RRR ಆಸ್ಕರ್ ಆಸೆ ಇನ್ನೂ ಜೀವಂತ; ಬೇರೆ ಮಾರ್ಗದಲ್ಲಿ ಸ್ಪರ್ಧೆಗೆ ಇಳಿದ ರಾಜಮೌಳಿ ಸಿನಿಮಾ
SS Rajamouli | Oscar Award: ‘ಆರ್ಆರ್ಆರ್’ ತಂಡ For Your Consideration ಕ್ಯಾಂಪೇನ್ ಮೂಲಕ ಆಸ್ಕರ್ ಸ್ಪರ್ಧೆಗೆ ಎಂಟ್ರಿ ನೀಡಲು ಪ್ರಯತ್ನಿಸುತ್ತಿದೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಭಾರತೀಯ ಚಿತ್ರರಂಗದಲ್ಲಿ ‘ಆರ್ಆರ್ಆರ್’ (RRR) ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ. ಚಿತ್ರಮಂದಿರದಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಈ ಚಿತ್ರ ಯಶಸ್ವಿ ಆಯಿತು. ರಾಜಮೌಳಿ (SS Rajamouli) ನಿರ್ದೇಶನಕ್ಕೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿತು. ಆದರೆ ಭಾರತದಿಂದ ಅಧಿಕೃತವಾಗಿ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ ಆಗುವಲ್ಲಿ ‘ಆರ್ಆರ್ಆರ್’ ಚಿತ್ರ ವಿಫಲವಾಯಿತು. ಇದರಿಂದ ಅಭಿಮಾನಿಗಳಿಗೆ ಸಖತ್ ಬೇಸರ ಆಗಿತ್ತು. ಗುಜರಾತಿ ಭಾಷೆಯ ‘ಚೆಲ್ಲೋ ಶೋ’ ಸಿನಿಮಾ ಆಸ್ಕರ್ ಸ್ಪರ್ಧೆಗೆ ಭಾರತದಿಂದ ಆಯ್ಕೆ ಆಯಿತು. ಆಗ ರಾಜಮೌಳಿ ಅಭಿಮಾನಿಗಳು ಬೇಸರ ಮಾಡಿಕೊಂಡರು. ಆದರೆ ಈಗ ಒಂದು ಗುಡ್ ನ್ಯೂಸ್ ಕೇಳಿಬಂದಿದೆ. ‘For Your Consideration’ ಎಂಬ ಕ್ಯಾಂಪೇನ್ ಮೂಲಕ ‘ಆರ್ಆರ್ಆರ್’ ಸಿನಿಮಾವನ್ನು ಆಸ್ಕರ್ (Oscar Award) ಕಣಕ್ಕೆ ಕಳಿಸಲು ಪ್ರಯತ್ನ ನಡೆದಿದೆ.
‘ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ’ ಕಡೆಯಿಂದ ‘ಆರ್ಆರ್ಆರ್’ ಸಿನಿಮಾ ಆಸ್ಕರ್ ಸ್ಪರ್ಧೆಗೆ ಅರ್ಹತೆ ಪಡೆದಿಲ್ಲ ಎಂದ ಮಾತ್ರಕ್ಕೆ ಈ ಚಿತ್ರ ಸಮರ್ಥವಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂಬುದು ಅಭಿಮಾನಿಗಳ ವಾದ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಪರವಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಧ್ವನಿ ಎತ್ತುತ್ತಲೇ ಇದ್ದಾರೆ. ಅದರ ಬೆನ್ನಲ್ಲೇ ‘ಆರ್ಆರ್ಆರ್’ ತಂಡ For Your Consideration ಕ್ಯಾಂಪೇನ್ ಮೂಲಕ ಆಸ್ಕರ್ ಸ್ಪರ್ಧೆಗೆ ಎಂಟ್ರಿ ನೀಡಲು ಪ್ರಯತ್ನಿಸುತ್ತಿದೆ.
ಆಸ್ಕರ್ ಕಮಿಟಿಯ ಗಮನ ಸೆಳೆಯಲು For Your Consideration ಕಾಂಪೇನ್ ಮಾಡಲಾಗುತ್ತದೆ. ಇದಕ್ಕೆ ಬಹುಕೋಟಿ ರೂಪಾಯಿ ಹಣ ಖರ್ಚಾಗುತ್ತದೆ. ಎಲ್ಲ ಸಿನಿಮಾಗಳಿಗೂ ಈ ಪರಿ ಹಣ ಖರ್ಚು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ‘ಆರ್ಆರ್ಆರ್’ ನಿರ್ಮಾಪಕರು ಸಾಕಷ್ಟು ಲಾಭ ಕಂಡಿರುವುದರಿಂದ For Your Consideration ಕ್ಯಾಂಪೇನ್ಗೆ ಖರ್ಚು ಮಾಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ-ನಟಿ, ಅತ್ಯುತ್ತಮ ಪೋಷಕ ಕಲಾವಿದರು, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಹಾಡು ಮುಂತಾದ ವಿಭಾಗಗಳಲ್ಲಿ ನಾಮನಿರ್ದೇಶನಗೊಳ್ಳಲು ‘ಆರ್ಆರ್ಆರ್’ ಚಿತ್ರ ಪ್ರಯತ್ನಿಸುತ್ತಿದೆ. ಹೀಗೆ ಸ್ವತಂತ್ರವಾಗಿ ಆಸ್ಕರ್ಗೆ ಎಂಟ್ರಿ ನೀಡುವ ಸಾಹಸಕ್ಕೆ ಮುಂದಾಗಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
‘ಆರ್ಆರ್ಆರ್’ ಸಿನಿಮಾದಲ್ಲಿ ರಾಮ್ ಚರಣ್, ಜೂನಿಯರ್ ಎನ್ಟಿಆರ್, ಆಲಿಯಾ ಭಟ್, ಅಜಯ್ ದೇವಗನ್, ಶ್ರೀಯಾ ಶರಣ್ ಮುಂತಾದವರು ನಟಿಸಿದ್ದಾರೆ. ಎಂಎಂ ಕೀರವಾಣಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಮೂಡಿಬಂದ ಈ ಸಿನಿಮಾದಿಂದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅವರ ಚಾರ್ಮ್ ಹೆಚ್ಚಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:59 am, Thu, 6 October 22