ವಿಲನ್ ಆದ ರವಿಚಂದ್ರನ್ ಪುತ್ರ ಮನೋರಂಜನ್; ‘ಕೌಂತೇಯ’ ಟೀಸರ್ ನೋಡಿ..
‘ಕೌಂತೇಯ’ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮನೋರಂಜನ್ ರವಿಚಂದ್ರನ್, ಅಚ್ಯುತ್ ಕುಮಾರ್, ನಿರ್ದೇಶಕ ಚಂದ್ರಹಾಸ, ನಿರ್ಮಾಪಕ ಸುರೇಶ್ ಕುಮಾರ್ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಇದೇ ಮೊದಲ ಬಾರಿಗೆ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಮನೋರಂಜನ್ ನಟಿಸಿರುವುದು ವಿಶೇಷ.

‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರ ಪುತ್ರ ಮನೋರಂಜನ್ (Manoranjan Ravichandran) ಅವರು ಈಗಾಗಲೇ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ. ಆದರೆ ಈಗ ಅವರು ‘ಕೌಂತೇಯ’ (Kounteya) ಚಿತ್ರದಲ್ಲಿ ವಿಲನ್ ಆಗಿದ್ದಾರೆ. ‘ಕುಂಭರಾಶಿ’ ಖ್ಯಾತಿಯ ಬಿ.ಕೆ. ಚಂದ್ರಹಾಸ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ಶ್ರೀ ಮಹಾಂಕಾಳಿ ಪಿಕ್ಚರ್ಸ್’ ಸಂಸ್ಥೆಯ ಮೂಲಕ ಸುರೇಶ್ ಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ‘ಕೌಂತೇಯ’ ಸಿನಿಮಾದಲ್ಲಿ ಹಿರಿಯ ನಟ ಅಚ್ಯುತ್ ಕುಮಾರ್ (Achutha Kumar) ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದ ಟೀಸರ್ ಬಿಡುಗಡೆ ಆಗಿ ಗಮನ ಸೆಳೆಯುತ್ತಿದೆ.
ಮನೋರಂಜನ್ ರವಿಚಂದ್ರನ್ ಅವರು ಇದೇ ಮೊದಲ ಬಾರಿಗೆ ನೆಗೆಟಿವ್ ಶೇಡ್ ಇರುವ ಪಾತ್ರವನ್ನು ಮಾಡಿರುವುದರಿಂದ ‘ಕೌಂತೇಯ’ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. ‘ಕೌಂತೇಯ’ ಎಂಬುದು ಕುಂತಿ ಪುತ್ರ ಕರ್ಣನ ಇನ್ನೊಂದು ಹೆಸರು. ಆದರೆ ಇದು ಪೌರಾಣಿಕ ಕಥೆ ಇರುವ ಸಿನಿಮಾ ಅಲ್ಲ. ಮರ್ಡರ್ ಮಿಸ್ಟ್ರಿ ಆಧಾರಿತ ಎಮೋಷನಲ್ ಕ್ರೈಮ್ ಥ್ರಿಲ್ಲರ್ ಸಿನಿಮಾ ಎಂದು ಚಿತ್ರತಂಡ ಹೇಳಿದೆ.
‘ಕೌಂತೇಯ’ ಸಿನಿಮಾದ ಟೀಸರ್:
ಟೀಸರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಬಿ.ಕೆ. ಚಂದ್ರಹಾಸ ಅವರು ಮಾತನಾಡಿದರು. ‘ಮನೋರಂಜನ್ ಅವರು ವಿಲನ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ತಪಾತ ಒಳ್ಳೆಯದಲ್ಲ ಎಂದು ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಬೆಂಗಳೂರು, ಮೈಸೂರು ಸುತ್ತಮುತ್ತ 3 ಹಂತಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ. ನವೆಂಬರ್ ವೇಳೆಗೆ ಸಿನಿಮಾ ರಿಲೀಸ್ ಮಾಡುವ ಗುರಿ ಇದೆ’ ಎಂದು ಅವರು ಹೇಳಿದರು.
ಮೊದಲ ಬಾರಿಗೆ ವಿಲನ್ ಆಗಿ ಕಾಣಿಸಿಕೊಂಡಿರುವ ಮನೋರಂಜನ್ ರವಿಚಂದ್ರನ್ ಅವರು ಮಾತನಾಡಿ, ‘ನನ್ನದು ನೆಗೆಟಿವ್ ಶೇಡ್ ಇರುವ ಪಾತ್ರ. ಇಡೀ ಸಿನಿಮಾದಲ್ಲಿ ಇರುವುದಿಲ್ಲ. ಒಂದು ಪ್ರಯೋಗ ಎಂದುಕೊಂಡು ಈ ಪಾತ್ರವನ್ನು ಮಾಡಿದ್ದೇನೆ. ನಾನು ಈ ಹಿಂದೆ ಮಾಡಿದ ಎಲ್ಲ ಪಾತ್ರಗಳಿಗಿಂತ ಇದು ವಿಭಿನ್ನವಾಗಿದೆ’ ಎಂದರು. ರಾಘವೇಂದ್ರ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಪಿ.ಎಲ್. ರವಿ ಅವರ ಛಾಯಾಗ್ರಹಣ, ಅನುರಂಜನ್ ಅವರ ಸಂಕಲನ ಈ ಸಿನಿಮಾಗಿದೆ.
ಇದನ್ನೂ ಓದಿ: ‘ತಂದೆ ಎಂದಿಗೂ ಗತ್ತು ಬಿಟ್ಟುಕೊಟ್ಟಿಲ್ಲ’; ರವಿಚಂದ್ರನ್ ಬಗ್ಗೆ ಪುತ್ರ ಮನೋರಂಜನ್ ಮಾತು
‘ಕೌಂತೇಯ’ ಸಿನಿಮಾದಲ್ಲಿ ನಟಿ ಪ್ರಿಯಾಂಕಾ ತಿಮ್ಮೇಶ್ ಅವರು ಎಸಿಪಿ ಪಾತ್ರವನ್ನು ಮಾಡಿದ್ದಾರೆ. ‘ಚಂದ್ರಹಾಸ ನನ್ನ ಹಳೇ ಸ್ನೇಹಿತರು. ಗಣಪ ಚಿತ್ರದಲ್ಲಿ ನಾವು ಒಟ್ಟಿಗೆ ಕೆಲಸ ಮಾಡಿದ್ದೆವು. ಡಬ್ಬಿಂಗ್ ಸಮಯದಲ್ಲಿ ಕೌಂತೇಯ ಸಿನಿಮಾ ನೋಡಿದ್ದೇನೆ. ತುಂಬಾ ಚೆನ್ನಾಗಿ ಮೂಡಿಬಂದಿದೆ’ ಎಂದು ಅವರು ಹೇಳಿದ್ದಾರೆ. ಚಂದ್ರಹಾಸ ಅವರ ಕಾರ್ಯವೈಖರಿಯನ್ನು ಅಚ್ಯುತ್ ಕುಮಾರ್ ಕೂಡ ಹೊಗಳಿದ್ದಾರೆ. ‘ಇಡೀ ಸಿನಿಮಾದ ಚಿತ್ರೀಕರಣ ಯಾವುದೇ ತೊಂದರೆ ಇಲ್ಲದೆ ನಡೆಯಿತು’ ಎಂದು ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




