
ಕಿರುತೆರೆ ವೀಕ್ಷಕರಿಗೆ ಸದಾ ಹೊಸ ಮಾದರಿಯ ಕಥೆಗಳನ್ನು ನೀಡುತ್ತಾ ಬಂದಿರುವ ಜೀ ಕನ್ನಡ ವಾಹಿನಿ, ಈಗ ಮತ್ತೊಂದು ಭಾವುಕ ಹಾಗೂ ಕುಟುಂಬ ಆಧಾರಿತ ಹೊಸ ಧಾರಾವಾಹಿ ‘ಗೌರಿಪುತ್ರ’ ಪ್ರಸಾರಕ್ಕೆ ಸಜ್ಜಾಗಿದೆ. ‘ರಾಮಾಚಾರಿ’ ಧಾರಾವಾಹಿಯ ಮೂಲಕ ಪ್ರತಿಯೊಬ್ಬ ಕನ್ನಡಿಗರ ಮನಗೆದ್ದು ಅಪಾರ ಜನಪ್ರಿಯತೆ ಗಳಿಸಿದ್ದ ನಟ ರಿತ್ವಿಕ್ ಕೃಪಾಕರ್ ಈ ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಧಾರಾವಾಹಿಯ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಚಿತ್ರರಂಗದ ಹಿರಿಯ ಹಾಗೂ ಜನಪ್ರಿಯ ನಟಿ ಅನು ಪ್ರಭಾಕರ್ ಅವರು ಮುಖ್ಯ ಪಾತ್ರದಲ್ಲಿ (ಗೌರಿ) ಅಭಿನಯಿಸುತ್ತಿರುವುದು. ಜೊತೆಗೆ ಹಿರಿಯ ನಟ ರಮೇಶ್ ಭಟ್, ಮಹತಿ ಭಟ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಪ್ರೋಮೋದಲ್ಲಿ ತಾಯಿಯ ಜನ್ಮದಿನದ ಅಂಗವಾಗಿ ಆಕೆಗೆ ವಿಭಿನ್ನ ಗಿಫ್ಟ್ ನೀಡುವ ಸನ್ನಿವೇಶ ಮೂಡಿಬಂದಿದೆ. ಕಾರು, ವಜ್ರದ ಹಾರಗಳಂತಹ ದುಬಾರಿ ಉಡುಗೊರೆಗಳಿಗಿಂತ ತಾಯಿಗೆ ಆಕೆಯ ‘ತವರು ಮನೆ’ ಅತ್ಯಂತ ಪ್ರಿಯವಾದುದು ಎಂಬುದನ್ನು ಅರಿತ ಮಗ (ರಿತ್ವಿಕ್), ತಾಯಿಯನ್ನು ಆಕೆಯ ಹಳೆಯ ತವರು ಮನೆಗೆ ಕರೆದುಕೊಂಡು ಹೋಗುತ್ತಾನೆ.
ಆದರೆ ಗತಕಾಲದಲ್ಲಿ ಮದುವೆಯಾದ ಕಾರಣಕ್ಕೆ ಕುಟುಂಬಸ್ಥರಿಂದ ಹೊರಹಾಕಲ್ಪಟ್ಟು, ಕಹಿ ನೆನಪುಗಳನ್ನು ಹೊಂದಿರುವ ಆ ತವರಿಗೆ ಕಾಲಿಡಲು ತಾಯಿ ಹಿಂಜರಿಯುತ್ತಾಳೆ.ಆದರೆ, ಮಗ ನಾನಿದ್ದೇನೆ ಎನ್ನುತ್ತಾನೆ. ತಾಯಿಯ ಕಳೆದುಹೋದ ಗೌರವ ಹಾಗೂ ಸಂತೋಷವನ್ನು ಮರಳಿ ತಂದುಕೊಡಲು ಮಗ ನಿಲ್ಲುವ ಭಾವನಾತ್ಮಕ ಕಥಾಹಂದರವನ್ನು ತೋರಿಸಲಾಗಿದೆ.
ಇದನ್ನೂ ಓದಿ: ಪ್ರಿಯಾಂಕಾ ಉಪೇಂದ್ರ ಚಿತ್ರಕ್ಕೆ ಅನು ಪ್ರಭಾಕರ್ ಶುಭ ಹಾರೈಕೆ
ಅನು ಪ್ರಭಾಕರ್ ಅವರ ಅಭಿನಯ ಹಾಗೂ ರಿತ್ವಿಕ್ ಅವರ ಮಾಸ್ ಮತ್ತು ಕ್ಲಾಸ್ ಲುಕ್ ಧಾರಾವಾಹಿಯ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ. ‘ಗೌರಿಪುತ್ರ’ ಶೀಘ್ರದಲ್ಲೇ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.