Chhello Show: ‘ಚೆಲ್ಲೋ ಶೋ’ ಎಂದರೇನು? ಆಸ್ಕರ್ಗೆ ಭಾರತದಿಂದ ಅಧಿಕೃತ ಆಯ್ಕೆಯಾದ ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ
Last Film Show | Oscar Awards: ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ‘ಚೆಲ್ಲೋ ಶೋ ಸಿನಿಮಾ’ ಪ್ರದರ್ಶನ ಕಂಡಿದೆ. ಆ ಮೂಲಕ ಹಲವರ ಗಮನ ಸೆಳೆದಿದೆ. ಈ ಚಿತ್ರಕ್ಕೆ ಪ್ಯಾನ್ ನಳಿನ್ ನಿರ್ದೇಶನ ಮಾಡಿದ್ದಾರೆ.
ಪ್ರತಿ ವರ್ಷ ಆಸ್ಕರ್ (Oscars) ಪ್ರಶಸ್ತಿ ಕಣಕ್ಕೆ ಭಾರತದಿಂದ ಒಂದು ಸಿನಿಮಾವನ್ನು ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಈ ರೀತಿ ಆಯ್ಕೆ ಆಗಬೇಕು ಎಂದರೆ ಅಂಥ ಸಿನಿಮಾ ತುಂಬಾನೆ ವಿಶೇಷವಾಗಿರಬೇಕು. ಈ ವರ್ಷ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ಅಥವಾ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಆಸ್ಕರ್ (Oscar Awards) ಸ್ಪರ್ಧೆಗೆ ಆಯ್ಕೆ ಆಗಬಹುದು ಎಂದು ಊಹಿಸಲಾಗಿತ್ತು. ಅನೇಕರು ಈ ಚಿತ್ರಗಳ ಪರವಾಗಿ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದರು. ಆದರೆ ಅಂತಿಮವಾಗಿ ಗುಜರಾತಿ ಭಾಷೆಯ ‘ಚೆಲ್ಲೋ ಶೋ’ (Chhello Show) ಸಿನಿಮಾಗೆ ಅವಕಾಶ ಸಿಕ್ಕಿದೆ. ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾದಿಂದ ಈ ಚಿತ್ರ ಆಯ್ಕೆ ಆಗಿದೆ. ಆಸ್ಕರ್ನಲ್ಲಿ ಈ ಸಿನಿಮಾ ಪ್ರಶಸ್ತಿ ಗೆಲ್ಲಬಹುದು ಎಂಬ ನಿರೀಕ್ಷೆ ಮೂಡಿದೆ.
ಪ್ಯಾನ್ ನಳಿನ್ ಅವರು ‘ಚೆಲ್ಲೋ ಶೋ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಕೊನೆಯ ಸಿನಿಮಾ ಶೋ’ ಎಂಬುದು ಈ ಶೀರ್ಷಿಕೆಯ ಅರ್ಥ. ನಿರ್ದೇಶಕರ ಬಾಲ್ಯದ ಅನುಭವಗಳನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ ಎಂಬುದು ವಿಶೇಷ. ಸಿನಿಮಾ ಬಗ್ಗೆ ಅಪಾರ ಆಸಕ್ತಿ ಹೊಂದಿರುವ 9ರ ಪ್ರಾಯದ ಬಾಲಕನ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.
ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ‘ಚೆಲ್ಲೋ ಶೋ’ ಸಿನಿಮಾ ಪ್ರದರ್ಶನ ಕಂಡಿದೆ. ಆ ಮೂಲಕ ಹಲವರ ಗಮನ ಸೆಳೆದಿದೆ. ಡಿಫರೆಂಟ್ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಪ್ಯಾನ್ ನಳಿನ್ ಅವರಿಂದ ‘ಚೆಲ್ಲೋ ಶೋ’ ಚಿತ್ರ ಮೂಡಿಬಂದಿದೆ. ಹಳ್ಳಿ ಮತ್ತು ರೈಲ್ವೇ ಜಂಕ್ಷನ್ನಲ್ಲಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಸ್ಥಳೀಯ ಬಾಲಕರೇ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ.
2020ರಲ್ಲಿ ಲಾಕ್ಡೌನ್ ಶುರುವಾಗುವುದಕ್ಕೂ ಮುನ್ನ ‘ಚೆಲ್ಲೋ ಶೋ’ ಶೂಟಿಂಗ್ ಪೂರ್ಣಗೊಂಡಿತ್ತು. ಲಾಕ್ ಡೌನ್ ಸಮಯದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡಲಾಯಿತು. ವಿದೇಶದಲ್ಲಿ ಈ ಸಿನಿಮಾವನ್ನು ವಿತರಣೆ ಮಾಡಲು ದೊಡ್ಡ ದೊಡ್ಡ ಕಂಪನಿಗಳು ಮುಂದೆ ಬಂದಿವೆ. ಜಪಾನ್ನಲ್ಲೂ ಈ ಸಿನಿಮಾ ಪ್ರದರ್ಶನ ಕಾಣಲಿದೆ. ರಾಯ್ ಕಪೂರ್ ಫಿಲ್ಮ್ಸ್, ಜುಗಾಡ್ ಮೋಷನ್ ಪಿಕ್ಚರ್ಸ್, ಮಾನ್ಸೂನ್ ಫಿಲ್ಮ್ಸ್, ಚೆಲ್ಲೋ ಶೋ ಎಲ್ಎಲ್ಪಿ ಸಂಸ್ಥೆಗಳು ಈ ಚಿತ್ರವನ್ನು ನಿರ್ಮಾಣ ಮಾಡಿವೆ.
ಅಕ್ಟೋಬರ್ 14ರಂದು ‘ಚೆಲ್ಲೋ ಶೋ’ ಸಿನಿಮಾ ಬಿಡುಗಡೆ ಆಗಲಿದೆ. 95ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಚಿತ್ರಕ್ಕೆ ಪ್ರಶಸ್ತಿ ಸಿಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:48 pm, Wed, 21 September 22