ಬಿಗ್ ಬಾಸ್: ಸೌಂದರ್ಯಾ ಶೆಟ್ಟಿಗೆ ತೀವ್ರ ಮುಖಭಂಗ; 8 ರೆಡ್ ಫ್ಲ್ಯಾಗ್ ನೀಡಿದ ಸ್ಪರ್ಧಿಗಳು
ಬಿಗ್ ಬಾಸ್ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಭಾರಿ ಆತ್ಮವಿಶ್ವಾಸ ಹೊಂದಿದ್ದರು. ಆದರೆ ಅವರಿಗೆ ಈಗ ಮುಖಭಂಗ ಆಗಿದೆ. ಒಟ್ಟು 8 ಪುರುಷ ಸದಸ್ಯರು ಸೌಂದರ್ಯಾ ಶೆಟ್ಟಿ ಬಗ್ಗೆ ನೆಗೆಟಿವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಾರ ಮಹಾರಾಣಿ ಆಗಲು ಸೌಂದರ್ಯಾ ಶೆಟ್ಟಿಗೆ ಅರ್ಹತೆ ಇಲ್ಲ ಎಂದು ಎಲ್ಲರೂ ಟೀಕೆ ಮಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ 8 ಪುರುಷರು ಹಾಗೂ 3 ಮಹಿಳಾ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಆ ಮೂವರು ಮಹಿಳಾ ಸ್ಪರ್ಧಿಗಳನ್ನು ಯುವರಾಣಿಯರು ಎಂದು ಕರೆಯಲಾಗಿದೆ. ಅವರ ಪೈಕಿ ಒಬ್ಬರನ್ನು ಮಹಾರಾಣಿ ಎಂದು ಆಯ್ಕೆ ಮಾಡಲು ಚಟುವಟಿಕೆ ನೀಡಲಾಗಿದೆ. ಅದಕ್ಕಾಗಿ ಕೆಂಪು ಮತ್ತು ಹಸಿರು ಬಾವುಟ ನೀಡಲು 8 ಪುರುಷ ಸ್ಪರ್ಧಿಗಳಿಗೆ ಸೂಚಿಸಲಾಯಿತು. ಆಗ ಸೌಂದರ್ಯಾ ಶೆಟ್ಟಿ ಅವರಿಗೆ 8 ರೆಡ್ ಫ್ಲ್ಯಾಗ್ ಬಂದಿದೆ! ಅದರಿಂದಾಗಿ ಅವರಿಗೆ ತೀವ್ರ ಮುಖಭಂಗ ಆದಂತಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿರುವ ಎಲ್ಲಾ ಪುರುಷ ಸದಸ್ಯರು ಸೌಂದರ್ಯಾ ಶೆಟ್ಟಿ ಅವರನ್ನು ತೆಗಳಿದ್ದಾರೆ. ಅವರಿಗೆ ಮಹಾರಾಣಿ ಆಗುವ ಅರ್ಹತೆ ಇಲ್ಲ ಎಂದು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಕೋಪ ಬಂದಾಗ ಸೌಂದರ್ಯಾ ಅವರು ಬೇರೆ ರೀತಿ ನಡೆದುಕೊಳ್ಳುತ್ತಾರೆ. ಹಾಗಾಗಿ ಅವರಿಗೆ ಅರ್ಹತೆ ಇಲ್ಲ’ ಎಂದು ತಾಂಡವ್ ರಾಮ್ ಅವರು ನೇರವಾಗಿ ಹೇಳಿದ್ದಾರೆ.
‘ಸೌಂದರ್ಯಾ ಏನು ಮಾತಾಡುತ್ತಾರೆ ಎಂಬುದು ಅವರಿಗೇ ಗೊತ್ತಿಲ್ಲ. ಬೇಕಂತಲೇ ಎಲ್ಲರನ್ನೂ ಕೆಣಕುತ್ತಾರೆ. ಗುಂಪುಗಾರಿಕೆ ಮಾಡುತ್ತಾರೆ’ ಎಂದು ಜಗದೀಶ್ ಅವರು ಆರೋಪ ಮಾಡಿದ್ದಾರೆ. ‘ಕೋಪ ಬಂದಾಗ ಸೌಂದರ್ಯಾ ತೆಗೆದುಕೊಳ್ಳುವ ನಿರ್ಧಾರ ಸರಿ ಇರಲ್ಲ. ಬೇರೆಯವರನ್ನು ಕೆಳಗಿಟ್ಟು ನೋಡುತ್ತಾರೆ’ ಎಂದು ಗಗನ್ ಅವರು ಆರೋಪ ಮಾಡಿದ್ದಾರೆ.
‘ಸೌಂದರ್ಯಾ ಇದ್ದಲ್ಲಿ ಜಗಳವೇ ಜಾಸ್ತಿ. ಇಬ್ಬರು ಚೆನ್ನಾಗಿ ಇದ್ದರೆ ಅವರ ನಡುವೆ ತಂದು ಇಡುತ್ತಾರೆ’ ಎಂದು ಮಂಜ ಅವರು ಟೀಕೆ ಮಾಡಿದ್ದಾರೆ. ‘ಸೌಂದರ್ಯಾ ಬಾಯಿಗೆ ಬಂದಂತೆ ಮಾತನಾಡಬಾರದು’ ಎಂದು ಪ್ರಶಾಂತ್ ಅವರು ಆರೋಪಿಸಿದ್ದಾರೆ. ‘ಆಟದಲ್ಲಿ ಸೌಂದರ್ಯಾ ಹಿಂದುಳಿಯುತ್ತಾರೆ. ಮುಂದೆ ಬಂದು ಆಡಲ್ಲ. ಐಡೆಂಟಿಟಿ ಇಲ್ಲದೇ ಇಲ್ಲಿಯ ತನಕ ಬಂದಿರುವ ವ್ಯಕ್ತಿಯೇ ಸೌಂದರ್ಯಾ’ ಎಂದು ಧನುಷ್ ಅವರು ಖಾರವಾಗಿ ಹೇಳಿದ್ದಾರೆ.
ಇದನ್ನೂ ಓದಿ: ‘ಗಾನವಿ ಮೆಮೋರಿ ಲಾಸ್ ಸಂಪೂರ್ಣ ಡ್ರಾಮಾ’; ಸೌಂದರ್ಯಾ ಶೆಟ್ಟಿ ಬಿಚ್ಚಿಟ್ಟ ಅಸಲಿ ಕಥೆ
‘ಮಹಾರಾಣಿಗೆ ಕೋಪ ಕಡಿಮೆ ಇರಬೇಕು, ತಾಳ್ಮೆ ಜಾಸ್ತಿ ಇರಬೇಕು. ಅದು ಸೌಂದರ್ಯಾಗೆ ಆ ಗುಣ ಇಲ್ಲ’ ಎಂದು ಯಶಸ್ ಅವರು ಹೇಳಿದ್ದಾರೆ. ‘ಸೌಂದರ್ಯಾಗೆ ಯೋಗ್ಯತೆ ಇಲ್ಲ. ಈ ಹಿಂದಿನ ಟಾಸ್ಕ್ ವೇಳೆ ಅವರು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಹಾಗಾಗಿ ಅವರು ಮಹಾರಾಣಿ ಆದರೆ ಎಡವುತ್ತಾರೆ’ ಎಂದು ಕಿರಣ್ ಶಾಸ್ತ್ರಿ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




