ಕೋವಿಡ್ ಸಂದರ್ಭದಲ್ಲಿ ಪ್ರವಾಸಿತಾಣಗಳು ಜನರಿಲ್ಲದೆ ಬಣಗುಡುತ್ತಿದ್ದವು, ಜನರಿಲ್ಲದೆ, ಅವರು ನೀಡುವ ಟಿಕೆಟ್ ಹಣವಿಲ್ಲದೆ ಮೃಗಾಲಯಗಳಲ್ಲಿನ ಪ್ರಾಣಿಗಳ ಪಾಲನೆ ಕಷ್ಟವಾಗಿತ್ತು. ಆಗ ನಟ, ದರ್ಶನ್ ಮೃಗಾಲಯದ ಪ್ರಾಣಿಗಳ ದತ್ತು ಪಡೆಯಿರಿ ಎಂದು ಕರೆ ನೀಡಿದರು. ಅಷ್ಟೆ ಅವರ ಹಲವು ಅಭಿಮಾನಿ ಸಂಘಗಳು ರಾಜ್ಯದ ಬೇರೆ ಬೇರೆ ಮೃಗಾಲಯಗಳ ಪ್ರಾಣಿಗಳನ್ನು ದತ್ತು ಪಡೆದು ಅವುಗಳ ಪಾಲನೆಗೆ ಸಹಾಯ ಮಾಡಿದರು. ದರ್ಶನ್ರ ಅಭಿಮಾನಿಗಳ ಕೆಲಸದಿಂದ ಮೃಗಾಲಯಗಳ ಪ್ರಾಣಿಗಳ ಹಸಿವು ನೀಗಿತ್ತು. ಡಾ ರಾಜ್ಕುಮಾರ್ ಅಭಿಮಾನಿಗಳು, ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಮಾಡಿದ ನೇತ್ರದಾನ ವಿಶ್ವ ಮಟ್ಟದಲ್ಲಿ ದಾಖಲೆಯೇ ಆಗಿಬಿಟ್ಟಿತು. ಕಿಚ್ಚನ ಅಭಿಮಾನಿಗಳು ಕೋವಿಡ್ ಸಮಯದಲ್ಲಿ ಮಾಡಿದ ಸಹಾಯ, ವಿದ್ಯಾರ್ಥಿಗಳಿಗೆ ನೀಡಿದ ಸ್ಕಾಲರ್ಶಿಪ್ ಹಣದ ವರದಿಗಳು ಪತ್ರಿಕೆಗಳಲ್ಲಿ, ವೆಬ್ ಪತ್ರಿಕೆಗಳಲ್ಲಿ ಪ್ರತಿದಿನ ಪ್ರಕಟವಾಗುತ್ತಿತ್ತು.
ಇಂಥಹಾ ಘನ ಸಮಾಜ ಮುಖಿ ಕಾರ್ಯ ಮಾಡಿದ್ದ ಅದೇ ಅಭಿಮಾನಿಗಳು ತಮ್ಮ ಇನ್ನೊಂದು ಮುಖವನ್ನು ಆಗಾಗ್ಗೆ ತೋರಿಸುತ್ತಲೇ ಬಂದಿದ್ದಾರೆ. ಜಗ್ಗೇಶ್ ಅಂಥಹಾ ಹಿರಿಯ ನಟನ ಮೇಲೆರಗಿ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ದರ್ಶನ್ ಅಭಿಮಾನಿಗಳು. ಇತರೆ ನಟ-ನಟಿಯರ ಬಗ್ಗೆ ಕೀಳಾಗಿ ಕಮೆಂಟ್ ಮಾಡಿದರು. ದರ್ಶನ್ರ ಟೀಕಿಸಿದ ಒಬ್ಬ ಯುವಕನ ಕೈ ಮೇಲೆ ಕರ್ಪೂರ ಹಚ್ಚಿ ವಿಡಿಯೋ ಮಾಡಿದ್ದರು. ಸುದೀಪ್ರನ್ನು ಟೀಕಿಸಿದ ಅಹೋರಾತ್ರರ ಮನೆಗೆ ನುಗ್ಗಿ ಸುದೀಪ್ ಅಭಿಮಾನಿಗಳು ದಾಂಧಲೆ ಎಬ್ಬಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಟೀಕೆಗೆ ಗುರಿಯಾಯ್ತು. ಹೊಸಪೇಟೆಗೆ ಸಿನಿಮಾ ಪ್ರಚಾರಕ್ಕೆ ಬಂದಿದ್ದ ನಟ ದರ್ಶನ್ ಮೇಲೆ ಪುನೀತ್ ಅಭಿಮಾನಿಗಳು ಚಪ್ಪಲಿ ಎಸೆದರು ಎಂಬ ಆರೋಪ ಕೇಳಿ ಬಂತು.
ಒಬ್ಬ ವ್ಯಕ್ತಿಯನ್ನು ಅತಿಯಾಗಿ ಪ್ರೀತಿಸುವ ಅಭಿಮಾನಿಗಳು ಇತರರ ಬಗ್ಗೆ ಏಕಿಷ್ಟು ಹಿಂಸಾತ್ಮಕವಾಗಿ ವರ್ತಿಸುತ್ತಾರೆ? ತಮ್ಮ ಅಥವಾ ತಮ್ಮ ಪ್ರೀತಿ ಪಾತ್ರ ನಟನ ಕುರಿತಾದ ಸಣ್ಣ ಟೀಕೆ, ಸಣ್ಣ ತಮಾಷೆ, ವ್ಯಂಗ್ಯವನ್ನೂ ಸಹಿಸಲಾಗದೆ ಉರಿದು ಬೀಳುತ್ತಾರೆ? ಅವರ ಪ್ರತಿಕ್ರಿಯೆ ಸದಾ ಹಿಂಸಾತ್ಮಕವಾಗಿ ಅಥವಾ ನಿಂದನಾತ್ಮಕವಾಗಿಯೇ ಏಕಿರುತ್ತದೆ? ಇದು ಕೇವಲ ಒಬ್ಬ ನಟನ ಅಭಿಮಾನಿಗಳ ಕೃತ್ಯವೋ ಅಥವಾ ಸಾಮಾಜಿಕ ಜಾಲತಾಣದ ಪ್ರಭಾವದಿಂದ ಆಗುತ್ತಿರುವ ಹುಚ್ಚಾಟವೋ ಅಲ್ಲ ಬದಲಿಗೆ ಅಭಿಮಾನಿ ಸಂಘಗಳ ಇತಿಹಾಸ ಗಮನಿಸಿದರೆ ಇದು ಮೊದಲಿನಿಂದಲೂ ನಡೆದುಕೊಂಡು ಬಂದ ‘ಛಾಳಿ’ ಎಂದು ಅರ್ಥವಾಗುತ್ತದೆ.
ಇನ್ನೊಂದು ಉದಾಹರಣೆ ಗಮನಿಸುವುದಾದರೆ, ಕರ್ನಾಟಕ ಚರಿತ್ರೆಯಲ್ಲಿಯೇ ಅತ್ಯದ್ಭುತ ಚಳವಳಿ ಗೋಕಾಖ್ ಚಳವಳಿ. ಚಳವಳಿಯ ಭಾರಿ ಯಶಸ್ಸಿಗೆ ಕಾರಣವಾಗಿದ್ದು ಇದೇ ಅಭಿಮಾನಿಗಳು ಎನ್ನಲಾಗುತ್ತದೆ. ರಾಜ್ಕುಮಾರ್ ಮುಂದಾಳತ್ವದ ಈ ಚಳವಳಿ ಯಶಸ್ವಿಯಾಗುವಲ್ಲಿ ರಾಜ್ಕುಮಾರ್ ಸೇರಿದಂತೆ ಆಗ ಬೇಡಿಕೆಯಲ್ಲಿದ್ದ ನಟರ ಅಭಿಮಾನಿಗಳ ಬಳುವಳಿ ದೊಡ್ಡದಿತ್ತು. ಆದರೆ ಆ ಚಳವಳಿಯ ವಿಜಯೋತ್ಸವದಲ್ಲಿ ಅದೇ ಅಭಿಮಾನಿಗಳು ಗಲಭೆ ಎಬ್ಬಿಸಿದ್ದರು. ಭಾರಿ ಗಲಾಟೆಗಳು ನಡೆದು ಲಾಠಿ ಚಾರ್ಜ್ ಆಯಿತು. ಇಬ್ಬರು ಜೀವ ಕಳೆದುಕೊಂಡರು. ಚಳವಳಿಯಲ್ಲಿ ಭಾಗವಹಿಸಿದ್ದ ಹಲವು ಹಿರಿಯರಿಗೂ ಗಾಯಗಳಾಗಿದ್ದವು. ‘ವಿಜಯೋತ್ಸವ ಸಭೆಯಲ್ಲ ಇದು ಸಂತಾಪ ಸಭೆ’ ಎಂದು ಆಗಿನ ಪತ್ರಿಕೆಗಳು ಟೀಕಿಸಿದವು. ಅಭಿಮಾನಿ ಸಂಘಗಳು ಅಥವಾ ಅಭಿಮಾನಿಗಳು ಹಿಂಸೆಗೆ ಇಳಿದಿರುವ ಘಟನೆಗಳು ಇತಿಹಾಸದಲ್ಲಿ ಹಲವಾರು ಇವೆ. ಆದರೆ ಮೊದಲು ಹಿಂಸೆಯ ಘಟನೆಗಳು ಸಂದರ್ಭಕ್ಕೆ ಅನುಸಾರವಾಗಿ ನಡೆಯುತ್ತಿದ್ದವು, ಘಟನೆಗಳು ನಡೆದ ಬಳಿಕ ಅಭಿಮಾನಿ ಸಂಘಗಳ ಮುಖಂಡರು ಘಟನೆಯನ್ನು ಖಂಡಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ, ನಟನ ಇಡೀ ಅಭಿಮಾನಿ ಸಮೂಹ ಒಂದೇ ದಿಕ್ಕಿನಲ್ಲಿ ಯೋಚಿಸುತ್ತಿರುವಂತೆ ತೋರುತ್ತಿದೆ. ಹಿಂಸೆ, ಮೂದಲಿಕೆ ಏನಾದರೂ ಆಗಲಿ ನಮ್ಮ ಮೆಚ್ಚಿನ ನಟನನ್ನು ‘ರಕ್ಷಿಸಿ’ಕೊಳ್ಳಬೇಕು ಎಂಬುದೊಂದೆ ಅವರ ಗುರಿಯಾಗಿರುವಂತೆ ತೋರುತ್ತಿದೆ.
ಕನ್ನಡ ಚಿತ್ರರಂಗಕ್ಕೆ ಈ ಅಭಿಮಾನಿ ಸಂಘಗಳ ನಂಟು ಅಂಟಿದ್ದು ತುಸು ತಡವಾಗಿಯೇ, ತೆಲುಗು, ತಮಿಳಿನ ನಟರಿಗೆ ಅಭಿಮಾನಿ ಸಂಘಗಳು ಪ್ರಾರಂಭವಾದ ಎಷ್ಟೋ ವರ್ಷಗಳ ಬಳಿಕ ಕನ್ನಡದಲ್ಲಿ ಈ ಸಂಸ್ಕೃತಿ ಪ್ರಾರಂಭವಾಯಿತು ಎಂದು ಗುರುತಿಸುತ್ತಾರೆ ಸಿನಿಮಾ ಇತಿಹಾಸಕಾರ ಕೆ ಪುಟ್ಟಸ್ವಾಮಿ. ಡಾ ರಾಜ್ಕುಮಾರ್ ಅವರ 150ನೇ ಸಿನಿಮಾ ‘ಗಂಧದ ಗುಡಿ’ ಬಳಿಕವೇ ಅವರಿಗೆ ಅಭಿಮಾನಿ ಸಂಘ ಹುಟ್ಟಿಕೊಂಡಿದ್ದು ಎನ್ನುತ್ತಾರೆ ಅವರು, ಆದರೆ ಮತ್ತೊಬ್ಬ ಸಂಶೋಧಕ ರಾ.ನಂ.ಚಂದ್ರಶೇಖರ ಅವರು ಹೇಳುವಂತೆ ರಾಜ್ಕುಮಾರ್ ಅವರ 100ನೇ ಸಿನಿಮಾ ‘ಭಾಗ್ಯದ ಬಾಗಿಲು’ ಸಿನಿಮಾದ ಬಳಿಕ ಅಭಿಮಾನಿ ಸಂಘ ಹುಟ್ಟಿಕೊಂಡಿತಂತೆ. ಈ ಎರಡೂ ಸಿನಿಮಾಗಳಿಗೂ ಇರುವ ಅಂತರ ಐದು ವರ್ಷವಷ್ಟೆ.
ಆರಂಭದಲ್ಲಿ ರಾಜ್ಕುಮಾರ್ ಅಭಿಮಾನಿ ಸಂಘ ಕಾರ್ಮಿಕರ ಹಕ್ಕುಗಳಿಗಾಗಿ ಇನ್ನಿತರೆ ಸಾಮಾಜಿಕ ಸಮಸ್ಯೆಗಳ ಎದುರು ಹೋರಾಟ ಮಾಡಿತು. ಯಲಹಂಕದ ಉಕ್ಕುಗಾಲಿ ಕಾರ್ಖಾನೆ ಪರವಾಗಿ ಹೋರಾಟ ಮಾಡಿ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ರಾಜ್ಕುಮಾರ್ ಅಭಿಮಾನಿ ಸಂಘದ ಪಾತ್ರ ಮಹತ್ವದ್ದು ಎನ್ನುತ್ತಾರೆ ರಾನಂ. ಆ ನಂತರದ ದಿನಗಳಲ್ಲಿ, ‘ರಾಜ್ಕುಮಾರ್’ ಹೆಸರಿನ ಬಲ ಹಾಗೂ ತಮ್ಮ ತೋಳ್ಬಲ ಬಳಸಿಕೊಂಡು ಕೆಲವರು ‘ಹಣ ಮಾಡುವ’ದಾರಿಗಳ ಕಡೆಗೆ ವಾಲಿದ್ದೂ ಸಹ ಇದೆ. ಅಭಿಮಾನಿಗಳ ಅತಿರೇಕದ ವರ್ತನೆಗಳಿಂದ ಬೇಸರಗೊಂಡು ಸ್ವತಃ ಡಾ ರಾಜ್ಕುಮಾರ್ ಅವರು ತಮಗೆ ಯಾವುದೇ ಅಭಿಮಾನಿಗಳು ಇಲ್ಲ ಎಂದು ಬೇಸರದಿಂದ ಹೇಳಿದ್ದರೆಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪತ್ರಿಕೆಯೊಂದಕ್ಕೆ ಹೇಳಿದ್ದರು.
ವಿಷ್ಣುಸೇನಾ ಸಮಿತಿಯ ಸಂಸ್ಥಾಪಕ, ವಿಷ್ಣುವರ್ಧನ್ ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ಈ ಸಿನಿಮಾ ನಟರ ಮೇಲಿನ ಅಭಿಮಾನವನ್ನು ಬೇರೆಯದ್ದೇ ದೃಷ್ಟಿಕೋನದಿಂದ ನೋಡುತ್ತಾರೆ. ‘ಯಾವುದೇ ವ್ಯಕ್ತಿ ತನ್ನ ತಾಯಿ, ತಂದೆ, ಸಹೋದರ, ಸ್ನೇಹಿತರನ್ನು ಪ್ರೀತಿಸುವ ರೀತಿಗೂ ಸಿನಿಮಾ ನಟನೊಬ್ಬನ ಮೇಲಿಟ್ಟಿರುವ ಪ್ರೀತಿ ಅಭಿಮಾನಕ್ಕೂ ಬಹಳ ಅಂತರವಿದೆ. ಸಿನಿಮಾ ನಟರ ಮೇಲಿನ ಪ್ರೀತಿ ಒಂದು ರೀತಿ ದೇವರ ಮೇಲಿನ ಭಕ್ತಿಯಂತೆ, ದೇವರನ್ನು ನಾವು ಚಿತ್ರಗಳಲ್ಲಿ ನೋಡಿ, ಪೌರಾಣಿಕ ಕತೆಗಳಲ್ಲಿ ಕೇಳಿಯಷ್ಟೆ ತಿಳಿದುಕೊಂಡು ಭಕ್ತಿ ಮೂಡಿಸಿಕೊಂಡಿದ್ದೇವೆ. ಹಾಗೆಯೇ ಸಿನಿಮಾ ನಟರ ಮೇಲಿನ ಅಭಿಮಾನವೂ ಅಷ್ಟೆ, ನಟರನ್ನು ತೆರೆಯ ಮೇಲೆ ಕಂಡು, ದೂರದಿಂದ ನೋಡಿ ಮೂಡಿಸಿಕೊಂಡ ಪ್ರೀತಿಯೇ ಅಭಿಮಾನ. ದೇವರ ಮೇಲಿನ ಭಕ್ತಿಯಂತೆ ನಟರ ಮೇಲಿನ ಭಕ್ತಿ ಬಹಳ ಡಿವೈನ್ ಆದದ್ದು’ ಎಂದು ಸಿನಿಮಾ ನಟರ ಮೇಲಿನ ಅಭಿಮಾನವನ್ನು ವಿಶ್ಲೇಷಿಸುತ್ತಾರೆ ಶ್ರೀನಿವಾಸ್.
ಆಗಿನ ಅಭಿಮಾನಿಗಳಿಗೂ ಈಗಿನ ಅಭಿಮಾನಿಗಳಿಗೂ ಇರುವ ಅಂತರದ ಬಗ್ಗೆ ಮಾತನಾಡುತ್ತಾ, ‘ಆಗ ಸಿನಿಮಾ ನಟರ ಅಭಿಮಾನಿಗಳಿಗೆ ನಿರ್ದಿಷ್ಟ ಗುರಿ ಇತ್ತು, ನಟನ ಹೆಸರು ಉಳಿಯುವ ಕೆಲಸ ಮಾಡಬೇಕೆಂಬ ಹಂಬಲ ಇರುತ್ತಿತ್ತು. ಗೋಕಾಖ್ ಚಳವಳಿ ಬಳಿಕ ರಾಜ್ಕುಮಾರ್ ಅಭಿಮಾನಿಗಳ ಸಂಘಗಳು ನಾಡು-ನುಡಿ ರಕ್ಷಣೆಗೆ ಧುಮುಕಿದವು. ವಿಷ್ಣುವರ್ಧನ್ ಅಭಿಮಾನಿ ಸಂಘಗಳು ಸಾಮಾಜಿಕ ಕಾರ್ಯದ ಕಡೆಗೆ ಹೆಚ್ಚು ಒತ್ತು ನೀಡಿದವು. ಹೌದು, ಆಗಾಗ್ಗೆ ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್ ಅಭಿಮಾನಿ ಸಂಘಗಳ ನಡುವೆ ಜಗಳಗಳಾಗುತ್ತಿದ್ದವು, ಆದರೆ ಅವು ಸಂಘಗಳ ಮೂಲ ಉದ್ದೇಶವನ್ನೂ ಮುಚ್ಚಿ ಹಾಕುವಷ್ಟರ ಮಟ್ಟಿಗೆ ಇರಲಿಲ್ಲ. ಆ ಘಟನೆಗಳು ಯಾರೋ ಕೆಲವು ಒಬ್ಬ-ಇಬ್ಬರು ಪುಂಡರಿಂದ ಆಗುತ್ತಿತ್ತೇ ಹೊರತು ಸಂಘದ ಎಲ್ಲರೂ ಅದೇ ಮನಸ್ಥಿತಿಯವರಾಗಿದ್ದರು ಎನ್ನಲಾಗದು’ ಎಂದಿದ್ದಾರೆ ವೀರಕಪುತ್ರ ಶ್ರೀನಿವಾಸ್.
ಈಗ ಅಭಿಮಾನಿ ಸಂಘಗಳು ತಮ್ಮ ಸ್ಟಾರ್ ನಟನ ಸುತ್ತಲಿನ ಕೋಟೆಯಂತಾಗಿವೆ. ಅಭಿಮಾನಿಗಳನ್ನು ನಟರು ಗುರಾಣಿಗಳಂತೆ ಬಳಸುತ್ತಿದ್ದಾರೆ. ತಮ್ಮ ಅಭಿಮಾನಿಗಳನ್ನು ಬಳಸಿಕೊಂಡು ಇತರೆ ನಟರ ಸಿನಿಮಾಗಳ ವಿರುದ್ಧ, ನಟ-ನಟಿಯರ ವಿರುದ್ಧ ‘ಆನ್ಲೈನ್ ಪಿತೂರಿ’ಗಳು ಸಹ ನಡೆದಿವೆ. ಹಾಲ್ಗಳನ್ನು ಬುಕ್ ಮಾಡಿಕೊಂಡು ಅಭಿಮಾನಿಗಳನ್ನು ಸೇರಿಸಿ ಟ್ವಿಟ್ಟರ್ ಟ್ರೆಂಡ್ ಮಾಡಿಸುವುದು, ಹ್ಯಾಷ್ಟ್ಯಾಗ್ ಟ್ರೆಂಡ್ ಮಾಡಿಸುವುದು, ಇತರೆ ನಟರ ಸಿನಿಮಾಗಳಿಗೆ ಕೆಟ್ಟ ರಿವ್ಯೂ ಕೊಡಿಸುವುದು, ತಮ್ಮ ಸಿನಿಮಾಗಳಿಗೆ ಫೈವ್ ಸ್ಟಾರ್ ಕೊಡಿಸುವ ಕಾರ್ಯಗಳೂ ಸಹ ನಡೆದಿವೆ, ನಡೆಯುತ್ತಿವೆ’ ಎಂದು ಅಭಿಮಾನಿ ಸಂಘಗಳನ್ನು ನಟರು ಬಳಸಿಕೊಳ್ಳುವ ರೀತಿ ವಿವರಿಸಿದರು ವೀರಕಪುತ್ರ ಶ್ರೀನಿವಾಸ್.
‘ಯಾವುದೇ ಭಕ್ತಿ ಅತಿರೇಕಕ್ಕೆ ಹೋದಾಗ ಅದು ಸ್ಥಿಮಿತದಲ್ಲಿರುವುದಿಲ್ಲ. ಈಗಿನ ಸಿನಿಮಾ ನಟರ ಅಭಿಮಾನಿಗಳ ಪರಿಸ್ಥಿತಿಯೂ ಹಾಗೆಯೇ ಆಗಿದೆ. ನಮ್ಮ ನಟ ಪ್ರಶ್ನಾತೀತ, ಟೀಕೆಗೆ ಅತೀತ, ಆತ ತಪ್ಪುಗಳನ್ನೇ ಮಾಡದ ದೇವರು ಎಂಬ ಭಾವನೆ ಅಭಿಮಾನಿಗಳ ಮನದಲ್ಲಿ ಗಟ್ಟಿಯಾಗಿ ಬೇರೂರಿಬಿಟ್ಟಿದೆ. ಈಗಂತೂ ಸ್ವತಃ ಸ್ಟಾರ್ ನಟರು ಸಹ ತಮ್ಮ ಅಭಿಮಾನಿ ಸಂಘಗಳ ಮೇಲೆ ಹಿಡಿತ ಕಳೆದುಕೊಂಡಂತೆ ಕಾಣುತ್ತಿದೆ. ಅಭಿಮಾನಿಗಳು, ನಟರನ್ನು ಪರೋಕ್ಷವಾಗಿ ನಿಯಂತ್ರಿಸುತ್ತಿರುವಂತೆ ಗೋಚರವಾಗುತ್ತಿದೆ. ‘ಇದೆಲ್ಲ ಬೇಡ ಬಿಡ್ರಪ್ಪ, ಎಂದು ನಟ ಹೇಳಿದರೆ, ‘ನಿನಗೆ ಗೊತ್ತಾಗಲ್ಲ ಸುಮ್ನಿರಣ್ಣ, ಅವನಿಗೆ ಬುದ್ಧಿ ಕಲಿಸ್ತೀವಿ’ ಎನ್ನುವ ಮಟ್ಟಕ್ಕೆ ಅಭಿಮಾನಿಗಳು ಹೋಗಿದ್ದಾರೆ. ಅದರ ಪರಿಣಾಮವನ್ನು ಕೆಲವು ನಟರು ಅನುಭವಿಸುತ್ತಿದ್ದಾರೆ’ ಎಂದಿದ್ದಾರೆ ಶ್ರೀನಿವಾಸ್.
ಅಭಿಮಾನಿ ಸಂಘಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂಬುದು ಸಹ ಕುತೂಹಲಕಾರಿ ಪ್ರಶ್ನೆ, ನೆಚ್ಚಿನ ನಟನ ಸಿನಿಮಾ ಬಿಡುಗಡೆ ಆದಾಗ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಹಬ್ಬವನ್ನೇ ಮಾಡುತ್ತಾರೆ. ಕಲಾತಂಡಗಳನ್ನು ಕರೆಸುತ್ತಾರೆ, ಆಟೋಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಅನ್ನದಾನ ಮಾಡುತ್ತಾರೆ. ನಟನ ಹುಟ್ಟುಹಬ್ಬದಂದು ಅನ್ನದಾನ ಮಾಡುತ್ತಾರೆ. ಭಾರಿ ಕಟೌಟ್ಗಳನ್ನು ಕಟ್ಟುತ್ತಾರೆ. ರಾತ್ರಿಯೆಲ್ಲ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಇದಕ್ಕೆಲ್ಲ ಅವರಿಗೆ ಹಣ ಎಲ್ಲಿಂದ ಬರುತ್ತದೆ? ಹೆಸರು ಹೇಳಲು ಇಚ್ಛಿಸದ ನಿರ್ಮಾಪಕರೊಬ್ಬರು ಹೇಳಿರುವಂತೆ ಇದಕ್ಕೆಲ್ಲ ಹಣ ಹೋಗುವುದು ಸಿನಿಮಾ ನಿರ್ಮಾಪಕರಿಂದ! ಸ್ಟಾರ್ ನಟನ ಸಿನಿಮಾ ನಿರ್ಮಾಣ ಮಾಡುತ್ತಿರುವ ವ್ಯಕ್ತಿಯೇ ಸಿನಿಮಾ ಬಿಡುಗಡೆ ಆದಾಗ ಅಭಿಮಾನಿಗಳಿಗೆ ದುಡ್ಡು ಕೊಟ್ಟು ಸಂಭ್ರಮಾಚರಣೆ ಮಾಡಿಸುತ್ತಾರೆ. ಸ್ಟಾರ್ ನಟನ ಸೂಚನೆಯ ಮೇರೆಗೆ ಈ ಹಣ ವಿತರಣೆ ನಡೆಯುತ್ತದೆ. ಹುಟ್ಟುಹಬ್ಬ ಆಚರಣೆಗೂ ಸಹ ಅಭಿಮಾನಿಗಳಿಗೆ ಆ ನಟ ಆ ಸಮಯದಲ್ಲಿ ನಟಿಸುತ್ತಿರುವ ಸಿನಿಮಾದ ನಿರ್ಮಾಪಕರಿಂದ ಹಣ ಹೋಗುತ್ತದೆ. ಇಲ್ಲವೇ ಸ್ವತಃ ನಟನಿಂದಲೇ ಹಣ ಹೋಗಿರುತ್ತದೆ. ಎಲ್ಲೋ ಕೆಲವು ಅಭಿಮಾನಿಗಳು ಅಥವಾ ಸಂಘಗಳು ತಮ್ಮ ಹಣದಲ್ಲಿ ಅನ್ನದಾನ ಮಾಡುತ್ತಾರೆ ಎನ್ನುತ್ತಾರೆ ಅವರು.
ಒಟ್ಟಾರೆಯಾಗಿ ನೋಡುವುದಾದರೆ ಅಭಿಮಾನಿ ಸಂಘ ಅಥವಾ ಅಭಿಮಾನಿಗಳು ಎಂಬುದು ಮದವೇರಿದ ಆನೆ, ಅದಕ್ಕೆ ಬಹಳ ಬಲವಿದೆ ಆದರೆ ಶಿಸ್ತಿಲ್ಲ. ಅದಕ್ಕೆ ಅಂಕುಶ ಹಾಕಬೇಕಿರುವ ಸ್ಟಾರ್ ನಟರು ಅಂಕುಶ ಕಳೆದುಕೊಂಡಿದ್ದಾರೆ. ಆನೆ ಹೊಯ್ದಾಡುತ್ತಾ ಎತ್ತ ಕರೆದೊಯ್ಯುತ್ತದೆಯೋ ಅತ್ತ ಓಲಾಡುತ್ತಾ ಹೋಗುತ್ತಿದ್ದಾರೆ. ಬಿದ್ದು ಅದರ ಕಾಲಿಡಿಗೇ ಸಿಗುವ ಸಾಧ್ಯತೆ ಇದೆ ಎಂಬುದನ್ನು ಸ್ಟಾರ್ ನಟರ ಅರ್ಥ ಮಾಡಿಕೊಳ್ಳಬೇಕಷ್ಟೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ