ಪತ್ನಿಗಾಗಿ ನಟನ ಕೆನ್ನೆಗೆ ಬಾರಿಸಿದ್ದ ವಿಲ್ ಸ್ಮಿತ್ಗೆ ಆಸ್ಕರ್ನಿಂದ 10 ವರ್ಷ ಬ್ಯಾನ್; ಅಕಾಡೆಮಿ ನಿರ್ಧಾರ
Will Smith banned: ವಿಲ್ ಸ್ಮಿತ್ ಅವರು ಕ್ರಿಸ್ ರಾಕ್ ಮುಖಕ್ಕೆ ಬಾರಿಸಿದ ವರ್ತನೆಯನ್ನು ಖಂಡಿಸಿ ಅವರನ್ನು 10 ವರ್ಷ ಬ್ಯಾನ್ ಮಾಡಲಾಗಿದೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ನಟ ವಿಲ್ ಸ್ಮಿತ್ (Will Smith) ಅವರಿಗೆ ಈಗ ಸಂಕಷ್ಟ ಕಾಲ. ವಿವಾದದ ಕಾರಣದಿಂದಲೇ ಅವರು ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಹಾಸ್ಯ ನಟ ಕ್ರಿಸ್ ರಾಕ್ (Chris Rock) ಅವರ ಕೆನ್ನೆಗೆ ಹೊಡಿದಿದ್ದಕ್ಕಾಗಿ ವಿಲ್ ಸ್ಮಿತ್ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಮುಂದಿನ 10 ವರ್ಷಗಳ ಕಾಲ ಆಸ್ಕರ್ ಪ್ರಶಸ್ತಿ (Oscars) ಸಮಾರಂಭದಲ್ಲಿ ಭಾಗವಹಿಸದಂತೆ ವಿಲ್ ಸ್ಮಿತ್ ಅವರನ್ನು ಬ್ಯಾನ್ ಮಾಡಲಾಗಿದೆ. ಆಸ್ಕರ್ ಪ್ರಶಸ್ತಿ ನೀಡುವ ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸ್’ ಸಂಸ್ಥೆಯು ಈ ನಿರ್ಧಾರ ತಿಳಿಸಿದೆ. ಇದರಿಂದ ವಿಲ್ ಸ್ಮಿತ್ ಅವರ ವೃತ್ತಿ ಜೀವನಕ್ಕೆ ಕಪ್ಪು ಚುಕ್ಕಿ ಬಿದ್ದಂತಾಗಿದೆ. ಶುಕ್ರವಾರ (ಏ.8) ಅಕಾಡೆಮಿಯ ಪ್ರಮುಖರು ಸಭೆ ನಡೆಸಿದರು. ವಿಲ್ ಸ್ಮಿತ್ಗೆ ಯಾವ ಶಿಕ್ಷೆ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು. ಅಂತಿಮವಾಗಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಮುಂದಿನ 10 ವರ್ಷಗಳ ಕಾಲ ವಿಲ್ ಸ್ಮಿತ್ ಅವರು ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸುವಂತಿಲ್ಲ ಎಂದು ತಿಳಿಸಲಾಗಿದೆ. ಇದು ಅವರ ಅಭಿಮಾನಿಗಳಿಗೆ ಸಖತ್ ಬೇಸರ ಮೂಡಿಸಿದೆ.
ಒಟ್ಟಾರೆಯಾಗಿ ಈ ಘಟನೆಯ ಸರಿ-ತಪ್ಪುಗಳ ಬಗ್ಗೆ ಚರ್ಚೆ ಆಗುತ್ತಿದೆ. ಮಾ.27ರಂದು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿತ್ತು. ವೇದಿಕೆ ಮೇಲೆ ಹಾಸ್ಯ ನಟ ಕ್ರಿಸ್ ರಾಕ್ ಮಾತನಾಡುತ್ತಿದ್ದರು. ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿಯನ್ನು ವಿತರಿಸಲು ಕ್ರಿಸ್ ರಾಕ್ ಅವರನ್ನು ವೇದಿಕೆಗೆ ಕರೆಯಲಾಗಿತ್ತು. ಈ ವೇಳೆ ಅವರು ಸುಮ್ಮನಿರಲಾರದೇ ವಿಲ್ ಸ್ಮಿತ್ ಅವರ ಪತ್ನಿ ಜೇಡಾ ಪಿಂಕೆಟ್ ಸ್ಮಿತ್ ಅವರ ಬೋಳು ತಲೆಯ ಬಗ್ಗೆ ಕಾಮಿಡಿ ಮಾಡಿದ್ದರು. ಅದು ವಿಲ್ ಸ್ಮಿತ್ ಅವರಿಗೆ ಸರಿ ಎನಿಸಲಿಲ್ಲ. ಕ್ರಿಸ್ ರಾಕ್ ಅವರ ಮಾತು ಕೇಳಿ ಇಡೀ ಸಭಾಂಗಣ ಜೋರಾಗಿ ನಕ್ಕಿತು. ಕೂಡಲೇ ವೇದಿಕೆ ಏರಿದ ವಿಲ್ ಸ್ಮಿತ್ ಅವರು ಕ್ರಿಸ್ ರಾಕ್ ಮುಖಕ್ಕೆ ಬಾರಿಸಿದ್ದರು. ಆ ವರ್ತನೆಯನ್ನು ಖಂಡಿಸಿ ಅವರಿನ್ನು ಈಗ 10 ವರ್ಷ ಬ್ಯಾನ್ ಮಾಡಲಾಗಿದೆ.
ವಿಲ್ ಸ್ಮಿತ್ ಕ್ಷಮೆ ಕೇಳಿದರೂ ಶಿಕ್ಷೆ ತಪ್ಪಲಿಲ್ಲ:
ಈ ಬಾರಿಯ ಆಸ್ಕರ್ ವೇದಿಕೆಯಲ್ಲಿ ವಿಲ್ ಸ್ಮಿತ್ ಅವರಿಗೆ ಸಿಹಿ ಮತ್ತು ಕಹಿ ಎರಡೂ ಅನುಭವ ಆಯಿತು. ಪತ್ನಿಯ ಬಗ್ಗೆ ಕಾಮಿಡಿ ಮಾಡಿದ ಕ್ರಿಸ್ ರಾಕ್ಗೆ ಕಪಾಳಮೋಕ್ಷ ಮಾಡಿದ ನಂತರ ವಿಲ್ ಸ್ಮಿತ್ ಅವರು ವೇದಿಕೆ ಏರಿ ‘ಅತ್ಯುತ್ತಮ ನಟ’ ಆಸ್ಕರ್ ಪ್ರಶಸ್ತಿ ಪಡೆದುಕೊಂಡರು. ‘ಕಿಂಗ್ ರಿಚರ್ಡ್’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರಿಗೆ ಈ ಪ್ರಶಸ್ತಿ ಸಿಕ್ಕಿತು. ಪ್ರಶಸ್ತಿ ಸ್ವೀಕರಿಸಲು ವೇದಿಕೆ ಏರಿದ ಅವರು ಎಲ್ಲರಲ್ಲೂ ಕ್ಷಮೆ ಕೇಳಿದರು. ಕೆನ್ನೆಗೆ ಹೊಡೆದಿದ್ದಕ್ಕೆ ಅವರು ಪಶ್ಚಾತ್ತಾಪದಿಂದ ಕಣ್ಣೀರು ಹಾಕಿದರು. ನಂತರ ಅಕಾಡೆಮಿ ಸದಸ್ಯತ್ವಕ್ಕೆ ಅವರು ರಾಜೀನಾಮೆ ನೀಡಿದರು. ಆದರೂ ಕೂಡ ವಿಲ್ ಸ್ಮಿತ್ ಅವರಿಗೆ ಶಿಕ್ಷೆ ತಪ್ಪಲಿಲ್ಲ.
ಕ್ರಿಸ್ ರಾಕ್ ಪ್ರತಿಕ್ರಿಯೆ ಏನು?
ಎಲ್ಲರ ಎದುರು ಕಪಾಳಮೋಕ್ಷ ಮಾಡಿಸಿಕೊಂಡ ಕ್ರಿಸ್ ರಾಕ್ ಅವರಿಗೆ ಅವಮಾನ ಆಗಿದೆ. ಈ ರೀತಿ ಆಗಿದ್ದಕ್ಕೆ ವಿಲ್ ಸ್ಮಿತ್ ವಿರುದ್ಧ ದೂರು ನೀಡಬಹುದು ಎಂದು ಪೊಲೀಸರು ಹೇಳಿದರೂ ಕೂಡ ಕ್ರಿಸ್ ರಾಕ್ ಅವರು ದೂರು ನೀಡಲು ನಿರಾಕರಿಸಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಈ ಬಗ್ಗೆ ಅವರು ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ:
ಆಸ್ಕರ್ ವೇದಿಕೆಯಲ್ಲಿ ನಟ ಕ್ರಿಸ್ ರಾಕ್ ಕೆನ್ನೆಗೆ ಹೊಡೆದ ವಿಲ್ ಸ್ಮಿತ್ ಬಗ್ಗೆ ತಾಯಿಯ ಪ್ರತಿಕ್ರಿಯೆ ಏನು?
ಮುತ್ತು ಕೊಟ್ಟ ಪತ್ರಕರ್ತನ ಕೆನ್ನೆಗೆ ಬಾರಿಸಿದ್ದ ವಿಲ್ ಸ್ಮಿತ್; ಆಸ್ಕರ್ ಗಲಾಟೆ ಬಳಿಕ ಮತ್ತೊಂದು ವಿಡಿಯೋ ವೈರಲ್