ಫೆ.6ರಂದು ರಿಲೀಸ್ ಆಗಲಿದೆ ಗಿಲ್ಲಿ ನಟ ಅಭಿನಯದ ‘ಸರ್ಕಾರಿ ಶಾಲೆ H8’ ಸಿನಿಮಾ

ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲೂ ಗಿಲ್ಲಿ ನಟ ಅವರು ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಬೇಡಿಕೆ ಹೆಚ್ಚಿದೆ. ಗಿಲ್ಲಿ ಅಭಿನಯಿಸಿದ ‘ಸರ್ಕಾರಿ ಶಾಲೆ-H8’ ಬಿಡುಗಡೆ ಆಗಲಿದೆ. ಶೀರ್ಷಿಕೆಯಿಂದಲೇ ಈ ಸಿನಿಮಾ ಕೌತುಕ ಮೂಡಿಸಿದೆ. ಫೆ.6ರಂದು ‘ಸರ್ಕಾರಿ ಶಾಲೆ-H8’ ಚಿತ್ರ ತೆರೆಕಾಣಲಿದೆ. ಗುಣ ಹರಿಯಬ್ಬೆ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಫೆ.6ರಂದು ರಿಲೀಸ್ ಆಗಲಿದೆ ಗಿಲ್ಲಿ ನಟ ಅಭಿನಯದ ‘ಸರ್ಕಾರಿ ಶಾಲೆ H8’ ಸಿನಿಮಾ
Sarkari Shale H8 Movie Poster

Updated on: Feb 02, 2026 | 3:44 PM

ಹಾಸ್ಯ ಕಲಾವಿದ ಗಿಲ್ಲಿ ನಟ (Gilli Nata) ಅವರು ಬಿಗ್ ಬಾಸ್ ಶೋನಿಂದ ಅಪಾರ ಜನಪ್ರಿಯತೆ ಪಡೆದಿದ್ದಾರೆ. ಬಿಗ್ ಬಾಸ್ ಟ್ರೋಫಿ ವಿನ್ ಆದ ಬಳಿಕ ಹಲವು ಊರುಗಳಲ್ಲಿ ಮೆರವಣಿಗೆ ಮಾಡಿದ್ದೇ ಅವರ ಜನಪ್ರಿಯತೆಗೆ ಸಾಕ್ಷಿ ಆಗಿದೆ. ಬಿಗ್ ಬಾಸ್​​ನಲ್ಲಿ ಸ್ಪರ್ಧಿಸುವುದಕ್ಕೂ ಮುನ್ನವೇ ಅವರು ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಆ ಪೈಕಿ ‘ಸರ್ಕಾರಿ ಶಾಲೆ H8’ (Sarkari Shale H8) ಕೂಡ ಇದೆ. ಈ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಫೆಬ್ರವರಿಯಿಂದ 6ರಂದು ಈ ಚಿತ್ರ ರಿಲೀಸ್ ಆಗಲಿದೆ. ಇದರಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಕಹಾನಿ ಇದೆ.

‘ಸರ್ಕಾರಿ ಶಾಲೆ H8’ ಸಿನಿಮಾದಲ್ಲಿ ಗಿಲ್ಲಿ ನಟ ಮಾತ್ರವಲ್ಲದೇ ಗುಣ ಹರಿಯಬ್ಬೆ, ಮೇಘಶ್ರೀ, ಜನಪದ ಕಲಾವಿದ ಮೋಹನ್, ಸುಚೇಂದ್ರ ಪ್ರಸಾದ್ ಮುಂತಾದವರು ಅಭಿನಯಿಸಿದ್ದಾರೆ. ಗುಣ ಹರಿಯಬ್ಬೆ ಅವರು ಕಥೆ, ಚಿತ್ರಕಥೆ ಬರೆದು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಗಿರಿಚಂದ್ರ ಪ್ರೊಡಕ್ಷನ್ಸ್’ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ. ತೇಜಸ್ವಿನಿ ಎಸ್. ಅವರು ಬಂಡವಾಳ ಹೂಡಿದ್ದಾರೆ.

ಕೆಲವು ಕಾರಣಗಳಿಂದಾಗಿ ‘ಸರ್ಕಾರಿ ಶಾಲೆ H8’ ಸಿನಿಮಾ ಮೇಲೆ ನಿರೀಕ್ಷೆ ಇದೆ. ಟೈಟಲ್ ಗಮನ ಸೆಳೆದಿದೆ. ಗಿಲ್ಲಿ ನಟ ಅಭಿನಯದ ಸಿನಿಮಾ ಆದ್ದರಿಂದ ಅವರ ಅಭಿಮಾನಿಗಳಲ್ಲಿ ಹೈಪ್ ಇದೆ. ಈ ಸಿನಿಮಾದ ಕಥೆಯು ಒಂದು ವಿಗ್ರಹದ ಸುತ್ತ ಸುತ್ತಲಿದೆಯಂತೆ. ಈ ಸಿನಿಮಾಗೆ ಬೆಂಗಳೂರು, ಚಿತ್ರದುರ್ಗ, ಶಿರಾ, ಶಿವಮೊಗ್ಗ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ.

‘ಸರ್ಕಾರಿ ಶಾಲೆ H8’ ಸಿನಿಮಾಗೆ ವಿಜೇತ್ ಮಂಜಯ್ಯ ಅವರ ಸಂಗೀತ ನಿರ್ದೇಶನ ಮಾಡಿದ್ದಾರೆ. 3 ಹಾಡುಗಳು ಈ ಸಿನಿಮಾದಲ್ಲಿವೆ. ಕಾಮಿಡಿ ಸಿನಿಮಾಗಳ ಮೂಲಕ ಫೇಮಸ್ ಆದ ನಟ ಶರಣ್ ಮತ್ತು ಮೆಹಬೂಬ್ ಸಾಬ್ ಒಂದೊಂದು ಹಾಡನ್ನು ಹಾಡಿದ್ದಾರೆ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ರಚಿಸಿದ್ದಾರೆ.

ಇದನ್ನೂ ಓದಿ: ವೋಟ್ ಹಾಕಿದ ಪೊಲೀಸರಿಗೂ ಧನ್ಯವಾದ ಹೇಳಿದೆ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ

ಹಿರಿಯ ನಟ ರಾಘವೇಂದ್ರ ರಾಜ್​ಕುಮಾರ್, ಜಗಪ್ಪ, ನವಾಜ್, ಸುಶ್ಮಿತಾ ಜಗಪ್ಪ, ಜೋತಿರಾಜ್, ಕಡ್ಡಿ ವಿಶ್ವ, ನಮ್ರತಾ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ರವಿ ರಾಮದುರ್ಗ ಮತ್ತು ವೀನಸ್ ಮೂರ್ತಿ ಅವರು ‘ಸರ್ಕಾರಿ ಶಾಲೆ H8’ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ. ರವಿತೇಜ ಸಿ.ಹೆಚ್. ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.