
ಭಾರತೀಯ ಚಿತ್ರರಂಗದಲ್ಲಿ ನಿರ್ದೇಶಕ ರಾಜಮೌಳಿ (SS Rajamouli) ಅವರದ್ದು ದೊಡ್ಡ ಹೆಸರು. ಅವರು ಮಾಡುವ ಪ್ರತಿ ಸಿನಿಮಾ ಕೂಡ ಡಿಫರೆಂಟ್ ಆಗಿರುತ್ತದೆ. ಆ ಕಾರಣಕ್ಕಾಗಿ ಅವರ ಮೇಲೆ ಸಿನಿಪ್ರಿಯರಿಗೆ ಎಲ್ಲಿಲ್ಲದಷ್ಟು ಅಭಿಮಾನ. ಹೈ ಬಜೆಟ್ ಚಿತ್ರಗಳ ಮೂಲಕ ಬೇರೊಂದು ಲೋಕವನ್ನು ಅವರು ಪ್ರೇಕ್ಷಕರ ಮುಂದಿಡುತ್ತಾರೆ. ‘ಮಗಧೀರ’, ‘ಈಗ’, ‘ಬಾಹುಬಲಿ’, ‘ಆರ್ಆರ್ಆರ್’ (RRR) ಮುಂತಾದ ಸಿನಿಮಾಗಳ ಮೂಲಕ ರಾಜಮೌಳಿ ಅವರ ಸಾಮರ್ಥ್ಯ ಏನು ಎಂಬುದು ಸಾಬೀತಾಗಿದೆ. ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿದಂತಹ ಸಿನಿಮಾಗಳನ್ನು ಅವರು ನೀಡಿದ್ದಾರೆ. ಇಂದು (ಅ.10) ರಾಜಮೌಳಿ ಅವರಿಗೆ ಜನ್ಮದಿನದ (SS Rajamouli Birthday) ಸಂಭ್ರಮ. ಆ ಪ್ರಯುಕ್ತ ಅವರ ಸಿನಿಮಾ ಪಯಣವನ್ನು ಮೆಕುಲು ಹಾಕುತ್ತ, ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗುತ್ತಿದೆ.
ರಾಜಮೌಳಿ ಅವರ ಇಡೀ ಕುಟುಂಬವೇ ಸಿನಿಮಾ ರಂಗದಲ್ಲಿ ತೊಡಗಿಕೊಂಡಿದೆ. ಅವರ ತಂದೆ ವಿಜಯೇಂದ್ರ ಪ್ರಸಾದ್ ಕೂಡ ಕೆಲವು ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ಹಲವಾರು ಸಿನಿಮಾಗಳಿಗೆ ಕಥೆ ಬರೆದ ಖ್ಯಾತಿ ಅವರಿಗೆ ಸಲ್ಲುತ್ತದೆ. ತಂದೆಯ ಜೊತೆಗಿದ್ದು ಸಿನಿಮಾದ ತಂತ್ರಗಳನ್ನು ರಾಜಮೌಳಿ ಕಲಿತುಕೊಂಡರು.
ಇಂದು ಸ್ಟಾರ್ ನಿರ್ದೇಶಕನಾಗಿ ಬೆಳೆದುನಿಂತಿರುವ ರಾಜಮೌಳಿ ಅವರು ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದು ಜ್ಯೂ. ಎನ್ಟಿಆರ್ ನಟನೆಯ ‘ಸ್ಟೂಡೆಂಟ್ ನಂ.1’ ಸಿನಿಮಾಗೆ. 2001ರಲ್ಲಿ ತೆರೆಕಂಡ ಆ ಚಿತ್ರ ಸೂಪರ್ ಹಿಟ್ ಆಯಿತು. ಆಗಿನ ಕಾಲಕ್ಕೆ ಬಾಕ್ಸ್ ಆಫೀಸ್ನಲ್ಲಿ 12 ಕೋಟಿ ರೂಪಾಯಿ ಗಳಿಸಿದ್ದು ಆ ಸಿನಿಮಾದ ಹೆಚ್ಚುಗಾರಿಕೆ. ನಂತರ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ರಾಜಮೌಳಿ ಇತಿಹಾಸ ಬರೆದರು.
ರಾಜಮೌಳಿ ಅವರ ಸಿನಿಮಾ ಬದುಕಿಗೆ ಟರ್ನಿಂಗ್ ಪಾಯಿಂಟ್ ಆಗಿದ್ದು ‘ಮಗಧೀರ’ ಚಿತ್ರ. ರಾಮ್ ಚರಣ್ ನಟನೆಯ ಈ ಸಿನಿಮಾದಲ್ಲಿ ಭರ್ಜರಿ ಸಾಹಸ ದೃಶ್ಯಗಳಿದ್ದವು. ಗ್ರಾಫಿಕ್ಸ್ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿತ್ತು. ಅಂದಾಜು 44 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಬರೋಬ್ಬರಿ 150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಿತು. ಆ ಬಳಿಕ ರಾಜಮೌಳಿ ಅವರ ಚಾರ್ಮ್ ಹೆಚ್ಚಿತು.
ಪ್ರತಿ ಸಿನಿಮಾದಲ್ಲೂ ರಾಜಮೌಳಿ ಅವರು ಹೊಸ ಹೊಸ ಮೈಲಿಗಲ್ಲುಗಳನ್ನು ನಿರ್ಮಿಸುತ್ತಲೇ ಸಾಗುತ್ತಿದ್ದಾರೆ. ‘ಬಾಹುಬಲಿ’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಗಳಿಸಿತು. ಈ ವರ್ಷ ತೆರೆಕಂಡ ‘ಆರ್ಆರ್ಆರ್’ ಚಿತ್ರ ಕೂಡ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಮಾಯಿ ಮಾಡಿ ಸೈ ಎನಿಸಿಕೊಂಡಿತು. ಹೀಗೆ ‘ಸ್ಟೂಡೆಂಟ್ ನಂ.1’ ಚಿತ್ರದಿಂದ ಶುರುವಾದ ರಾಜಮೌಳಿ ಅವರ ಜರ್ನಿ ಇಂದಿಗೂ ಯಶಸ್ವಿಯಾಗಿ ಸಾಗುತ್ತಿದೆ.
ಮುಂದಿನ ಸಿನಿಮಾಗಾಗಿ ರಾಜಮೌಳಿ ಅವರು ತಯಾರಿ ನಡೆಸುತ್ತಿದ್ದಾರೆ. ಟಾಲಿವುಡ್ನ ‘ಪ್ರಿನ್ಸ್’ ಮಹೇಶ್ ಬಾಬು ಜೊತೆ ಅವರು ಸಿನಿಮಾ ಮಾಡಲಿದ್ದು, ಆ ಚಿತ್ರದ ಮೇಲೆ ಸಖತ್ ನಿರೀಕ್ಷೆ ಮನೆ ಮಾಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:04 am, Mon, 10 October 22