
ಅಚ್ಯುತ್ ಕುಮಾರ್, ಮನೋರಂಜನ್ ರವಿಚಂದ್ರನ್, ಪ್ರಿಯಾಂಕಾ ತಿಮ್ಮೇಶ್ ಮುಂತಾದವರು ನಟಿಸಿರುವ ‘ಕೌಂತೇಯ’ ಸಿನಿಮಾ ಬಿಡುಗಡೆಗೆ ಹತ್ತಿರ ಆಗುತ್ತಿದೆ. ‘ಕುಂಭರಾಶಿ’, ‘ಕಾಗೆಮೊಟ್ಟೆ’ ಖ್ಯಾತಿಯ ಬಿ.ಕೆ. ಚಂದ್ರಹಾಸ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಶ್ರೀ ಮಹಾಂಕಾಳಿ ಪಿಕ್ಚರ್ಸ್’ ಮೂಲಕ ಜಿ. ಸುರೇಶ್ ಕುಮಾರ್ ಅವರು ನಿರ್ಮಿಸಿರುವ ಈ ಸಿನಿಮಾದಲ್ಲಿ ಎಮೋಷನಲ್, ಥ್ರಿಲ್ಲರ್ ಕಥೆ ಇದೆ. ಈ ಚಿತ್ರದ ‘ಚಿಗುರೆಲೆಯ ತುದಿಯ ಮೇಲೆ..’ ಎಂಬ ಹಾಡನ್ನು ಬಿಡುಗಡೆ ಮಾಡಲಾಗಿದೆ. ಸಂಜಿತ್ ಹೆಗ್ಡೆ ಅವರ ಕಂಠದಲ್ಲಿ ಮೂಡಿಬಂದ ಈ ಹಾಡಿಗೆ ನಿರ್ದೇಶಕ ಬಿ.ಕೆ. ಚಂದ್ರಹಾಸ್ ಅವರೇ ಸಾಹಿತ್ಯ ಬರೆದಿದ್ದಾರೆ.
ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡದವರು ಮಾತನಾಡಿದರು. ಈ ಚಿತ್ರದಲ್ಲಿ ಹಿರಿಯ ನಟ ಅಚ್ಯುತ್ ಕುಮಾರ್ ಅವರು ಸಬ್-ಇನ್ಸ್‌ಪೆಕ್ಟರ್ ರಂಗನಾಥನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮನೋರಂಜನ್ ರವಿಚಂದ್ರನ್ ಇದೇ ಮೊದಲ ಬಾರಿಗೆ ನೆಗೆಟಿವ್ ಶೇಡ್ ಇರುವ ವಿಶೇಷವಾದ ಪಾತ್ರವನ್ನು ನಿರ್ವಹಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕಾ ತಿಮ್ಮೇಶ್ ಅವರು ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾದ ಹೆಸರು ಕೇಳಿದರೆ ಇದು ಪೌರಾಣಿಕ ಕಥೆ ಸಿನಿಮಾ ಎನಿಸುತ್ತದೆ. ಆದರೆ ಆ ಬಗ್ಗೆ ಚಿತ್ರತಂಡ ವಿವರಣೆ ನೀಡಿದೆ. ‘ಕೌಂತೇಯ ಎಂಬುದು ಕುಂತೀಪುತ್ರ ಕರ್ಣನ ಇನ್ನೊಂದು ಹೆಸರಾದರೂ, ಇದು ಪೌರಾಣಿಕ ಕಥೆಯಲ್ಲ. ಮರ್ಡರ್ ಮಿಸ್ಟ್ರಿ ಆಧಾರಿತ ಎಮೋಷನಲ್ ಕ್ರೈಮ್ ಥ್ರಿಲ್ಲರ್ ಸಿನಿಮಾ’ ಎಂದು ಚಿತ್ರತಂಡದವರು ಹೇಳಿದ್ದಾರೆ.
ನಿರ್ದೇಶಕ ಬಿ.ಕೆ. ಚಂದ್ರಹಾಸ್ ಮಾತನಾಡಿ, ‘ಪೊಲೀಸ್ ಮತ್ತು ವಿಲನ್ ಹಿನ್ನೆಲೆಯಲ್ಲಿ ಸಾಕಷ್ಟು ಟ್ವಿಸ್ಟ್ ಇರುವ ಸಿನಿಮಾ ಇದು. ಬೆಂಗಳೂರು, ಮೈಸೂರು ಸುತ್ತಮುತ್ತ 3 ಹಂತಗಳಲ್ಲಿ ಶೂಟಿಂಗ್ ನಡೆಸಿದ್ದೇವೆ. ಸಿನಿಮಾ ನೋಡಿದಾಗ ಈ ಕೆಲವು ತಪ್ಪುಗಳನ್ನು ನಾವು ಮಾಡಬಾರದು ಅನಿಸುತ್ತದೆ. ರಕ್ತಪಾತ ಒಳ್ಳೆಯದಲ್ಲ ಎಂಬುದನ್ನು ಚಿತ್ರದ ಮೂಲಕ ಹೇಳಹೊರಟಿದ್ದೇವೆ’ ಎಂದರು.
ಇದನ್ನೂ ಓದಿ: ‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’ ಎಂಬ ಆರೋಪಕ್ಕೆ ರಾಕ್ಲೈನ್ ವೆಂಕಟೇಶ್ ಪ್ರತಿಕ್ರಿಯೆ
ಪಿ.ಎಲ್. ರವಿ ಅವರ ಛಾಯಾಗ್ರಹಣ, ಅನುರಂಜನ್ ಅವರ ಸಂಕಲನ ಹಾಗೂ ಸಂಭಾಷಣೆ ಈ ಚಿತ್ರಕ್ಕಿದೆ. ಸಿನಿಮಾದಲ್ಲಿ ವಿಲನ್ ಶೇಡ್ ಇರುವ ಪಾತ್ರ ಮಾಡಿರುವುದಕ್ಕೆ ಮನೋರಂಜನ್ ಅವರಿಗೆ ಈ ಚಿತ್ರ ವಿಶೇಷ ಎನಿಸಿದೆ. ಅವರಿಗೆ ಜೋಡಿಯಾಗಿ ವಿಯಾರಾ ರಿದ್ದಿ ಅವರು ಅಭಿನಯಿಸಿದ್ದಾರೆ. 2027ರ ಆರಂಭದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.