2022ರ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ವಿಶೇಷವಾಗಿದೆ. ಈ ವರ್ಷ ಕನ್ನಡದ ಹಲವು ಸಿನಿಮಾಗಳು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿವೆ. ಅದರಲ್ಲೂ ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಹಾಗೂ ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾಗಳು ಮಾಡಿದ ಮೋಡಿಗೆ ಸಾಟಿಯೇ ಇಲ್ಲ. ಇಡೀ ವಿಶ್ವವೇ ಕರುನಾಡಿನ ಕಡೆಗೆ ತಿರುಗಿ ನೋಡುವಂತಹ ಸಾಧನೆಯನ್ನು ಈ ಚಿತ್ರಗಳು ಮಾಡಿವೆ. ಈ ಎರಡೂ ಸಿನಿಮಾಗಳು ಮೂಡಿಬಂದಿದ್ದು ‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್ನಿಂದ ಎಂಬುದು ವಿಶೇಷ. ಗೂಗಲ್ ಹುಡುಕಾಟದಲ್ಲಿಯೂ ‘ಕಾಂತಾರ’ (Kantara) ಮತ್ತು ‘ಕೆಜಿಎಫ್ 2’ ಸಿನಿಮಾಗಳು ಸದ್ದು ಮಾಡಿವೆ. 2022ರಲ್ಲಿ ಜನರು ಅತಿ ಹೆಚ್ಚು ಸರ್ಜ್ ಮಾಡಿದ ಭಾರತದ ಟಾಪ್ 5 ಸಿನಿಮಾಗಳಲ್ಲಿ (Top Five Googled Movies in India) ಈ ಎರಡು ಚಿತ್ರಗಳು ಸ್ಥಾನ ಪಡೆದುಕೊಂಡಿವೆ.
ಈ ವರ್ಷ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ. ಇಡೀ ವರ್ಷದ ಆಗುಹೋಗುಗಳನ್ನು ಜನರು ಮೆಲುಕು ಹಾಕುತ್ತಿದ್ದಾರೆ. ಅದೇ ರೀತಿ ಗೂಗಲ್ ಕೂಡ ತನ್ನ ಕೆಲವು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವರ್ಷ ಜನರು ಅತಿ ಹೆಚ್ಚು ಹುಡುಕಿದ ಭಾರತೀಯ ಸಿನಿಮಾಗಳ ಪಟ್ಟಿ ಲಭ್ಯವಾಗಿದೆ. 5 ಸಿನಿಮಾಗಳಲ್ಲಿ ಕನ್ನಡದ ಎರಡು ಚಿತ್ರಗಳು ಇವೆ ಎಂಬುದು ವಿಶೇಷ.
ಮೊದಲ ಸ್ಥಾನದಲ್ಲಿ ರಣಬೀರ್ ಕಪೂರ್-ಆಲಿಯಾ ಭಟ್ ಜೋಡಿಯ ‘ಬ್ರಹ್ಮಾಸ್ತ್ರ’ ಸಿನಿಮಾ ಇದೆ. ಈ ಚಿತ್ರ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಮಾಯಿ ಮಾಡಿದೆ. ಸೆಪ್ಟೆಂಬರ್ 9ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಅಯಾನ್ ಮುಖರ್ಜಿ ನಿರ್ದೇಶನವಿದೆ. ಈ ವರ್ಷ ಸೋತು ಸೊರಗಿದ್ದ ಬಾಲಿವುಡ್ಗೆ ಹೊಸ ಚೈತನ್ಯ ನೀಡಿದ ಸಿನಿಮಾ ಇದು.
ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಎರಡನೇ ಸ್ಥಾನ ಪಡೆದುಕೊಂಡಿದೆ. ಮೂರನೇ ಸ್ಥಾನದಲ್ಲಿ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ಇದೆ. ನಾಲ್ಕನೇ ಸ್ಥಾನವನ್ನು ‘ಕಾಂತಾರ’ ಚಿತ್ರ ಪಡೆದುಕೊಂಡಿದ್ದರೆ, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ 5ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: Rishab Shetty: ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ ಜೊತೆ ಸೆಲ್ಫಿಗೆ ಮುಗಿಬಿದ್ದ ಕಲಬುರಗಿ ಅಭಿಮಾನಿಗಳು
ಕನ್ನಡದ ಸಿನಿಮಾಗಳು ಇಂಥ ಸಾಧನೆ ಮಾಡಿರುವುದು ಕರುನಾಡಿನ ಎಲ್ಲರಿಗೂ ಹೆಮ್ಮೆ ತಂದಿದೆ. ಆ ಮೂಲಕ ಕನ್ನಡದ ಗತ್ತು ಇಡೀ ದೇಶಕ್ಕೆ ಗೊತ್ತು ಎಂಬಂತಾಗಿದೆ. ಇಷ್ಟೇ ಅಲ್ಲದೇ, ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಜಾಗತಿಕ ಮಟ್ಟದ ‘ಟಾಪ್ 10’ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದುಕೊಂಡು ಹವಾ ಮಾಡುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:40 am, Thu, 8 December 22