ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ದಾಖಲಾಗಿದ್ದಾರೆ. ಆ ಬಳಿಕ ವೈದ್ಯ ನವೀನ್ ಅಪ್ಪಾಜಿ ಗೌಡ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ‘ಬೆನ್ನು ನೋವಿನಿಂದ ದರ್ಶನ್ ಅವರು ಇಂದು 3.30ರ ಸುಮಾರಿಗೆ ಬಂದು ಅಡ್ಮಿಟ್ ಆಗಿದ್ದಾರೆ. ನಾವು ತಪಾಸಣೆ ಮಾಡಿದ್ದೇನೆ. ಕಾಲು ನೋವು ಇದೆ. ಅದರಿಂದ ಬೆನ್ನು ನೋವು ಕೂಡ ಇದೆ. ಎಡಗಡೆ ಕಾಲಿನಲ್ಲಿ ವೀಕ್ನೆಸ್ ಇದೆ. ಆ ಕಾಲ ಆಡುವುದು ಸ್ವಲ್ಪ ಕಮ್ಮಿ ಆಗಿದೆ. ಹೆಚ್ಚಿನ ತಪಾಸಣೆ ಮಾಡಿ, ಯಾವ ರೀತಿ ಚಿಕಿತ್ಸೆ ಬೇಕು ಎಂಬುದನ್ನು ನಿರ್ಧರಿಸುತ್ತೇವೆ. ಪೂರ್ತಿ ತಪಾಸಣೆ ಆದ ನಂತರ ಏನಾಗಿದೆ ಎಂಬುದು ನಮಗೆ ಗೊತ್ತಾಗುತ್ತದೆ. ಎಂಆರ್ಐ, ಎಕ್ಸ್ರೇ ಮತ್ತು ರಕ್ತದ ಪರೀಕ್ಷೆ ಮಾಡಬೇಕಾಗುತ್ತದೆ’ ಎಂದು ವೈದ್ಯರು ಹೇಳಿದ್ದಾರೆ.
‘ಒಂದು ವಾರದ ಹಿಂದೆ ಮಾಡಿದ ಎಂಆರ್ಐ ಫಿಲ್ಮ್ ನಮಗೆ ಲಭ್ಯವಾಗಿಲ್ಲ. ಆದ್ದರಿಂದ ಇನ್ನೊಮ್ಮೆ ಎಂಆರ್ಐ ಮಾಡಬೇಕಾಗುತ್ತದೆ. ಸದ್ಯಕ್ಕೆ ಅವರಿಗೆ ತುಂಬ ನೋವು ಇದೆ. ಶಸ್ತ್ರ ಚಿಕಿತ್ಸೆಯ ಅಗತ್ಯ ಇದೆಯೋ ಇಲ್ಲವೋ ಎಂಬುದು ಈಗಲೇ ಹೇಳೋಕೆ ಆಗಲ್ಲ. 24ರಿಂದ 48 ಗಂಟೆಯ ಒಳಗೆ ಎಲ್ಲ ರಿಪೋರ್ಟ್ಗಳು ಸಿಗುತ್ತವೆ. ತುಂಬ ನೋವು ಇರುವುದರಿಂದ ಔಷಧಿ ನೀಡಲು ಆರಂಭಿಸಿದ್ದೇವೆ’ ಎಂದಿದ್ದಾರೆ ಡಾ. ನವೀನ್ ಅಪ್ಪಾಜಿಗೌಡ.
ದರ್ಶನ್ ಅವರು ಬಳ್ಳಾರಿ ಜೈಲಿನಲ್ಲಿ ನಡೆದಾಡಲು ಕಷ್ಟಪಡುತ್ತಿದ್ದ ವಿಡಿಯೋಗಳನ್ನು ನೋಡಿ ಅಭಿಮಾನಿಗಳು, ಕುಟುಂಬದವರು, ಆಪ್ತರು ಬೇಸರ ಮಾಡಿಕೊಂಡಿದ್ದರು. ಆದಷ್ಟು ಬೇಗ ಅವರಿಗೆ ಜಾಮೀನು ಸಿಗುವಂತಾಗಲಿ ಎಂದು ಪ್ರಾರ್ಥಿಸಿದ್ದರು. ಈಗ ಅವರು ಜಾಮೀನು ಪಡೆದು 2 ದಿನಗಳು ಕಳೆದಿವೆ. ಒಂದು ವಾರದ ಒಳಗೆ ಅವರು ತಮ್ಮ ಚಿಕಿತ್ಸೆಯ ವರದಿಯನ್ನು ಕೋರ್ಟ್ಗೆ ನೀಡಬೇಕಿದೆ.
ಇದನ್ನೂ ಓದಿ: ನಟ ದರ್ಶನ್ ವಿಚಾರದಲ್ಲಿ ಅರ್ಜುನ್ ಗುರೂಜಿ ನುಡಿದಿದ್ದ ಭವಿಷ್ಯ ನಿಜ ಆಯ್ತು
ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಎ2 ಆಗಿರುವ ದರ್ಶನ್ 6 ವಾರಗಳ ಕಾಲ ಜಾಮೀನು ಪಡೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಅವರಿಗೆ ಬೆನ್ನು ನೋವು ಇತ್ತು. ಕಳೆದ ವರ್ಷ ‘ಕಾಟೇರ’ ಸಿನಿಮಾ ಶೂಟಿಂಗ್ ಮಾಡುವಾಗಲೂ ಅವರು ನೋವು ಅನುಭವಿಸುತ್ತಿದ್ದರು. ಜೈಲಿಗೆ ಸೇರಿದ ಬಳಿಕ ನೋವು ಹೆಚ್ಚಾಯಿತು. ಈಗ ಚಿಕಿತ್ಸೆ ಪಡೆಯಲು ಬಂದಿರುವ ಅವರೊಂದಿಗೆ ಪತ್ನಿ ವಿಜಯಲಕ್ಷ್ಮಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.