‘ದಿ ಕಾಶ್ಮೀರ್ ಫೈಲ್ಸ್ ಚಿತ್ರ ಆಸ್ಕರ್ಗೆ ಹೋದ್ರೆ ಭಾರತಕ್ಕೆ ಮುಜುಗರ; ಇದು ದ್ವೇಷ ಹಬ್ಬಿಸುವ ಕಸ’: ಕೇಳಿಬಂತು ಕಟು ಟೀಕೆ
Dylan Mohan Gray | Vivek Agnihotri: ಆಸ್ಕರ್ ಪ್ರಶಸ್ತಿ ಕಣಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಆಯ್ಕೆ ಆಗಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವಿಚಾರದಲ್ಲಿ ನಿರ್ದೇಶಕ ಡಿಲನ್ ಮೋಹನ್ ಗ್ರೇ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಕಡಿಮೆ ಬಜೆಟ್ನಲ್ಲಿ ತಯಾರಾಗಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾದ ಯಶಸ್ಸು ತುಂಬ ದೊಡ್ಡದು. ಬಾಕ್ಸ್ ಆಫೀಸ್ ದೃಷ್ಟಿಯಿಂದ ಮಾತ್ರವಲ್ಲದೇ ಕಂಟೆಂಟ್ ವಿಚಾರದಿಂದಲೂ ಈ ಚಿತ್ರ ಹೆಚ್ಚು ಚರ್ಚೆಗೆ ಒಳಗಾಗಿದೆ. ಇಂದಿಗೂ ಈ ಸಿನಿಮಾ ಬಗ್ಗೆ ಪರ-ವಿರೋಧ ವಾದ ನಡೆಯುತ್ತಲೇ ಇದೆ. ಕೆಲವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಹಾಡಿ ಹೊಗಳಿದರೆ, ಇನ್ನೂ ಕೆಲವರು ತೆಗಳುತ್ತಿದ್ದಾರೆ. ಈಗ ಈ ಸಿನಿಮಾ ಆಸ್ಕರ್ ಪ್ರಶಸ್ತಿ (Oscar Awards) ಕಣದಲ್ಲಿ ಸ್ಪರ್ಧಿಸಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ ಆಗುತ್ತಿದೆ. ಈ ಸಂದರ್ಭದಲ್ಲಿ ಕೆನಡಾದ ನಿರ್ದೇಶಕ ಡಿಲನ್ ಮೋಹನ್ ಗ್ರೇ (Dylan Mohan Gray) ಅವರು ಕಟು ಟೀಕೆ ಮಾಡಿದ್ದಾರೆ.
ಪ್ರತಿ ವರ್ಷ ಆಸ್ಕರ್ ಕಣಕ್ಕೆ ಭಾರತದಿಂದ ಒಂದು ಸಿನಿಮಾವನ್ನು ಆಯ್ಕೆ ಮಾಡಿ ಕಳಿಸಲಾಗುತ್ತದೆ. ‘ಆರ್ಆರ್ಆರ್’ ಸಿನಿಮಾ ಆಯ್ಕೆ ಆಗಬಹುದು ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಆಯ್ಕೆ ಆಗದಿರಲಿ ಎಂದು ಅವರು ಆಶಿಸಿದ್ದಾರೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ. ಈ ವಾದದಲ್ಲಿ ನಿರ್ದೇಶಕ ಡಿಲನ್ ಮೋಹನ್ ಗ್ರೇ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಹೇಳಿದ್ದೇನು?
‘ಹತ್ಯಾಕಾಂಡ ನಡೆದೇ ಇಲ್ಲ ಎಂದು ವಾದಿಸುವ ಬಾಲಿವುಡ್ ಮಂದಿಯಿಂದ ನಮ್ಮ ‘ದಿ ಕಾಶ್ಮೀರ್ ಫೈಲ್’ ಸಿನಿಮಾ ಆಸ್ಕರ್ಗೆ ಆಯ್ಕೆ ಆಗದಂತೆ ಲಾಬಿ ಶುರುವಾಗಿದೆ. ‘ದೋಬಾರಾ’ ಚಿತ್ರದ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ನಾಯಕತ್ವದಲ್ಲಿ ಈ ಕೆಲಸ ಆಗುತ್ತಿದೆ’ ಎಂದು ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರ ಟ್ವೀಟ್ಗೆ ಡಿಲನ್ ಮೋಹಲ್ ಗ್ರೇ ಪ್ರತಿಕ್ರಿಯೆ ನೀಡಿದ್ದಾರೆ. ‘ಈ ಚಿತ್ರವು ಕಲಾತ್ಮಕ ಅರ್ಹತೆ ಇಲ್ಲದ, ದ್ವೇಷ ಹಬ್ಬಿಸುವ ಕಸದ ರೀತಿ ಇದೆ. ಇದು ಆಸ್ಕರ್ಗೆ ಆಯ್ಕೆಯಾದರೆ ಭಾರತಕ್ಕೆ ಮುಜಗರ ಉಂಟುಮಾಡುತ್ತದೆ. ದೇಶಕ್ಕೆ ಇರುವ ಒಳ್ಳೆಯ ಹೆಸರು ಉಳಿಸಲು ಅನುರಾಗ್ ಕಶ್ಯಪ್ ಪ್ರಯತ್ನಿಸುತ್ತಿದ್ದಾರೆ’ ಎಂದು ಡಿಲನ್ ಮೋಹಲ್ ಗ್ರೇ ಟ್ವೀಟ್ ಮಾಡಿದ್ದಾರೆ. ಇದರಿಂದ ವಿವಾದ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ.
yeah, actually it’s (hatemongering, revisionist) garbage of no artistic merit and will be a further embarrassment to india if ‘selected’ by the ‘neutral’ board… @anuragkashyap72 is just trying to preserve what’s left of the country’s good name #yourewelcome #KashmirFiles pic.twitter.com/6evMJiGkNp
— Dylan Mohan Gray (@DylanMohanGray) August 17, 2022
ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯೆಯನ್ನು ಆಧರಿಸಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತಯಾರಾಗಿದೆ. ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ, ವಿಥುನ್ ಚಕ್ರವರ್ತಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ