
‘ಹನುಮಾನ್ ಅಂಶ್’ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಅಚ್ಚರಿಗಳನ್ನು ಸೃಷ್ಟಿಸುತ್ತಿದೆ. ತೀರ ಸಣ್ಣ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗಿರುವ ಈ ಸಿನಿಮಾ ಭಾರಿ ದೊಡ್ಡ ಗಳಿಕೆ ಮಾಡುತ್ತಿದೆ. ಉತ್ತರ ಭಾರತದಲ್ಲಿ ಬಹಳ ಜನಪ್ರಿಯ ಆಗಿರುವ ನೀಲ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಇದೇ ಕಾರಣಕ್ಕೆ ಹಿಂದಿ ಭಾಷಿಕ ಪ್ರದೇಶದಲ್ಲಿ ಸಿನಿಮಾ ದೊಡ್ಡ ಗಳಿಕೆ ಮಾಡುತ್ತಿದೆ. ಆದರೆ ಇದೀಗ ಈ ಸಿನಿಮಾವನ್ನು ದಕ್ಷಿಣಕ್ಕೂ ತರುವ ಪ್ರಯತ್ನ ಮಾಡಲಾಗುತ್ತಿದ್ದು, ಸಿನಿಮಾ ಶೀಘ್ರವೇ ತೆಲುಗು ಭಾಷೆಗೆ ಡಬ್ ಆಗಿ ರಿಲೀಸ್ ಆಗಲಿದೆ.
‘ಹನುಮಾನ್ ಅಂಶ್’ ಸಿನಿಮಾವನ್ನು ತೆಲುಗಿಗೆ ಡಬ್ ಮಾಡಲಾಗಿದ್ದು ಶೀಘ್ರವೇ ಸಿನಿಮಾದ ತೆಲುಗು ಆವೃತ್ತಿಯನ್ನು ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ. ತೆಲುಗು ಚಿತ್ರರಂಗದ ಜನಪ್ರಿಯ ಸಿನಿಮಾ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ‘ಫಾರ್ಚೂನ್ ಫೋರ್ ಸಿನಿಮಾಸ್’ ಜಂಟಿ ಸಹಯೋಗದೊಂದಿಗೆ ಈ ಸಿನಿಮಾದ ತೆಲುಗು ಆವೃತ್ತಿಯನ್ನು ರಿಲೀಸ್ ಮಾಡಲಾಗುತ್ತಿದೆ. ಸೆಪ್ಟೆಂಬರ್ 18ರಂದು ‘ಹನುಮಾನ್ ಅಂಶ್’ ಸಿನಿಮಾದ ತೆಲುಗು ಆವೃತ್ತಿ ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಆಗಲಿದೆ.
ತ್ರಿವಿಕ್ರಮ್ ಶ್ರೀನಿವಾಸ್ ಜನಪ್ರಿಯ ಸಿನಿಮಾ ನಿರ್ದೇಶಕರಾಗಿದ್ದು, ಅಧ್ಯಾತ್ಮ, ಪೌರಾಣಿಕ ಮತ್ತು ತತ್ವಶಾಸ್ತ್ರದಲ್ಲಿ ಬಹಳ ಆಸಕ್ತಿ ಉಳ್ಳ ವ್ಯಕ್ತಿ ಆಗಿದ್ದಾರೆ. ಅವರಿಗೆ ‘ಹನುಮಾನ್ ಅಂಶ್’ ಸಿನಿಮಾ ಹಾಗೂ ಸಿನಿಮಾನಲ್ಲಿರುವ ಅಧ್ಯಾತ್ಮ ಚಿಂತನೆಗಳು ಬಹುವಾಗಿ ಹಿಡಿಸಿದ್ದು, ಅದೇ ಕಾರಣಕ್ಕೆ ಈ ಸಿನಿಮಾವನ್ನು ತೆಲುಗಿಗೆ ಡಬ್ ಮಾಡಿಸಿ ರಿಲೀಸ್ ಮಾಡಲು ಮುಂದಾಗಿದ್ದಾರೆ. ಅಂದಹಾಗೆ ಖುದ್ದು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಿರುವ ‘ಆದರ್ಶ ಕುಟುಂಬ 47’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ಟೀಸರ್ ಇಂದಷ್ಟೆ ಬಿಡುಗಡೆ ಆಗಿದ್ದು, ಹಾಸ್ಯಭರಿತವಾಗಿದೆ.
ಇದನ್ನೂ ಓದಿ:ತೆಲುಗಿನಲ್ಲಿ ಬರ್ತಿದೆ ಬಾಲಿವುಡ್ ಬ್ಲಾಕ್‌ಬಸ್ಟರ್ ‘ಹನುಮಾನ್ ಅಂಶ್; ಕನ್ನಡದಲ್ಲಿ ಯಾವಾಗ?
ನೀಮ್ ಕರೋಲಿ ಬಾಬಾ ಅವರ ಅಸಾಮಾನ್ಯ ಜೀವನ ಪಯಣವನ್ನು ಆಧರಿಸಿದ ಈ ಸಿನಿಮಾವನ್ನು ಡಾ ವಿಶಾಲ್ ಚತುರ್ವೇದಿ ನಿರ್ದೇಶಿಸಿದ್ದಾರೆ. ಈ ಚಲನಚಿತ್ರವನ್ನು ರಾಗಿಣಿ ಎಸ್, ನಮ್ರತಾ ಜಿ. ಸಿಂಗ್, ಅನುಪ್ರಿಯಾ ಎ. ನಾಗರ್ ಮತ್ತು ನಿರ್ದೇಶಕರೇ ನಿರ್ಮಾಣ ಮಾಡಿದ್ದಾರೆ. ಸಿನಿಮಾನಲ್ಲಿ ಶೋಭಿತ್ ಶ್ರೀವಾಸ್ತವ, ಚಂದನ್ ಆನಂದ್, ಪೂರ್ಣಿಮಾ ತಿವಾರಿ ಮತ್ತು ವಿಹಾನ್ ಶೆಡ್ಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಈಗಾಗಲೇ 200 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ