ಆತ್ಮಹತ್ಯೆ ಮಾಡಿಕೊಂಡ ಆಸ್ಕರ್​ ಪುರಸ್ಕೃತ ನಟಿಯ ಮಗ; ರೆಜೀನಾ ಕಿಂಗ್​ ಬಾಳಿನಲ್ಲಿ ಆವರಿಸಿತು ಕತ್ತಲು

ಆತ್ಮಹತ್ಯೆ ಮಾಡಿಕೊಂಡ ಆಸ್ಕರ್​ ಪುರಸ್ಕೃತ ನಟಿಯ ಮಗ; ರೆಜೀನಾ ಕಿಂಗ್​ ಬಾಳಿನಲ್ಲಿ ಆವರಿಸಿತು ಕತ್ತಲು
ಇಯಾನ್ ಅಲೆಕ್ಸಾಂಡರ್ ಜ್ಯೂನಿಯರ್, ರೆಜಿನಾ ಕಿಂಗ್

Ian Alexander Jr Death: ನಟಿ ರೆಜೀನಾ ಕಿಂಗ್ ಪುತ್ರ ಇಯಾನ್​ ಅಲೆಕ್ಸಾಂಡರ್​ ಜ್ಯೂನಿಯರ್ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ. ಅವರಿಗೆ 26 ವರ್ಷ ವಯಸ್ಸಾಗಿತ್ತು.

TV9kannada Web Team

| Edited By: Madan Kumar

Jan 23, 2022 | 3:26 PM

ಹಾಲಿವುಡ್​ ನಟಿ ರೆಜೀನಾ ಕಿಂಗ್​ (Regina King) ಬಾಳಿನಲ್ಲಿ ಕತ್ತಲು ಆವರಿಸಿದೆ. ಬಹಳ ಪ್ರೀತಿಯಿಂದ ಬೆಳೆಸಿದ್ದ ಅವರ ಮಗ ಇಯಾನ್​ ಅಲೆಕ್ಸಾಂಡರ್​ ಜ್ಯೂನಿಯರ್​ (Ian Alexander Jr) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸುದ್ದಿ ಕೇಳಿ ರೆಜೀನಾ ಕಿಂಗ್​ ಅಭಿಮಾನಿಗಳಿಗೆ ಶಾಕ್​ ಆಗಿದೆ. ‘ಇಯಾನ್​ ಅಲೆಕ್ಸಾಂಡರ್​ ಜ್ಯೂನಿಯರ್​ ನಿಧನದಿಂದಾಗಿ ನಮ್ಮ ಕುಟುಂಬಕ್ಕೆ ತೀವ್ರ ನೋವಾಗಿದೆ. ಇತರರ ಖುಷಿಗಾಗಿ ಅವರು ಕಾಳಜಿ ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ’ ಎಂದು ರೆಜೀನಾ ಕಿಂಗ್​ ಅವರು ಹೇಳಿಕೆ ಬಿಡುಗಡೆ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ದುರಂತ ಏನೆಂದರೆ, ಕೆಲವೇ ದಿನಗಳ ಹಿಂದೆ ಇಯಾನ್​ ಅಲೆಕ್ಸಾಂಡರ್​ ಜ್ಯೂನಿಯರ್​ ಅವರ ಜನ್ಮದಿನ (ಜ.19) ಆಚರಣೆ ಮಾಡಲಾಗಿತ್ತು. ಆ ಖುಷಿಯ ಕ್ಷಣಗಳು ಇನ್ನೂ ಹಸಿರಾಗಿರುವಾಗಲೇ ಅವರು ಆತ್ಮಹತ್ಯೆಯ ಹಾದಿ ಹಿಡಿದಿರುವುದು ಯಾಕೆ ಎಂಬುದು ತಿಳಿದುಬಂದಿಲ್ಲ. ಮಗನನ್ನು ಕಳೆದುಕೊಂಡಿರುವ ರೆಜೀನಾ ಕಿಂಗ್​ ಅವರಿಗೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ. ಆಸ್ಕರ್​ ಪ್ರಶಸ್ತಿ (Oscar Awards), ಗೋಲ್ಡನ್​ ಗ್ಲೋಬ್​ ಪ್ರಶಸ್ತಿ ಮುಂತಾದ ಪುರಸ್ಕಾರಗಳಿಗೆ ಪಾತ್ರರಾಗಿದ್ದ ರೆಜೀನಾ ಕಿಂಗ್ ಅವರು ಈಗ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

1980ರ ದಶಕದಿಂದಲೂ ರೆಜೀನಾ ಕಿಂಗ್​ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ನಟಿಯಾಗಿ, ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ಅವರಿಗೆ ಈಗ 51 ವರ್ಷ ವಯಸ್ಸು. ಪತಿ ಇಯಾನ್​ ಅಲೆಕ್ಸಾಂಡರ್​ಗೆ 2007ರಲ್ಲಿಯೇ ವಿಚ್ಛೇದನ ನೀಡಿದರು. ಈ ದಂಪತಿಯ ಮಗನೇ ಇಯಾನ್​ ಅಲೆಕ್ಸಾಂಡರ್​ ಜ್ಯೂನಿಯರ್​. ಅವರು ಡಿಜೆ ಆಗಿ ಫೇಮಸ್​ ಆಗಿದ್ದರು. ಅವರಿಗೆ 26 ವರ್ಷ ವಯಸ್ಸಾಗಿತ್ತು.

ಇಯಾನ್​ ಅಲೆಕ್ಸಾಂಡರ್​ ಜ್ಯೂನಿಯರ್ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ. ಆದರೆ ಅವರು ಈ ದುಡುಕಿನ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದುಕೊಂಡಿದೆ. ರೆಜೀನಾ ಕಿಂಗ್​ ಅವರು ಸ್ಟಾರ್​ ನಟಿ, ನಿರ್ದೇಶಕಿ ಆಗಿದ್ದರಿಂದ ಅನೇಕ ಸಮಾರಂಭಗಳ ರೆಡ್​ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದ್ದುಂಟು. ಆಗೆಲ್ಲ ಅವರ ಜೊತೆ ಪುತ್ರ ಇಯಾನ್​ ಅಲೆಕ್ಸಾಂಡರ್​ ಜ್ಯೂನಿಯರ್ ಕೂಡ ಕಾಣಿಸಿಕೊಳ್ಳುತ್ತಿದ್ದರು. ಮಗನ ಬಗ್ಗೆ ಅವರು ಸಾರ್ವಜನಿಕವಾಗಿ ಹಲವು ಬಾರಿ ಮಾತನಾಡಿದ್ದರು. ಪುತ್ರನ ಭವಿಷ್ಯದ ಬಗ್ಗೆ ಅವರು ಹಲವು ಕನಸುಗಳನ್ನು ಇಟ್ಟುಕೊಂಡಿದ್ದರು. ಕೆಲವೇ ವಾರಗಳ ಹಿಂದೆ ಇಯಾನ್​ ಅಲೆಕ್ಸಾಂಡರ್​ ಜ್ಯೂನಿಯರ್ ಹೊಸ ಹಾಡು ಬಿಡುಗಡೆ ಮಾಡಿದ್ದಾಗ ಅದನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುವ ಮೂಲಕ ರೆಜೀನಾ ಕಿಂಗ್ ಅವರು ಜನರ ಬೆಂಬಲ ಕೋರಿದ್ದರು.

ತಾಯಿಯ ಬಗ್ಗೆ ಇಯಾನ್​ ಅಲೆಕ್ಸಾಂಡರ್​ ಜ್ಯೂನಿಯರ್ ಅಪಾರ ಪ್ರೀತಿ ಹೊಂದಿದ್ದರು. ಆ ಕುರಿತು ಅವರು ಆಗಾಗ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದರು. ರೆಜೀನಾ ಅವರ 50ನೇ ವರ್ಷದ ಹುಟ್ಟುಹಬ್ಬದ ಸಮಯದಲ್ಲಿ ವಿಶ್​ ಮಾಡಿದ್ದ ಅವರು, ‘ನಿಮ್ಮಂಥ ತಾಯಿಯನ್ನು ಪಡೆದಿರುವುದು ನನ್ನ ಪಾಲಿಗೆ ಶ್ರೇಷ್ಠ ಉಡುಗೊರೆ. ನೀವೇ ನನ್ನ ಸೂಪರ್​ ಹೀರೋ. ಎಂದೆಂದಿಗೂ ನಿಮ್ಮನ್ನು ಪ್ರೀತಿಸುತ್ತೇನೆ’ ಎಂದು ಪೋಸ್ಟ್​ ಮಾಡಿದ್ದರು.

ತಾಯಿಯ ಬಗ್ಗೆ ಇಷ್ಟೆಲ್ಲ ಪ್ರೀತಿ ಇಟ್ಟುಕೊಂಡಿದ್ದ ಇಯಾನ್​ ಅಲೆಕ್ಸಾಂಡರ್​ ಜ್ಯೂನಿಯರ್ ಅವರು ಈಗ ಅಮ್ಮನನ್ನು ಒಂಟಿಯಾಗಿಸಿ, ಬಾರದ ಲೋಕಕ್ಕೆ ತೆರಳಿದ್ದಾರೆ. ಅವರ ಸಾವಿನ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ಆತ್ಮಹತ್ಯೆಗೆ ಕಾರಣ ಏನಿರಬಹುದು ಎಂಬ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ:

‘ಮಹಾಭಾರತ​’ ಸೀರಿಯಲ್​ ಅರ್ಜುನ ಪಾತ್ರಧಾರಿ ಶಾಹೀರ್ ಶೇಖ್​ ತಂದೆ ಕೊವಿಡ್​ನಿಂದ ನಿಧನ

ಸಲ್ಮಾನ್​ ಖಾನ್​ ಪರ ಲಾಯರ್​ ಶ್ರೀಕಾಂತ್​ ಶಿವಡೆ ಕ್ಯಾನ್ಸರ್​ನಿಂದ ನಿಧನ; ‘ತಕ್ಕ ಶಿಕ್ಷೆ ಸಿಕ್ತು’ ಎಂದ ನೆಟ್ಟಿಗರು

Follow us on

Related Stories

Most Read Stories

Click on your DTH Provider to Add TV9 Kannada