನ್ನು ತೀರಿಸಿದ್ದಾರೆ. ಸುಮಾರು ಒಂಬತ್ತು ವರ್ಷಗಳಿಂದ ಉಳಿಸಿಕೊಂಡಿದ್ದ 1.11 ಕೋಟಿ ರೂಪಾಯಿ ಬಾಕಿ ಹಣವನ್ನು ಕಾರ್ಮಿಕರಿಗೆ ಪಾವತಿಸಿದ್ದಾರೆ. ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ಸಂಘಟನೆಯು ಅವರ ಹೊಸ ಚಿತ್ರದ ಶೂಟಿಂಗ್ ನಿಲ್ಲಿಸಿದ ಕಾರಣ ಈ ಮಹತ್ವದ ಬೆಳವಣಿಗೆ ನಡೆದಿದೆ. ಇದರಿಂದಾಗಿ ಸ್ಥಗಿತಗೊಂಡಿದ್ದ ಸಿನಿಮಾ ಚಿತ್ರೀಕರಣ ಮತ್ತೆ ಶುರುವಾಗಿದೆ.

ರಾಮ್ ಗೋಪಾಲ್ ವರ್ಮಾ ಸದ್ಯ ‘ಪೊಲೀಸ್ ಕಂಪನಿ’ ಹೆಸರಿನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಹರ್ಷವರ್ಧನ್ ರಾಣೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಸೆಟ್‌ನಲ್ಲಿ ಹಠಾತ್ತನೆ ಕೆಲಸವನ್ನು ನಿಲ್ಲಿಸಲಾಯಿತು. ಕಾರ್ಮಿಕರ ಸಂಘಟನೆಯ ಆದೇಶದ ಮೇರೆಗೆ ಈ ಮುಷ್ಕರ ನಡೆಯಿತು.

ಹಿಂದಿನ ಸಿನಿಮಾಗಳ ಬಾಕಿ ಹಣ ನೀಡುವಂತೆ ವರ್ಮಾ ಅವರಿಗೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಆದರೂ ಅವರು ಯಾವುದೇ ಸ್ಪಂದನೆ ನೀಡಿರಲಿಲ್ಲ. ಅಂತಿಮವಾಗಿ ಕ್ಯಾಮೆರಾಮನ್‌ಗಳು ಹಾಗೂ ಲೈಟಿಂಗ್ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿದರು. ಫೈಟರ್‌ಗಳು ಮತ್ತು ಸ್ಪಾಟ್ ಬಾಯ್‌ಗಳು ಕೂಡ ಸಾಥ್ ನೀಡಿದರು.

ತಂತ್ರಜ್ಞರು ಮತ್ತು ದಿನಗೂಲಿ ನೌಕರರಿಗೂ ಕುಟುಂಬಗಳಿರುತ್ತವೆ ಎಂದು ಸಂಘಟನೆ ಎಚ್ಚರಿಸಿದೆ. ಅವರ ಹಕ್ಕಿನ ಹಣವನ್ನು ಯಾರೂ ಮುಟ್ಟಬಾರದು ಎಂದು ಪದಾಧಿಕಾರಿಗಳು ಹೇಳಿದ್ದಾರೆ. ಚಿತ್ರೀಕರಣ ನಿಲ್ಲುತ್ತಿದ್ದಂತೆ ಎಚ್ಚೆತ್ತ ವರ್ಮಾ ತಕ್ಷಣವೇ ಹಣ ಪಾವತಿಸಿದ್ದಾರೆ.

ಈ ಹಿಂದೆ ‘ಸರ್ಕಾರ್ 3’ ಮತ್ತು ‘ಆಫೀಸರ್’ ಚಿತ್ರಗಳ ಸೋಲಿನ ಬಳಿಕ ಈ ಹಣ ಬಾಕಿ ಉಳಿದಿತ್ತು. 2019 ರಲ್ಲೇ ಹಣ ತೀರಿಸುವುದಾಗಿ ವರ್ಮಾ ಭರವಸೆ ಪತ್ರ ಬರೆದಿದ್ದರು. ಆದರೆ ಹಲವು ವರ್ಷಗಳ ಕಾಲ ಹಣ ಸಂದಾಯ ಮಾಡಿರಲಿಲ್ಲ. ಈಗ ಚಿತ್ರೀಕರಣಕ್ಕೆ ತಡೆ ಬಿದ್ದ ನಂತರವೇ ಪೂರ್ಣ ಹಣ ಬಿಡುಗಡೆಯಾಗಿದೆ.

ಇದನ್ನೂ ಓದಿ: ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಜೀವನ ಆಧರಿಸಿ ಸಿನಿಮಾ ಘೋಷಿಸಿದ ಆರ್​ಜಿವಿ

ರಿಯಲ್ ಲೈಫ್ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರ ಸಾಹಸಮಯ ಜೀವನದ ಕಥೆಯಿಂದ ಪ್ರೇರಿತಗೊಂಡು ‘ಪೋಲಿಸ್ ಕಂಪನಿ’ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರದ ರೋಮಾಂಚಕಾರಿ ಎನ್‌ಕೌಂಟರ್ ಪಡೆಯ ಕಥೆಯಲ್ಲಿ ದಯಾ ನಾಯಕ್ ಅವರ ಪ್ರಭಾವಿತ ಪಾತ್ರಕ್ಕೆ ನಟ ಹರ್ಷವರ್ಧನ್ ರಾಣೆ ಜೀವ ತುಂಬಲಿದ್ದಾರೆ. ಅದ್ದೂರಿ ತಾರಾಗಣ ಹೊಂದಿರುವ ಈ ಸಿನಿಮಾದ ಜೊತೆಗೆ, ಹರ್ಷವರ್ಧನ್ ರಾಣೆ ‘ಪೋಲಿಸ್ ಸ್ಟೇಷನ್ ಮೇಂ ಭೂತ್’ ಎಂಬ ಮತ್ತೊಂದು ವಿಭಿನ್ನ ಚಿತ್ರದಲ್ಲೂ ಬ್ಯುಸಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us