Sanchari Vijay Funeral: ಪಂಚನಹಳ್ಳಿಯಲ್ಲಿ ಸಂಚಾರಿ ವಿಜಯ್ ಬಂಧುಗಳ ಕಣ್ಣೀರ ಕೋಡಿ; ಹುಟ್ಟೂರಿನ ಅಂತಿಮ ನಮನ

ಮದನ್​ ಕುಮಾರ್​
|

Updated on: Jun 15, 2021 | 4:51 PM

Sanchari Vijay: ಸಂಚಾರಿ ವಿಜಯ್​ ಅವರ ಪಾರ್ಥಿವ ಶರೀರವನ್ನು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿಗೆ ಕೊಂಡೊಯ್ಯಲಾಯಿತು. ಅಂತ್ಯಕ್ರಿಯೆಗೂ ಮುನ್ನ ಬಂಧುಗಳು ಕಣ್ಣೀರ ಕೋಡಿ ಹರಿಸಿದರು.

 

ಪ್ರತಿಭಾನ್ವಿತ ನಟ ಸಂಚಾರಿ ವಿಜಯ್​ ಇನ್ನಿಲ್ಲ ಎಂಬ ಸುದ್ದಿಯನ್ನು ಅವರ ಕುಟುಂಬದವರು ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ. ಮನೆಮಗನ ನಿಧನದಿಂದಾಗಿ ಇಡೀ ಕುಟುಂಬವೇ ಕಣ್ಣೀರು ಹಾಕುತ್ತಿದೆ. ಬಣ್ಣದ ಲೋಕದಲ್ಲಿ ಮಿಂಚಿ ಮೆರೆಯಬೇಕಾಗಿದ್ದ ಅಪ್ಪಟ ಪ್ರತಿಭಾವಂತ ಹೀಗೆ ಅಕಾಲಿಕ ಮರಣ ಹೊಂದಿರುವುದು ತೀವ್ರ ನೋವಿನ ಸಂಗತಿ. ಸಂಚಾರಿ ವಿಜಯ್​ ಅವರ ಮೃತದೇಹವನ್ನು ಅವರ ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು.

ಲಾಕ್​ಡೌನ್​ ಸಂದರ್ಭದಲ್ಲಿ ಅನೇಕರಿಗೆ ಸಂಚಾರಿ ವಿಜಯ್​ ಸಹಾಯ ಮಾಡುತ್ತಿದ್ದರು. ಫುಡ್​ ಕಿಟ್​ ಕೊಟ್ಟು ಮರಳುತ್ತಿರುವಾಗಲೇ ಜೂ.12ರ ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ​ ಅವರಿಗೆ ಆಕ್ಸಿಡೆಂಟ್​ ಆಗಿತ್ತು. ಸ್ನೇಹಿತ ನವೀನ್​ ಅವರ ಬೈಕ್​ನಲ್ಲಿ ಹಿಂಬದಿ ಕುಳಿತು ಪ್ರಯಾಣ ಮಾಡುತ್ತಿದ್ದ ವಿಜಯ್​ಗೆ ಮಾರಣಾಂತಿಕವಾಗಿ ಪೆಟ್ಟು ಬಿದ್ದಿತ್ತು. ತಲೆ ಮತ್ತು ತೊಡೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು.

ತಕ್ಷಣವೇ ಅವರನ್ನು ಸಮೀಪದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಆದ ಪರಿಣಾಮ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. ಕಡೆಗೂ ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾದರು. ಅವರ ಅಂಗಾಂಗಳನ್ನು ದಾನ ಮಾಡಲಾಯಿತು. ಮಂಗಳವಾರ (ಜೂ.15) ಬೆಳಗ್ಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕಾಗಿ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿತ್ತು. ಮಧ್ಯಾಹ್ನ 3.45ಕ್ಕೆ ಅವರ ಹುಟ್ಟೂರಾದ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

ಇದನ್ನೂ ಓದಿ:

Sanchari Vijay Funeral: ‘ದಯವಿಟ್ಟು ಸಂಚಾರಿ ವಿಜಯ್ ಮುಖ ತೋರಿಸಿ’; ಮಧ್ಯೆ ರಸ್ತೆಯಲ್ಲಿ ಅಭಿಮಾನಿಗಳ ಕೂಗು

Sanchari Vijay: ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಟೀಸರ್​ ನೋಡಿದರೆ ಕಲ್ಲು ಹೃದಯವೂ ಕರಗಲೇಬೇಕು