ಬೆಂಗಳೂರು: ಲಾಕ್ಡೌನ್ ನಡುವೆಯೇ ಏಪ್ರಿಲ್ 17ರಂದು ರಾಮನಗರ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ಹೆಚ್ಡಿಕೆ ತೋಟದ ಮನೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮದುವೆ ಸಮಾರಂಭ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಮದುವೆ ಸಮಾರಂಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದರ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಹೀಗಾಗಿ ಇಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರದಿಂದ ವಿವರಣೆ ಸಲ್ಲಿಕೆ ಮಾಡಲಾಗಿದೆ.
ಕೇತಗಾನಹಳ್ಳಿ ಮನೆಯಲ್ಲಿ ಏಪ್ರಿಲ್ 17ರಂದು ನಡೆದ ವಿವಾಹಕ್ಕೆ ಡಿಸಿ ಅನುಮತಿ ನೀಡಿದ್ದರು. ಬೆಳಗ್ಗೆ 8ರಿಂದ 10 ಗಂಟೆವರೆಗೆ ಮದುವೆ ಸಮಾರಂಭ ನಡೆದಿದೆ. ಮದುವೆಯಲ್ಲಿ 80-95 ಕುಟುಂಬಸ್ಥರು ಭಾಗವಹಿಸಿದ್ದರು. ಹಾಗೂ ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗಿತ್ತು.
ಮದುವೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ಮದುವೆ ಸಮಾರಂಭದಲ್ಲಿ ಮಾಸ್ಕ್ ಧರಿಸಲಾಗಿತ್ತು. ಆದರೆ ಮಾಂಗಲ್ಯ ಧಾರಣೆಯ ವೇಳೆ ಮಾತ್ರ ಮಾಸ್ಕ್ ಧರಿಸಿಲ್ಲ. ಕುಟುಂಬಸ್ಥರು ಕೂಡ ಆಗ ಮಾತ್ರ ಮಾಸ್ಕ್ ಧರಿಸಿಲ್ಲದಿರುವುದು ಕಂಡುಬಂದಿದೆ ಎಂದು ಕೋರ್ಟ್‌ಗೆ ಸರ್ಕಾರಿ ವಕೀಲ ವಿಕ್ರಂ ಹುಯಿಲ್ಗೋಳ್ ವಿವರಣೆ ನೀಡಿದ್ದಾರೆ.