
‘ರಂಗಿತರಂಗ’ ಮೂಲಕ ನಟನೆಗೆ ಎಂಟ್ರಿ ಕೊಟ್ಟ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿರುವ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ರಮಣೀಯ ತಾಣಗಳಲ್ಲಿ ದೃಶ್ಯ ವೈಭವದೊಂದಿಗೆ ಚಿತ್ರೀಕರಣಗೊಂಡಿರುವ ಈ ಸಿನಿಮಾದ ಟೀಸರ್, ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಚಿತ್ರದ ಪ್ರಮುಖ ಆಕರ್ಷಣೆಯಾಗಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅವರು ವಿಶೇಷ ಅತಿಥಿ ಪಾತ್ರದಲ್ಲಿ ನಟನೆ ಮಾಡುವ ಜೊತೆಗೆ, ತಮ್ಮ ಗಂಭೀರ ಧ್ವನಿಯನ್ನು ಹಿನ್ನೆಲೆಗೆ ನೀಡಿದ್ದಾರೆ. ಈ ಸಿನಿಮಾನಲ್ಲಿ ಸಾಯಿ ಕುಮಾರ್ ಸಹ ಪ್ರಮುಖ ಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ.
ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ‘ಡೈಲಾಗ್ ಕಿಂಗ್’ ಸಾಯಿಕುಮಾರ್, ಚಿತ್ರದಲ್ಲಿ ತಮ್ಮ ಪಾತ್ರ ಹಾಗೂ ಕಥೆಯ ಹಿನ್ನೆಲೆಯನ್ನು ಹಂಚಿಕೊಂಡರು. ರಾಜಾ ಹರಿಶ್ಚಂದ್ರನ ಹೆಸರಿಗೆ ಸದಾ ವಿಶೇಷ ಗೌರವವಿದೆ ಎಂದು ಸ್ಮರಿಸಿದ ಅವರು, ಕಥೆ ಕೇಳಿದ ತಕ್ಷಣವೇ ಅಭಿನಯಿಸಲು ಒಪ್ಪಿಕೊಂಡಿದ್ದಾಗಿ ತಿಳಿಸಿದರು. ‘ರಂಗಿತರಂಗ’ ನಂತರ ಮತ್ತೆ ನಿರೂಪ್ ಜೊತೆ ಅಭಿನಯಿಸಿರುವುದು ಸಂತಸ ತಂದಿದೆ ಎಂದ ಅವರು, ಚಿತ್ರದಲ್ಲಿ ತಾವು ‘ಹರಿಶ್ಚಂದ್ರ’ ಎಂಬ ಸತ್ಯವಂತನ ಪಾತ್ರ ಮಾಡಿದ್ದು, ಇದೊಂದು ಅತ್ಯಂತ ಭಾವನಾತ್ಮಕ ಕಥಾಹಂದರ ಹೊಂದಿರುವ ಸಿನಿಮಾ ಎಂದರು. ಶಿವಣ್ಣ ಸಿನಿಮಾಗೆ ಬಂದ ಪ್ರಸಂಗವನ್ನು ನೆನಪಿಸಿಕೊಂಡ ಸಾಯಿಕುಮಾರ್, “ಕಥೆಯ ಕುರಿತು ಶಿವಣ್ಣ ಬಳಿ ಪ್ರಸ್ತಾಪಿಸಿದಾಗ, ಅವರು ತಕ್ಷಣವೇ ನಿರೂಪ್‌ಗೆ ಕರೆ ಮಾಡಿ ನಟಿಸಲು ಒಪ್ಪಿಕೊಂಡರು. ಅವರ ಈ ಸರಳತೆ ಸಿನಿಮಾದ ತೂಕವನ್ನು ಹೆಚ್ಚಿಸಿದೆ,” ಎಂದು ಕೊಂಡಾಡಿದರು.
ನಾಯಕ ನಿರೂಪ್ ಭಂಡಾರಿ ಮಾತನಾಡಿ, ‘ಈ ಸಿನಿಮಾಕ್ಕಾಗಿ ತಾವು ಕಳೆದ ಎರಡು ವರ್ಷಗಳನ್ನು ಮುಡಿಪಾಗಿಟ್ಟಿರುವುದಾಗಿ ಹೇಳಿದರು. ನಿರ್ದೇಶಕ ಸಚಿನ್ ಅವರ ಕಥೆ ಇಷ್ಟವಾದ ನಂತರ, ಇಬ್ಬರೂ ಒಟ್ಟಾಗಿ ಕುಳಿತು ಸುಮಾರು ಮೂರು ತಿಂಗಳುಗಳ ಕಾಲ ಸಂಪೂರ್ಣ ಚಿತ್ರಕಥೆಯನ್ನು ತಿದ್ದಿದ್ದಾಗಿ ವಿವರಿಸಿದರು. ಹರಿಶ್ಚಂದ್ರನ ಪಾತ್ರಕ್ಕೆ ಸಾಯಿಕುಮಾರ್ ಸೂಕ್ತ ಎಂದು ತಮ್ಮ ತಂದೆ ಸಲಹೆ ನೀಡಿದ್ದರು ಎಂದರು. ಶಿವಣ್ಣ ಅವರ ಬದ್ಧತೆಯನ್ನು ಮೆಚ್ಚಿದ ಅವರು, ಆರೋಗ್ಯ ಸರಿ ಇಲ್ಲದಿದ್ದರೂ ಸೆಟ್‌ನಲ್ಲಿ ಅವರು ತೋರಿದ ಶ್ರದ್ಧೆ ಮತ್ತು ಡೈಲಾಗ್ ಕಂಠಪಾಠ ಮಾಡಿಕೊಂಡು ನಟಿಸುತ್ತಿದ್ದ ರೀತಿ ನಿಜವಾದ ಸೂಪರ್‌ಸ್ಟಾರ್‌ತನಕ್ಕೆ ಸಾಕ್ಷಿ ಎಂದರು. ಹಾಗೆಯೇ, ಮಹಾರಾಷ್ಟ್ರದ ಪುಣೆಯಿಂದ ಬಂದು ಕನ್ನಡದಲ್ಲಿ ಸಿನಿಮಾ ನಿರ್ಮಿಸುತ್ತಿರುವ ಅಂಕಿತ್ ಅವರ ನಂಬಿಕೆಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.
ಇದನ್ನೂ ಓದಿ:ನಿರೂಪ್ ಭಂಡಾರಿ ಜೊತೆ ಬೃಂದಾ ಆಚಾರ್ಯ ಹೊಸ ಸಿನಿಮಾ; ಶಿವಾನಿಗೆ ಸಖತ್ ಚಾನ್ಸ್
ಚಿತ್ರದ ನಾಯಕಿ ಬೃಂದಾ ಆಚಾರ್ಯ ಮಾತನಾಡಿ, ಸಾಯಿಕುಮಾರ್ ಅವರಂತಹ ಹಿರಿಯ ಕಲಾವಿದರೊಂದಿಗೆ ವೇದಿಕೆ ಹಂಚಿಕೊಂಡಿರುವುದು ಕೃತಜ್ಞತೆಯ ಕ್ಷಣ ಎಂದರು. ಪರಭಾಷೆಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ ಬಂಡವಾಳ ಹೂಡುತ್ತಿರುವ ನಿರ್ಮಾಪಕರಿಗೆ ಧನ್ಯವಾದ ಅರ್ಪಿಸಿದ ಅವರು, ಈ ಚಿತ್ರವು ಭಾವನಾತ್ಮಕ ಸನ್ನಿವೇಶಗಳ ಜೊತೆಗೆ ಶಿವಣ್ಣ ಮತ್ತು ಸಾಯಿಕುಮಾರ್ ಅವರ ಉಪಸ್ಥಿತಿಯಿಂದಾಗಿ ಭರ್ಜರಿ ಮಾಸ್ ಎಂಟರ್‌ಟೈನರ್ ಆಗಿ ಹೊರಹೊಮ್ಮಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮತ್ತೊಬ್ಬ ನಾಯಕಿ ಅಂಕಿತಾ ಅಮರ್ ತಮ್ಮ ಅನುಭವ ಹಂಚಿಕೊಳ್ಳುತ್ತಾ, ಚಿತ್ರದಲ್ಲಿ ತಾವು ‘ಗಾನ’ ಎಂಬ ಪ್ರಾಮಾಣಿಕ ಪತ್ರಕರ್ತೆಯ ಪಾತ್ರ ಮಾಡಿರುವುದಾಗಿ ಹೇಳಿದರು. ಈ ಸಿನಿಮಾ ಕೇವಲ ಮನರಂಜನೆಗೆ ಸೀಮಿತವಾಗದೆ, ತಂದೆ-ತಾಯಂದಿರ ಮೇಲಿನ ಗೌರವ ಮತ್ತು ಸಂಸ್ಕಾರದ ಮೌಲ್ಯಗಳನ್ನು ಸಾರುತ್ತದೆ ಎಂದರು. ಚಿತ್ರೀಕರಣದ ವೇಳೆ ಸಾಯಿಕುಮಾರ್ ಅವರ 50 ವರ್ಷಗಳ ಚಿತ್ರರಂಗದ ಸುದೀರ್ಘ ಪಯಣವನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದ್ದನ್ನು ನೆನಪಿಸಿಕೊಂಡ ಅವರು, ಇಷ್ಟೊಂದು ಎತ್ತರಕ್ಕೆ ಬೆಳೆದರೂ ಸಾಯಿಕುಮಾರ್ ತೋರಿಸುವ ವಿನಮ್ರತೆ ಪ್ರತಿಯೊಬ್ಬರಿಗೂ ಮಾದರಿ ಎಂದರು.
ಚಿತ್ರಕಥೆ ರಚನೆಯಲ್ಲಿ ನಿರೂಪ್ ಭಂಡಾರಿ ಕೂಡ ಸಕ್ರಿಯವಾಗಿ ಭಾಗವಹಿಸಿದ್ದಾರೆ. ‘ಅಂಕಿತ್ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಅಂಕಿತ್ ಸೋನಿಗಾರ ಅತ್ಯಂತ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಪ್ರಶಾಂತ್ ಮುಲಗೆ ಸಹ-ನಿರ್ಮಾಪಕರಾಗಿದ್ದಾರೆ. ಸಚಿನ್ ವಾಲಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ಸಚಿನ್ ಬಸ್ರೂರು ಸಂಗೀತ ಹಾಗೂ ಸಂದೀಪ್ ವಲ್ಲೂರಿ ಛಾಯಾಗ್ರಹಣ ಒದಗಿಸಿದ್ದಾರೆ. ಸ್ವಾತಿ ಗುರುದತ್, ಎಂ.ಕೆ. ಮಠ, ಚೇತನ್ ದುರ್ಗಾ, ಶೌರ್ಯ, ಅಭಿಷೇಕ್ ಶ್ರೀಕಾಂತ್ ಮತ್ತು ಅಶ್ವಿನ್ ಹಾಸನ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಈ ಸಿನಿಮಾ 2027ರ ಜನವರಿ 22ರಂದು ಬೆಳ್ಳಿಪರದೆಯ ಮೇಲೆ ರಾಜ್ಯಾದ್ಯಂತ ಅಪ್ಪಳಿಸಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Sun, 25 October 26