
ನಟ ಶಮಂತ್ ಬ್ರೋ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಮೂಲಕ ಖ್ಯಾತಿ ಪಡೆದಿದ್ದರು. ಬಳಿಕ ಅವರು ಧಾರಾವಾಹಿಗಳಲ್ಲಿ ಬ್ಯುಸಿ ಆದರು. ‘ಲಕ್ಷ್ಮೀ ಬಾರಮ್ಮ’, ʻಅಗ್ನಿಸಾಕ್ಷಿ’ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಅವರು ಹೆಚ್ಚು ಪರಿಚಿತರಾದರು. ಶಮಂತ್ ಬ್ರೋ ಗೌಡ ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ಈಗ ಅವರು ಕಿರುತೆರೆಯಿಂದ ಹಿರಿತೆರೆಗೆ ಹೀರೋ ಆಗಿ ಬಡ್ತಿ ಪಡೆಯುತ್ತಿದ್ದಾರೆ.
ಹೌದು, ಶಮಂತ್ ಬ್ರೋ ಗೌಡ ಅವರು ಪೂರ್ಣಪ್ರಮಾಣದ ನಾಯಕನಟನಾಗಿ ಚಂದನವನಕ್ಕೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ವಿಭಿನ್ನ ಕಥಾಹಂದರದ ‘ರಾಘು’ ಹಾಗೂ ‘ಶೆಫ್ ಚಿದಂಬರ’ ಸಿನಿಮಾಗಳ ಮೂಲಕ ಗಮನ ಸೆಳೆದ ನಿರ್ದೇಶಕ ಎಂ. ಆನಂದ್ ರಾಜ್ ಅವರು ಈಗ ‘ಕದ್ರಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಸಿನಿಮಾಗೆ ಶಮಂತ್ ಬ್ರೋ ಗೌಡ ಅವರು ಹೀರೋ ಆಗಿದ್ದಾರೆ.
ಶೀರ್ಷಿಕೆಯ ಮೂಲಕ ‘ಕದ್ರಿ’ ಸಿನಿಮಾ ಗಮನ ಸೆಳೆಯುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಪ್ರಯೋಗವಾಗಿ ಈ ಸಿನಿಮಾ ಮೂಡಿಬರಲಿದೆ ಎಂದು ಚಿತ್ರತಂಡ ಹೇಳಿದೆ. ‘ಕನ್ನಡದ ಜಾನಪದ ಹಾರರ್’ ಎಂಬ ಪ್ರಕಾರದಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ. ಇದು ಪ್ರೇಕ್ಷಕರಿಗೆ ಹೊಸ ಬಗೆಯ ಭಯಾನಕ ಮತ್ತು ರೋಚಕ ಅನುಭವ ನೀಡುವ ಸುಳಿವು ಸಿಕ್ಕಿದೆ.
‘ಕಲ್ಪನೆಗೂ ಮೀರಿದ ಕತ್ತಲೆ, ಕಾಲದಿಂದ ಅಚ್ಚಳಿಯದೆ ಉಳಿದಿರುವ ಭಯ’ ಎಂಬ ಕುತೂಹಲಕಾರಿ ಅಡಿಬರಹದೊಂದಿಗೆ ‘ಕದ್ರಿ’ ಚಿತ್ರದ ಶೀರ್ಷಿಕೆ ವಿಶೇಷ ಎನಿಸಿಕೊಂಡಿದೆ. ಎಂ. ಆನಂದ್ ರಾಜ್ ಅವರೇ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆಯ ಜವಾಬ್ದಾರಿ ಹೊತ್ತಿದ್ದಾರೆ. ನಾಗರಾಜ್ ಸಿ. ಅವರೊಂದಿಗೆ ಕೈಜೋಡಿಸಿ ಆನಂದ್ ರಾಜ್ ಅವರೇ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ: ‘ಗಾನವಿ ನನ್ನ ತಲೆ ಮೇಲೆ ಕಾಲು ಇಟ್ಟಿದ್ದಳು’: ಬಿಗ್ ಬಾಸ್ ಒಳಗಿನ ವಿಷಯ ತೆರೆದಿಟ್ಟ ಸೋನಿಕಾ
ಈ ಸಿನಿಮಾಗೆ ಉದಯ ಲೀಲಾ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ವಿಜಯೇಂದ್ರ ಜೋಡಿದಾರ ಸಂಭಾಷಣೆ ಬರೆದಿದ್ದಾರೆ. ಸೂರಜ್ ಜೋಯಿಸ್ ಮತ್ತು ಜುಬೈರ್ ಮುಹಮ್ಮದ್ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಸೂರಜ್ ಜೋಯಿಸ್ ಅವರು ಹಿನ್ನೆಲೆ ಸಂಗೀತ ನೀಡಲಿದ್ದಾರೆ. ನಾಗೇಂದ್ರ ಉಜ್ಜನಿ ಅವರ ಸಂಕಲನ, ಅನಿಲ್ ಕಬೀರ್ ಅವರ ಕಲಾ ನಿರ್ದೇಶನ, ರಾ ಸೀನಾ ಅವರ ಸಾಹಸ ನಿರ್ದೇಶನ, ಅಭಿಷೇಕ್ ಮಠದ್ ಅವರ ನೃತ್ಯ ನಿರ್ದೇಶನ ಈ ಸಿನಿಮಾಗೆ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.