Lokesh Rajendran: ಖ್ಯಾತ ಕಿರುತೆರೆ ನಟ ಆತ್ಮಹತ್ಯೆ; ಪತ್ನಿಯಿಂದ ಡಿವೋರ್ಸ್ ನೋಟಿಸ್ ಬಂದ ಬೆನ್ನಲ್ಲೇ ದುರಂತ ಅಂತ್ಯ
Lokesh Rajendran Suicide: 150ಕ್ಕೂ ಅಧಿಕ ಧಾರಾವಾಹಿ ಹಾಗೂ ಸುಮಾರು 15 ಸಿನಿಮಾಗಳಲ್ಲಿ ಲೋಕೇಶ್ ರಾಜೇಂದ್ರನ್ ನಟಿಸಿದ್ದರು. ಮಂಗಳವಾರ (ಅ.4) ಆತ್ಮಹತ್ಯೆಗೆ ಶರಣಾದ ಅವರಿಗೆ 34 ವರ್ಷ ವಯಸ್ಸಾಗಿತ್ತು.
ಜನಸಾಮಾನ್ಯರ ರೀತಿಯೇ ಸೆಲೆಬ್ರಿಟಿಗಳ ಬದುಕಿನಲ್ಲೂ ಸಂಸಾರದ ಕಿರಿಕ್ಗಳು ಸಹಜ. ಖ್ಯಾತ ಕಿರುತೆರೆ ನಟ ಲೋಕೇಶ್ ರಾಜೇಂದ್ರನ್ (Lokesh Rajendran) ಬದುಕಿನಲ್ಲೂ ಹಾಗೆಯೇ ಆಗಿದೆ. ಪತ್ನಿ ಜೊತೆ ಅವರಿಗೆ ಮನಸ್ತಾಪ ಮೂಡಿತ್ತು. ಆದರೆ ಅದನ್ನು ಬಗೆಬರಿಸಿಕೊಳ್ಳುವ ಬದಲು ಲೋಕೇಶ್ ರಾಜೇಂದ್ರನ್ ಅವರು ಇಹಲೋಕ ತ್ಯಜಿಸಿದ್ದಾರೆ. ಅವರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಸುದ್ದಿ ಕೇಳಿಬಂದಿದೆ. ತಮಿಳಿನ ನೂರಾರು ಸೀರಿಯಲ್ಗಳಲ್ಲಿ ಅವರು ನಟಿಸಿದ್ದರು. ಬಾಲನಟನಾಗಿಯೇ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಈಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತೀವ್ರ ಆಘಾತ ಮೂಡಿಸಿದೆ. ಲೋಕೇಶ್ ರಾಜೇಂದ್ರನ್ ನಿಧನಕ್ಕೆ (Lokesh Rajendran Death) ತಮಿಳು ಕಿರುತೆರೆಯ ಸೆಲೆಬ್ರಿಟಿಗಳು, ಸೀರಿಯಲ್ ವೀಕ್ಷಕರು ಕಂಬನಿ ಮಿಡಿಯುತ್ತಿದ್ದಾರೆ.
ತಮಿಳಿನ 150ಕ್ಕೂ ಅಧಿಕ ಧಾರಾವಾಹಿ ಹಾಗೂ ಸುಮಾರು 15 ಸಿನಿಮಾಗಳಲ್ಲಿ ಲೋಕೇಶ್ ರಾಜೇಂದ್ರನ್ ನಟಿಸಿದ್ದರು. ವಿಜಯಕಾಂತ್, ಪ್ರಭು ಮುಂತಾದ ನಟರ ಜೊತೆ ಅಭಿನಯಿಸಿದ್ದರು. 1996ರ ಸಮಯದಲ್ಲೇ ಅವರು ಫೇಮಸ್ ಆಗಿದ್ದರು. ‘ಮರ್ಮದೇಸಮ್’ ಸೀರಿಯಲ್ನಲ್ಲಿ ಅವರು ರಾಸು ಎಂಬ ಪಾತ್ರ ಮಾಡಿ ಜನಮನ ಗೆದ್ದಿದ್ದರು. ಮಂಗಳವಾರ (ಅ.4) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ 34 ವರ್ಷ ವಯಸ್ಸಾಗಿತ್ತು.
‘ಲೋಕೇಶ್ ಮತ್ತು ಅವನ ಹೆಂಡತಿ ನಡುವೆ ಏನೋ ವೈಮನಸ್ಸು ಮೂಡಿದೆ ಅಂತ ನನಗೆ ಒಂದು ತಿಂಗಳ ಹಿಂದೆ ಗೊತ್ತಾಯಿತು. ನಾಲ್ಕು ದಿನಗಳ ಹಿಂದೆ ಆತನ ಹೆಂಡತಿಯಿಂದ ಡಿವೋರ್ಸ್ಗಾಗಿ ಲೀಗಲ್ ನೋಟಿಸ್ ಬಂದಿತ್ತು. ಕಳೆದ ಶುಕ್ರವಾರ ಆತನನ್ನು ನಾನು ನೋಡಿದ್ದೆ. ಖಿನ್ನತೆಗೆ ಒಳಗಾಗಿದ್ದ. ಸ್ವಲ್ಪ ಹಣ ಬೇಕು ಅಂತ ಕೇಳಿದ್ದ. ನಾನು ಕೊಟ್ಟಿದ್ದೆ. ಎಡಿಟರ್ ಆಗಿ ಹೊಸ ಕೆಲಸ ಮಾಡುವುದಾಗಿ ಆತ ತಿಳಿಸಿದ್ದ’ ಎಂದು ಕೆಲವು ಮಾಧ್ಯಮಗಳಿಗೆ ಲೋಕೇಶ್ ರಾಜೇಂದ್ರನ್ ಅವರ ತಂದೆ ಹೇಳಿಕೆ ನೀಡಿದ್ದಾರೆ.
ಸಂಸಾರದ ತಾಪತ್ರಯಗಳಿಂದ ರೋಸಿಹೋಗಿದ್ದ ಲೋಕೇಶ್ ರಾಜೇಂದ್ರನ್ ಅವರು ಮದ್ಯವ್ಯಸನಿ ಆಗಿದ್ದರು. ಹಲವು ಬಾರಿ ಚೈನ್ನೈನ ಬಸ್ ನಿಲ್ದಾಣಗಳಲ್ಲಿ ಅವರು ಮಲಗಿದ್ದನ್ನು ಜನರು ಗಮನಿಸಿದ್ದರು. ‘ಸೋಮವಾರ (ಅ.3) ಬಸ್ ನಿಲ್ದಾಣದಲ್ಲಿ ಲೋಕೇಶ್ ರಾಜೇಂದ್ರನ್ ಅಸ್ವಸ್ಥರಾಗಿದ್ದನ್ನು ನೋಡಿದ ಕೆಲವರು 108ಕ್ಕೆ ಕರೆ ಮಾಡಿ, ಪೊಲೀಸರಿಗೂ ಮಾಹಿತಿ ನೀಡಿದ್ದರು. ಬಳಿಕ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮಂಗಳವಾರ ರಾತ್ರಿ ಅವರು ನಿಧನರಾದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಲೋಕೇಶ್ ರಾಜೇಂದ್ರನ್ ನಟಿಸಿದ್ದ ‘ವಿದಾತು ಕರುಪ್ಪು’ ಸೀರಿಯಲ್ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಇಡೀ ತಂಡದವರು ಜೊತೆಯಾಗಿ ಸೇರಿದ್ದರು. ಅದಾಗಿ ಕೆಲವೇ ದಿನ ಕಳೆಯುವುದರೊಳಗೆ ಇಂಥ ಕಹಿ ಸುದ್ದಿ ಕೇಳುವಂತಾಗಿದ್ದು ವಿಪರ್ಯಾಸ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.