ದೆಹಲಿ: ಬಾಲಿವುಡ್ ಡ್ರಗ್ಸ್ ಮಾಫಿಯಾ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕೇವಲ ನಟಿಯರನ್ನೇ NCB ಟಾರ್ಗೆಟ್ ಮಾಡುತ್ತಿದೆ ಎಂಬ ಅಪವಾದದಿಂದ ಹೊರಬರಲು NCB ನಟರನ್ನು ಟಾರ್ಗೆಟ್ ಮಾಡಿದ್ದು, ಬಿಗ್ ಸ್ಟಾರ್ ನಟರಿಗೆ ಕಂಟಕ ಎದುರಾಗಿದೆ.
ಸುಶಾಂತ್ ಸಿಂಗ್ ನಿಗೂಢ ಸಾವಿನ ಪ್ರಕರಣದ ದಿನಕ್ಕೊಂದು ಮಜಲಿಗೆ ಹೊರಳುತ್ತಿದೆ. ಸುಶಾಂತ್ ಸಾವಿನ ಹಿಂದಿದೆ ಎನ್ನಲಾಗುತ್ತಿರುವ ಡ್ರಗ್ಸ್ ಮಾಫಿಯಾದ ತನಿಖೆಗೆ ಇಳಿದಿರುವ ಎನ್‌ಸಿಬಿ ಅಧಿಕಾರಿಗಳಿಗೆ ದಿನಕ್ಕೊಂದು ಸುಳಿವು ಸಿಗುತ್ತಿದೆ.ರಿಯಾ ಚಕ್ರವರ್ತಿ ವಿಚಾರಣೆಗೆ ಒಳಪಡುತ್ತಿದ್ದಂತೆ, ಬಾಲಿವುಡ್‌ನ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಆಲಿಖಾನ್ ಸೇರಿ ಹಲವು ನಟಿಯರನ್ನು ಎನ್‌ಸಿಬಿ ವಿಚಾರಣೆ ನಡೆಸಿತ್ತು.
ಈ ವಿಚಾರಣೆ ವೇಳೆ ಕೇವಲ ನಟಿಯರನ್ನಷ್ಟೇ ಗುರಿ ಮಾಡಲಾಗುತ್ತಿದೆ ಎಂದು ಬಿಂಬಿಸಲಾಗಿತ್ತು. ಆದ್ರೆ ಇದೀಗ ಎನ್‌ಸಿಬಿ ಮುಂದಿನ ಸರದಿ ಸ್ಟಾರ್ ನಟರದ್ದು. ಶೀಘ್ರದಲ್ಲೇ ಒಂದಷ್ಟು ಸ್ಟಾರ್ ನಟರಿಗೆ ಸಮನ್ಸ್ ನೀಡಲಿದ್ದೇವೆ ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.
ಬಾಲಿವುಡ್ ಸ್ಟಾರ್ ನಟರಿಗೆ ಬಲೆ ಬೀಸಿದ ಎನ್‌ಸಿಬಿ
ಎನ್‌ಸಿಬಿ ನೋಟಿಸ್ ನೀಡಲಿರುವ ಆ ಸ್ಟಾರ್ ನಟರು ಯಾರು ಎಂಬ ಬಗ್ಗೆ ಎಲ್ಲಿಯೂ ಮಾಹಿತಿ ಬಹಿರಂಗವಾಗಿಲ್ಲ. ಆದರೆ, ಎ ಲಿಸ್ಟ್ ನಟರೇ ಆಗಿರಲಿದ್ದಾರೆ ಎಂಬ ಮಾತೂ ಸಹ ಕೇಳಿಬಂದಿದೆ. ದೇಶಭಕ್ತಿ ಸಿನಿಮಾ ಮೂಲಕವೇ ಸ್ಟಾರ್‌ಪಟ್ಟ ಗಿಟ್ಟಿಸಿಕೊಂಡ ಯಂಗ್ ನಟನಿಗೆ ವಿಚಾರಣೆಗೆ ಆಹ್ವಾನಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮಾಲ್ ಬಗ್ಗೆ ಸತ್ಯ ಬಿಚ್ಚಿಟ್ಟ ದೀಪಿಕಾ ಪಡುಕೋಣೆ!
ಇನ್ನು ದೀಪಿಕಾ ಪಡುಕೋಣೆ ಮತ್ತು ಆಕೆಯ ಮ್ಯಾನೇಜರ್ ಕರಿಷ್ಮಾ ನಡುವೆ ವಾಟ್ಸಾಪ್‌ನಲ್ಲಿ ನಡೆದಿರುವ ಸಂದೇಶ ವಿನಿಮಯ ಆಧರಿಸಿಯೇ ಎನ್‌ಸಿಬಿ ಈ ಇಬ್ಬರಿಗೂ ನೋಟಿಸ್ ನೀಡಿತ್ತು. ಇಬ್ಬರನ್ನೂ ಪ್ರತ್ಯೇಕವಾಗಿ ಹಾಗೂ ಒಟ್ಟಾಗಿಯೂ ಎನ್‌ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗುಪ್ತ ಸಂಕೇತದ ಬಗ್ಗೆ ವಿವರಣೆ ನೀಡಿದ್ದಾರಂತೆ. ವಾಟ್ಸಾಪ್ ಸಂದೇಶ ವಿನಿಯಮದ ವೇಳೆ ನಮೂದಾಗಿರುವ ‘ಮಾಲ್’ ಬಗ್ಗೆ ದೀಪಿಕಾ ಮತ್ತು ಕರಿಷ್ಮಾ ಎನ್‌ಸಿಬಿ ಮುಂದೆ ನೀಡಿರುವ ವಿವರಣೆಯೂ ಅಷ್ಟೇ ಕುತೂಹಲಕಾರಿಯಾಗಿದೆ.
ದೀಪಿಕಾಳ ಸೀಕ್ರೆಟ್ ಕೋಡ್:
ಪ್ರತಿದಿನ ಸೇದುವ ಸಿಗರೇಟ್‌ಗಳಿಗೆ ಇಬ್ಬರು ಸೀಕ್ರೆಟ್ ಕೋಡ್ ಇಟ್ಟುಕೊಂಡಿದ್ದರಂತೆ. ಮಾಲ್, ಹ್ಯಾಷ್, ಧೂಮ್ ಎಂಬುದು ಗುಪ್ತ ಸಂಕೇತವಂತೆ. ಹೀಗೆಂದು ಎನ್‌ಸಿಬಿ ಮುಂದೆ ದೀಪಿಕಾ, ಕರಿಷ್ಮಾ ಬಾಯ್ಬಿಟ್ಟಿದ್ದಾರೆ. ಅಂದಹಾಗೆ ಸಣ್ಣ ಮತ್ತು ಉತ್ತಮ ಗುಣಮಟ್ಟದ ಸಿಗರೇಟ್‌ಗೆ ಹ್ಯಾಷ್, ಮಾಲ್ ಹಾಗೂ ಒಳ್ಳೆಯ ಗುಣಮಟ್ಟದ ಸಿಗರೇಟ್‌ಗೆ ಧೂಮ್ ಎಂದು ಹೆಸರಿಟ್ಟಿದ್ದಾರಂತೆ.
ಇಷ್ಟಕ್ಕೆ ಇವರ ವಿಚಾರಣೆ ಮುಗಿದಿಲ್ಲ ಸ್ಟಾರ್ ನಟರ ವಿಚಾರಣೆ ನಂತರ ಮತ್ತೆ ಇಬ್ಬರಿಗೂ ಎನ್‌ಸಿಬಿ ಅಧಿಕಾರಿಗಳು ಗ್ರಿಲ್ ಮಾಡಲಿದ್ದಾರೆ. ಆಗ ಡ್ರಗ್ಸ್ ನಂಟಿನ ಇನ್ನಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗಲಿದೆ.
Published On - 7:35 am, Thu, 1 October 20