
‘ಅನಂತ ಪಯಣ’ ಸಿನಿಮಾ ನವೆಂಬರ್ 27ರಂದು ಬಿಡುಗಡೆ ಆಗಲಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಯಿತು. ಸಂಚಾರಿ ಕುರಿಗಾಹಿಗಳ ಕಥೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿದೆ. ಹಾಗಾಗಿ, ಕಥೆಗೆ ತಕ್ಕಂತೆಯೇ ನಿಜವಾದ ಸಂಚಾರಿ ಕುರಿಗಾಹಿಗಳನ್ನು ಕರೆಸಿ, ಅವರಿಂದ ಟ್ರೇಲರ್ ಬಿಡುಗಡೆ ಮಾಡಿಸಲಾಯಿತು. ಈ ಕಾರ್ಯಕ್ರಮಕ್ಕೆ ಸಿ.ಟಿ. ರವಿ ಮತ್ತು ಎಚ್.ಎಂ. ರೇವಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಟ್ರೇಲರ್ ನೋಡಿದ ಸಿ.ಟಿ. ರವಿ ಹಾಗೂ ಎಚ್.ಎಂ. ರೇವಣ್ಣ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ‘ಕುರಿಗಾಹಿಗಳ ಬದುಕಿನ ಬಗ್ಗೆ ಕಥೆ ಹೊಂದಿರುವ ಈ ಸಿನಿಮಾ ಯಶಸ್ವಿ ಆಗಲಿ ಅಂತ ಹಾರೈಸುತ್ತೇನೆ. ಈಗ ಟ್ರೇಲರ್ ಮಾತ್ರ ನೋಡಿದ್ದೇವೆ. ಪಿಕ್ಚರ್ ಅಭೀ ಬಾಕಿ ಹೈ’ ಎಂದು ಸಿ.ಟಿ. ರವಿ ಅವರು ಹೇಳಿದರು. ಆ ಮಾತಿಗೆ ಎಚ್.ಎಂ. ರೇವಣ್ಣ ಅವರು ಕೂಡ ಸಹಮತ ಸೂಚಿಸಿದರು.
‘ಈ ರಾಜ್ಯದಲ್ಲಿ ಕುರಿಗಾಹಿಗಳ ಪರಿಸ್ಥಿತಿಯನ್ನು ಗಮನಿಸಿ ಅವರಿಗೆ ಸಹಾಯ ಮಾಡಲು ನಾವು ಪ್ರಯತ್ನ ಮಾಡಿದ್ದೆವು. ಅವರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಈಗ ಗೋಮಾಳ ಇಲ್ಲ, ಕಾಡಿಗೆ ಪ್ರವೇಶ ಇಲ್ಲ. ಬೇರೆಯವರು ಕೊಡುವ ದವಸ ಧಾನ್ಯ ನಂಬಿಕೊಂಡು ಜೀವನ ಮಾಡುತ್ತಾರೆ. ಇಂಥ ಕುರಿಗಾಹಿಗಳ ಬಗ್ಗೆ ಸಿನಿಮಾ ನಿರ್ಮಾಣ ಆಗಿರುವುದು ಸಂತೋಷ. ಈ ಚಿತ್ರ ಯಶಸ್ವಿ ಆಗಲಿ. ಎಲ್ಲ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಒಳ್ಳೆಯದಾಗಲಿ’ ಎಂದು ಎಚ್.ಎಂ. ರೇವಣ್ಣ ಹೇಳಿದರು.
‘ಅನಂತ ಪಯಣ’ ಸಿನಿಮಾದಲ್ಲಿ ಶ್ರೀಕಾಕಾ ಅವರು ನಾಯಕನಾಗಿ ನಟಿಸಿದ್ದಾರೆ. ಅಲ್ಲದೇ, ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ನವೆಂಬರ್ 27ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿರುವ ಈ ಸಿನಿಮಾದ ಬಗ್ಗೆ ಚಿತ್ರತಂಡದವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಬೆಂಗಳೂರು, ಉತ್ತರ ಕರ್ನಾಟಕ, ಮಹಾರಾಷ್ಟ್ರದಲ್ಲಿ ಚಿತ್ರೀಕರಣ ಮಾಡಲಾಗಿದೆ. ನೈಜವಾಗಿ ಚಿತ್ರೀಕರಣ ಮಾಡುವ ಪ್ರಯತ್ನ ಮಾಡಲಾಗಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ‘ಅನಂತಪಯಣ’ ಚಿತ್ರದ ‘ನನ್ನ ಕಂಬಳಿ’ ಹಾಡು ಬಿಡುಗಡೆ ಮಾಡಿದ ಸತೀಶ್ ಜಾರಕಿಹೊಳಿ
ನಟಿ ನಿವಿಷ್ಕಾ ಪಾಟೀಲ್ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಗೌರಿ ಎಂಬ ಪಾತ್ರವನ್ನು ಅವರು ಮಾಡಿದ್ದಾರೆ. ‘ಈ ತಂಡದ ಜೊತೆ ಕೆಲಸ ಮಾಡಿದ್ದು ಖುಷಿ ಇದೆ. ಇಂದಿನ ಕಾಲದಲ್ಲಿ ಕುರಿಗಾಹಿಗಳು ಏನೆಲ್ಲಾ ಹೋರಾಟ ಮಾಡುತ್ತಾರೆ ಎಂಬುದು ಕೇಳಿ ಸಿನಿಮಾ ಮಾಡಲು ಒಪ್ಪಿಕೊಂಡೆ’ ಎಂದು ಅವರು ಹೇಳಿದರು.
ನಿರ್ಮಾಪಕ ಸಂತೋಷ ಹೆಗಡೆ ಹಾಗೂ ‘ಎಸ್.ಕೆ. ಫಿಲ್ಮ್ಸ್ ಫ್ಯಾಕ್ಟರಿ’ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆಕಾಶ್ ಪರ್ವ ಅವರು ಸಂಗೀತ ನೀಡಿದ್ದಾರೆ. ಬಾಲ ರಾಜವಾಡಿ, ಸಂದೀಪ್ ನೀನಾಸಂ, ಲಕ್ಷ್ಮಿ ಸಿದ್ದಯ್ಯ, ಮಂಜುನಾಥ್ ಹೆಗ್ಡೆ, ಎಂ.ಕೆ. ಮಠ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.