
ಕನ್ನಡ ಚಿತ್ರರಂಗದ ಖ್ಯಾತ ನಟ ಯುವ ರಾಜ್‌ಕುಮಾರ್ ಅವರ ಖಾಸಗಿ ಜೀವನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಚರ್ಚೆ ಆರಂಭ ಆಗಿದೆ. ಇದಕ್ಕೆಲ್ಲ ಕಾರಣ ಆಗಿರುವುದು ಅವರ ಪತ್ನಿ ಶ್ರೀದೇವಿ ಭೈರಪ್ಪ ಹಂಚಿಕೊಂಡಿರುವ ಒಂದು ಪೋಸ್ಟ್. ಸದ್ಯಕ್ಕೆ ಶ್ರೀದೇವಿ ಭೈರಪ್ಪ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅಮೆರಿಕದಲ್ಲಿ ಇರುವ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪೋಸ್ಟ್ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಮಾಡಿರುವ ಒಂದು ಪೋಸ್ಟ್ ಗಮನ ಸೆಳೆದಿದೆ. ಅದಕ್ಕೆ ಅವರು ನೀಡಿರುವ ಕ್ಯಾಪ್ಷನ್ ಬಗ್ಗೆ ಚರ್ಚೆ ಶುರುವಾಗಿದೆ.
ಶ್ರೀದೇವಿ ಭೈರಪ್ಪ ಮತ್ತು ಯುವ ರಾಜ್‌ಕುಮಾರ್ ಅವರ ಸಂಸಾರದ ಬಿರುಕು ಈ ಮೊದಲೇ ನ್ಯಾಯಾಲಯದ ಮೆಟ್ಟಿಲೇರಿತ್ತು. ಸದ್ಯ ವಿದೇಶದಲ್ಲಿದ್ದುಕೊಂಡೇ ಕಾನೂನು ಹೋರಾಟ ಮುಂದುವರಿಸುತ್ತಿರುವ ಶ್ರೀದೇವಿ ಅವರು ತಮ್ಮ ಹಳೆಯ ಫೋಟೋಗಳನ್ನು ಒಳಗೊಂಡ ವಿಶೇಷ ರೀಲ್ಸ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತಮ್ಮ ಪತಿ ಹಾಗೂ ಅವರ ಜೀವನದಲ್ಲಿ ಇದ್ದಾರೆ ಎನ್ನಲಾದ ಇನ್ನೊಬ್ಬ ಹುಡುಗಿಯನ್ನು ಉದ್ದೇಶಿಸಿ ಬರೆದಿರುವ ಸಾಲುಗಳು ವೈರಲ್ ಆಗುತ್ತಿವೆ.
ಲವ್, ಮದುವೆ, ನಂಬಿಕೆ, ದ್ರೋಹ ಮುಂತಾದ ವಿಷಯಗಳ ಕುರಿತು ಶ್ರೀದೇವಿ ಭೈರಪ್ಪ ಅವರು ಆಗಾಗ ಪೋಸ್ಟ್ ಮಾಡುತ್ತಾರೆ. ಈ ಬಾರಿ ಅವರು ಇನ್ನಷ್ಟು ವಿವರವಾಗಿ ಬರೆದುಕೊಂಡಿದ್ದಾರೆ. ಆ ಕಾರಣದಿಂದಲೇ ಈ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಶ್ರೀದೇವಿ ಭೈರಪ್ಪ ಅವರು ಈ ಪೋಸ್ಟ್ ಮೂಲಕ ಒಂದು ವಿಷಯವನ್ನು ಬಹಿರಂಗಪಡಿಸಿದ್ದಾರೆ.
‘ಅವನ ಫೋನ್‌ನಲ್ಲಿ ನನ್ನ ಇಂತಹ 10 ಸಾವಿರ ಫೋಟೋಗಳಿದ್ದವು. ಅದನ್ನು ನೋಡಿ ಆತನಿಗೆ ನಾನೇ ಸ್ಪೆಷಲ್ ಎಂದು ಭಾವಿಸಿದ್ದೆ. ಆದರೆ, ಒಂದು ದಿನ ಆತನ ಗ್ಯಾಲರಿಯಲ್ಲಿ ಇನ್ನೊಬ್ಬ ಹುಡುಗಿಯದ್ದೂ ಇದೇ ರೀತಿಯ ಪೋಸ್ ಮತ್ತು ಫೋಟೋಗಳನ್ನು ನೋಡಿದ ಮೇಲೆಯೇ ನನಗೆ ನೈಜ ಸತ್ಯದ ಅರಿವಾಗಿದ್ದು’ ಎಂದು ಶ್ರೀದೇವಿ ಅವರು ಕ್ಯಾಪ್ಷನ್ ಆರಂಭಿಸಿದ್ದಾರೆ.
ಇದನ್ನೂ ಓದಿ: ಯುವ ಜೊತೆಗಿನ ಫೋಟೋ ಹಂಚಿಕೊಂಡು ಮಹಿಳೆಯರಿಗೆ ಸಂದೇಶ ಕೊಟ್ಟ ಶ್ರೀದೇವಿ ಭೈರಪ್ಪ
‘ನಾನು ಆ ಹುಡುಗಿಗೆ ಒಂದನ್ನಂತೂ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ: ನೀನೇನು ಸ್ಪೆಷಲ್ ಅಲ್ಲ. ಆ ಫೋಟೋಗಳ ಮೇಲೆ ಎಷ್ಟೇ ದೃಷ್ಟಿಬೊಟ್ಟು ಎಮೋಜಿಗಳನ್ನು ಹಾಕಿದರೂ ಯಾವುದೇ ಪ್ರಯೋಜನವಿಲ್ಲ. ಫೋಟೋ ಕ್ರೆಡಿಟ್: ಡಿಯರ್ ಹಸ್ಬೆಂಡ್’ ಎಂದು ಶ್ರೀದೇವಿ ಭೈರಪ್ಪ ಅವರು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.