
ರಾಮ್ ಗೋಪಾಲ್ ವರ್ಮ (Ram Gopal Varma) ಅವರು ನಿರ್ದೇಶನದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರು ಸ್ಯಾಂಡಲ್ವುಡ್ ಸ್ಟಾರ್ ನಟರ ಜತೆ ಕನ್ನಡದಲ್ಲೂ ಸಿನಿಮಾ ಮಾಡಿದ್ದಾರೆ. ಈಗ ಉಪೇಂದ್ರ (Upendra) ಜತೆ ಆರ್ಜಿವಿ (RJV) ಕೈ ಜೋಡಿಸಿದ್ದಾರೆ. ಇಬ್ಬರೂ ಸೇರಿ ಹೊಸ ಸಿನಿಮಾ ಮಾಡುತ್ತಿದ್ದು, ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಟ್ವಿಟರ್ನಲ್ಲಿ ರಾಮ್ ಗೋಪಾಲ್ ವರ್ಮ ಈ ಬಗ್ಗೆ ಅನೌನ್ಸ್ಮೆಂಟ್ ಮಾಡಿದ್ದಾರೆ. ವಿಶೇಷ ಎಂದರೆ, ಭಾರತದ ದೊಡ್ಡ ಗ್ಯಾಂಗ್ಸ್ಟರ್ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗುತ್ತಿದೆ. ಸಿನಿಮಾ ಬಗ್ಗೆ ರಿಲೀಸ್ ಆಗಿರುವ ಚಿಕ್ಕ ವಿಡಿಯೋ ತುಣುಕು ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.
ಸಿನಿಮಾಗಳನ್ನು ರಾ ಆಗಿ ಮಾಡೋಕೆ ಆರ್ಜಿವಿ ಎತ್ತಿದ ಕೈ. ಕ್ರೈಮ್ ಥ್ರಿಲ್ಲರ್ ಮಾದರಿಯ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಈಗ ಅವರು ಗ್ಯಾಂಗ್ಸ್ಟರ್ ಕಥೆ ಹೇಳುತ್ತಿರುವುದರಿಂದ ಸಹಜವಾಗಿಯೇ ಕುತೂಹಲ ಹುಟ್ಟಿದೆ. ‘ನನ್ನ ಹೊಸ ಸಿನಿಮಾ ಘೋಷಿಸಲು ಸಂತೋಷವಾಗುತ್ತಿದೆ. ಭಾರತದ ಕ್ರಿಮಿನಲ್ ಇತಿಹಾಸದಲ್ಲಿ ವಿಸ್ಮಯಕಾರಿಯಾಗಿ ಹಾಗೂ ವಿಶಿಷ್ಟ ದರೋಡೆಕೋರ ಎನಿಸಿಕೊಂಡಿರುವ ವ್ಯಕ್ತಿಯ ಜೀವನ ಆಧರಿಸಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಇದಕ್ಕೆ ‘ಆರ್’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರವನ್ನು ಎ ಸ್ಕ್ವೇರ್ ಪ್ರೊಡಕ್ಷನ್ಸ್ ನಿರ್ಮಿಸಲಿದೆ’ ಎಂದು ರಾಮ್ ಗೋಪಾಲ್ ವರ್ಮ ಬರೆದುಕೊಂಡಿದ್ದಾರೆ.
ಹಂಚಿಕೊಂಡಿರುವ ಸಣ್ಣ ವಿಡಿಯೋ ತುಣುಕಿನಲ್ಲಿ ಉಪೇಂದ್ರ ಅವರು ಚಾಕು ಹಿಡಿದು ಕಾಣಿಸಿಕೊಂಡಿದ್ದಾರೆ. ಅಲ್ಲದೆ, ವಿಡಿಯೋದಲ್ಲಿ ಅವರು ಚಾಕುಗೆ ಮುತ್ತು ಕೊಡುತ್ತಿದ್ದಾರೆ. ಮುಳ್ಳು ಬೇಲಿಗಳ ಮಧ್ಯೆ ‘ಆರ್’ ಚಿತ್ರದ ಶೀರ್ಷಿಕೆ ಇದೆ. ಅಲ್ಲದೆ, ಬ್ಯಾಕ್ಗ್ರೌಂಡ್ನಲ್ಲಿ ರಕ್ತದ ಕಲೆ ಇದೆ. ಈ ಮೂಲಕ ಸಿನಿಮಾದಲ್ಲಿ ರಕ್ತದೋಕುಳಿ ಇರಲಿದೆ ಎಂಬುದು ಪಕ್ಕಾ ಆಗಿದೆ.
ಈ ಮೊದಲು ರಾಮ್ ಗೋಪಾಲ್ ವರ್ಮ ಅವರು ಶಿವರಾಜ್ಕುಮಾರ್ಗೆ ಆ್ಯಕ್ಷನ್ ಕಟ್ ಹೇಳಿದ್ದರು. ‘ಕಿಲ್ಲಿಂಗ್ ವೀರಪ್ಪನ್’ ಸಿನಿಮಾ ಆರ್ಜಿವಿ ಅವರ ಮೊದಲ ಕನ್ನಡ ಸಿನಿಮಾ. ತೆಲುಗು ಭಾಷೆಯಲ್ಲೂ ಚಿತ್ರ ರಿಲೀಸ್ ಆಗಿತ್ತು. ಆ ಬಳಿಕ ಡಾಲಿ ಧನಂಜಯ ನಟನೆಯ ‘ಭೈರವ ಗೀತ’ ಚಿತ್ರವನ್ನು ಆರ್ಜಿವಿ ನಿರ್ಮಾಣ ಮಾಡಿದ್ದರು. ಇದು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗಿತ್ತು. ಈಗ ಉಪೇಂದ್ರ ಜತೆ ಅವರು ಸಿನಿಮಾ ಮಾಡುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ? ಇದು ಯಾರ ಬಗ್ಗೆ ಮಾಡುತ್ತಿರುವ ಸಿನಿಮಾ, ತಾಂತ್ರಿಕ ವರ್ಗ ಹೇಗಿರಲಿದೆ ಎಂಬ ವಿಚಾರ ಇನ್ನಷ್ಟೇ ತಿಳಿದುಬರಬೇಕಿದೆ.
ಇದನ್ನೂ ಓದಿ: ಹುಡುಗಿಯ ಅಂಗದ ಬಗ್ಗೆ ಮಾತನಾಡಿ ಕಾಫಿ ಶಾಪ್ನಲ್ಲಿ ಕೆನ್ನೆಗೆ ಏಟು ತಿಂದ ರಾಮ್ ಗೋಪಾಲ್ ವರ್ಮಾ
‘ಪುನೀತ್ ಸಾವಿನಿಂದ ಕಟು ಸತ್ಯ ಬಯಲಾಗಿದೆ’: ಆತಂಕದಲ್ಲೇ ಅನಿಸಿಕೆ ಹಂಚಿಕೊಂಡ ರಾಮ್ ಗೋಪಾಲ್ ವರ್ಮಾ
Published On - 2:33 pm, Fri, 25 March 22