ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಉಪೇಂದ್ರ (Upendra) ಅವರು ‘ಕಬ್ಜ’ ಸಿನಿಮಾ ಮಾಡುತ್ತಿದ್ದಾರೆ. ಅತ್ತ, ಶಿವರಾಜ್ಕುಮಾರ್ ನಟನೆಯ ‘45’ ಚಿತ್ರ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಲಿದೆ. ಅಚ್ಚರಿ ಎಂದರೆ, ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ (Shivarajkumar) ಜೊತೆ ‘ರಿಯಲ್ ಸ್ಟಾರ್’ ಉಪೇಂದ್ರ ಕೂಡ ನಟಿಸಲಿದ್ದಾರೆ. ಈ ಬಗ್ಗೆ ‘45’ ಚಿತ್ರತಂಡದಿಂದ ದೊಡ್ಡ ಸುದ್ದಿ ಸಿಕ್ಕಿದೆ. ಈ ಸಿನಿಮಾಗೆ ರಮೇಶ್ ರೆಡ್ಡಿ ಬಂಡವಾಳ ಹೂಡುತ್ತಿದ್ದು, ಅರ್ಜುನ್ ಜನ್ಯ ಅವರು ನಿರ್ದೇಶನ ಮಾಡುತ್ತಿದ್ದಾರೆ. ಪಾತ್ರವರ್ಗಕ್ಕೆ ಉಪೇಂದ್ರ ಸೇರ್ಪಡೆ ಆಗಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ನಿರ್ಮಾಪಕ ರಮೇಶ್ ರೆಡ್ಡಿ ಮತ್ತು ನಿರ್ದೇಶಕ ಅರ್ಜುನ್ ಜನ್ಯ (Arjun Janya) ಅವರು ಉಪೇಂದ್ರ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಿದ್ದಾರೆ.
ಗಣೇಶ್, ದಿಗಂತ್, ಪವನ್ ಕುಮಾರ್ ನಟನೆಯ ‘ಗಾಳಿಪಟ 2’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ಇದರಿಂದ ರಮೇಶ್ ರೆಡ್ಡಿ ಅವರಿಗೆ ಲಾಭವಾಯಿತು. ಈಗ ಅವರು ಮುಂದಿನ ಸಿನಿಮಾ ಮೇಲೆ ಗಮನ ಹರಿಸಿದ್ದಾರೆ. ತಮ್ಮ ‘ಸೂರಜ್ ಪ್ರೊಡಕ್ಷನ್ಸ್’ ಮೂಲಕ ದೊಡ್ಡ ಸಾಹಸಕ್ಕೆ ಅವರು ಕೈ ಹಾಕಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನ ಮಾಡಲಿರುವ ‘45’ ಚಿತ್ರವನ್ನು ಶಿವರಾಜ್ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಅನೌನ್ಸ್ ಮಾಡಲಾಗಿತ್ತು. ಸದ್ಯ ಆ ಚಿತ್ರಕ್ಕೆ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
ಬಹುಕೋಟಿ ವೆಚ್ಚದಲ್ಲಿ ‘45’ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಿನಿಮಾದ ಚಿತ್ರೀಕರಣ ಡಿಸೆಂಬರ್ನಲ್ಲಿ ಆರಂಭ ಆಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ತೆರೆಕಾಣಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಅರ್ಜುನ್ ಜನ್ಯ ಅವರೇ ಕಥೆ-ಚಿತ್ರಕಥೆ ಬರೆದಿದ್ದು, ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿದ್ದಾರೆ. ಶೂಟಿಂಗ್ ಶುರು ಆಗುವುದಕ್ಕೂ ಮುನ್ನವೇ ಚಿತ್ರದ ಆಡಿಯೋ ಹಕ್ಕುಗಳಿಗೆ ಸಖತ್ ಡಿಮ್ಯಾಂಡ್ ಬಂದಿದೆ ಎನ್ನಲಾಗಿದೆ.
ಶಿವರಾಜ್ಕುಮಾರ್ ಮತ್ತು ಉಪೇಂದ್ರ ಅವರು ಈ ಚಿತ್ರದಲ್ಲಿ ಜೊತೆಯಾಗಿ ನಟಿಸಲಿರುವುದರಿಂದ ಅವರಿಬ್ಬರ ಪಾತ್ರಗಳು ಹೇಗಿರಲಿವೆ ಎಂಬ ಕೌತುಕ ನಿರ್ಮಾಣ ಆಗಿದೆ. ಈ ಹಿಂದೆ ‘ಓಂ’ ಚಿತ್ರದಲ್ಲಿ ಉಪೇಂದ್ರ ಮತ್ತು ಶಿವಣ್ಣ ಒಟ್ಟಿಗೆ ಕೆಲಸ ಮಾಡಿದ್ದರು. ಬಳಿಕ ‘ಪ್ರೀತ್ಸೆ’ ಹಾಗೂ ‘ಲವ ಕುಶ’ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಈ ಮತ್ತೆ ಅವರಿಬ್ಬರು ‘45’ ಚಿತ್ರಕ್ಕಾಗಿ ಒಂದಾಗುತ್ತಿರುವುದು ವಿಶೇಷ. ಚಿತ್ರದ ಬಗ್ಗೆ ಹೆಚ್ಚಿನ ಅಪ್ಡೇಟ್ ಪಡೆಯಲು ಫ್ಯಾನ್ಸ್ ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.