ಬೆಂಗಳೂರು: ರಾಘವೇಂದ್ರ ರಾಜ್‍ಕುಮಾರ್ ಅಭಿನಯದ ರಾಜತಂತ್ರ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ಜರುಗಿತು. ದುಷ್ಟ ಶಕ್ತಿಗಳನ್ನು ತನ್ನ ಬುದ್ಧಿಶಕ್ತಿ ಮತ್ತು ತಂತ್ರಗಾರಿಕೆಯಿಂದ ಮಣಿಸುವ ನಿವೃತ್ತ ಕ್ಯಾಪ್ಟನ್ ಆಗಿ ರಾಘವೇಂದ್ರ ರಾಜ್‍ಕುಮಾರ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಾಜತಂತ್ರ ಚಿತ್ರದ ಮುಹೂರ್ತದ ಬಳಿಕ ಫಸ್ಟ್ ದೃಶ್ಯಕ್ಕೆ ಹಿರಿಯ ನಟ ದೊಡ್ಡಣ್ಣ ಕ್ಲಾಪ್ ಮಾಡಿದರೆ, ಸಂಗೀತ ನಿರ್ದೇಶಕ ಹಂಸಲೇಖ ಕ್ಯಾಮರಾ ಚಾಲನೆ ಮಾಡಿದರು. ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ತೊಡಗಿರುವ ಪಿವಿಆರ್ ಸ್ವಾಮಿ ರಾಜತಂತ್ರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶ್ವ ಡಿಜಿಟಲ್ ಮೀಡಿಯಾ ಮೂಲಕ ವಿಜಯಭಾಸ್ಕರ್ ಹರಪನಹಳ್ಳಿ, ಜೆ.ಎಂ.ಪ್ರಹ್ಲಾದ್ ಹಾಗೂ ಪಿ.ಆರ್.ಶ್ರೀಧರ್ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಮುಹೂರ್ತದ ನಂತರ ಮಾತನಾಡಿದ ರಾಘವೇಂದ್ರ ರಾಜ್‍ಕುಮಾರ್ ಸ್ವಾಮಿ ಹಿಂದೆ ಅಮ್ಮನ ಮನೆ ಚಿತ್ರಕ್ಕೆ DOP ಆಗಿದ್ರು. ಈಗ ಚಿತ್ರ ನಿರ್ದೇಶನ ಮಾಡುತ್ತಿದ್ದೇನೆ ಎಂದು ಈ ಕಥೆ ಹೇಳಿದರು. ಇಲ್ಲಿ ನಾನೊಬ್ಬ ನಿವೃತ್ತ ಮಿಲಿಟರಿ ಕ್ಯಾಪ್ಟನ್ ಆಗಿ ನಟಿಸುತ್ತಿದ್ದೇನೆ.
ಹೊರಗಿನಿಂದ ಬರುವ ಶತ್ರುಗಳಿಂದ ದೇಶವನ್ನು ರಕ್ಷಿಸುತ್ತಿದ್ದ ಆತ, ದೇಶದ ಒಳಗೆ ಬಂದಾಗ ಯಾವರೀತಿ ಸಮಾಜ ಮತ್ತು ದೇಶವನ್ನು ದುಷ್ಟರಿಂದ ರಕ್ಷಿಸುತ್ತಾನೆ ಎಂದು ನನ್ನ ಪಾತ್ರದ ಮೂಲಕ ತೋರಿಸುತ್ತಿದ್ದಾರೆ. ಇದೇ ಮೊದಲಬಾರಿಗೆ ನಾನಿಂಥ ಪಾತ್ರ ಮಾಡುತ್ತಿರುವುದು. ಇಲ್ಲಿ ಕ್ಯಾಪ್ಟನ್ ರಾಜನೂ ಹೌದು, ರಾಮನೂ ಹೌದು. ಸೈನ್ಯದಿಂದ ಹೊರಬಂದ ನಂತರವೂ ತನ್ನ ಕರ್ತವ್ಯ ಮುಗಿದಿಲ್ಲವೆಂದುಕೊಂಡು ಜವಾಬ್ದಾರಿ ನಿಭಾಯಿಸುವ ವ್ಯಕ್ತಿ. ಇಲ್ಲಿ ಕೆಲಸ ಮಾಡುವುದು ತಂತ್ರವೋ ಮಂತ್ರವೋ ಅನ್ನೋದು ಚಿತ್ರ ನೋಡಿದಾಗ ತಿಳಿಯುತ್ತೆ ಎಂದು ಹೇಳಿದರು.
‘ಈಗಿನ ಕಾಲಘಟ್ಟದಲ್ಲಿ ನಡೆಯುವ ಯೂನಿವರ್ಸಲ್ ಕಥೆಯಿದು’
ಹಿರಿಯ ಸಾಹಿತಿ ಜೆ.ಎಂ. ಪ್ರಹ್ಲಾದ್ ಸಿನಿಮಾಗೆ ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದಾರೆ. ಕಥೆಯ ವಿಶೇಷತೆ ಕುರಿತು ಮಾತನಾಡುತ್ತಾ ಬೌದ್ಧಿಕ ಶಕ್ತಿಯ ಪ್ರತಿನಿಧಿಯಾಗಿ ರಾಘಣ್ಣ ಕಾಣಿಸಿಕೊಂಡಿದ್ದಾರೆ. ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬ ತನ್ನ ಬುದ್ಧಿಶಕ್ತಿಯಿಂದ ಹೇಗೆ ಸಮಾಜದ ದುಷ್ಟಶಕ್ತಿಗಳನ್ನು ಮಟ್ಟಹಾಕುತ್ತಾನೆ ಎಂದು ಈ ಚಿತ್ರದಲ್ಲಿ ಹೇಳಿದ್ದೇವೆ. ಈಗಿನ ಕಾಲಘಟ್ಟದಲ್ಲಿ ನಡೆಯುವ ಯೂನಿವರ್ಸಲ್ ಕಥೆಯಿದು. ಕ್ಯಾಪ್ಟನ್ ರಾಜಾರಾಂ ಪಾತ್ರದಲ್ಲಿ ರಾಘಣ್ಣ ನಟಿಸುತ್ತಿದ್ದಾರೆ ಎಂದು ಹೇಳಿದರು.
ಈ ಚಿತ್ರದ ಹಾಡುಗಳಿಗೆ ಶ್ರೀಸುರೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಘಣ್ಣ ಚಿತ್ರಕ್ಕೆ ಸಂಗೀತ ಮಾಡುತ್ತಿರುವ ಖುಷಿಯಿದೆ. ಚಿತ್ರದಲ್ಲಿ ಒಂದು ಮಾಸ್ ಹಾಗೂ ಎರಡು ಬಿಟ್ ಸಾಂಗ್ ಇದೆ ಎಂದು ಶ್ರೀಸುರೇಶ್ ಹೇಳಿದರು. ಎನ್.ನಾಗೇಶ್ ಅವರ ಸಂಕಲನ, ವೈಲೆಂಟ್ ವೇಲು, ರಾಂದೇವ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.