ತಮಿಳುನಾಡು ಇತಿಹಾಸದಲ್ಲಿ ಸಿಎಂ ಆದ ಚಿತ್ರರಂಗದ ತಾರೆಯರಿವರು

ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ಮತ್ತು ರಾಜಕಾರಣದ ನಂಟು ಬಿಡಿಸಲಾಗದು. ಮತ ಎಣಿಕೆ ಆರಂಭವಾಗಿರುವ ಈ ಸಂದರ್ಭದಲ್ಲಿ, ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಪ್ರಭಾವದ ಕುರಿತು ಚರ್ಚೆ ಜೋರಾಗಿದೆ. ಎಂಜಿಆರ್, ಜಯಲಲಿತಾ, ಕರುಣಾನಿಧಿ ಅವರಂತೆ ವಿಜಯ್ ಕೂಡ ಯಶಸ್ವಿ ರಾಜಕಾರಣಿಯಾಗಬಲ್ಲರೇ? TVK ಈ ಚುನಾವಣೆಯಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದರತ್ತ ಎಲ್ಲರ ಚಿತ್ತವಿದೆ.

ತಮಿಳುನಾಡು ಇತಿಹಾಸದಲ್ಲಿ ಸಿಎಂ ಆದ ಚಿತ್ರರಂಗದ ತಾರೆಯರಿವರು
ತಮಿಳುನಾಡು ಸಿಎಂಗಳು
Edited By:

Updated on: May 04, 2026 | 8:28 AM

ತಮಿಳುನಾಡು ಮತ್ತು ಸಿನಿಮಾ ರಾಜಕಾರಣಕ್ಕೆ ಬಿಡಿಸಲಾಗದ ನಂಟಿದೆ. ಬೆಳ್ಳಿಪರದೆಯ ಮೇಲೆ ಮಿಂಚಿದ ತಾರೆಗಳು ಜನನಾಯಕರಾಗಿ ಹೊರಹೊಮ್ಮುವ ಇಲ್ಲಿನ ಸಂಪ್ರದಾಯ ಈಗ ಹೊಸ ಹಂತಕ್ಕೆ ಬಂದು ನಿಂತಿದೆ. ರಾಜ್ಯದಲ್ಲಿ ಚುನಾವಣಾ ಕಣ ಸಿದ್ಧವಾಗಿ, ಮತ ಎಣಿಕೆಯ ಕ್ಷಣಗಣನೆ ಆರಂಭವಾಗಿರುವ ಈ ಸಂದರ್ಭದಲ್ಲಿ, ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಪ್ರಭಾವ ಎಷ್ಟಿರಬಹುದು ಎಂಬ ಚರ್ಚೆ ಜೋರಾಗಿದೆ.

ಈ ಹಿಂದೆ ಎಂ.ಜಿ. ರಾಮಚಂದ್ರನ್ (MGR) ಅವರು ತಮ್ಮ ಸಿನೆಮಾ ವರ್ಚಸ್ಸಿನಿಂದ ಎಐಎಡಿಎಂಕೆ ಕಟ್ಟಿ ಸತತ ಮೂರು ಬಾರಿ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ್ದರು. ಅವರ ಹಾದಿಯಲ್ಲೇ ಬಂದ ಜಯಲಲಿತಾ ಅವರು ‘ಅಮ್ಮ’ನಾಗಿ ರಾಜ್ಯವಾಳಿದರು. ಚಿತ್ರಕಥೆಗಾರರಾಗಿದ್ದ ಎಂ. ಕರುಣಾನಿಧಿ ಅವರು ದಶಕಗಳ ಕಾಲ ಡಿಎಂಕೆ ಪಕ್ಷದ ಭದ್ರಕೋಟೆಯನ್ನು ಕಾಯ್ದುಕೊಂಡಿದ್ದರು. ಇದೀಗ ಮತ ಎಣಿಕೆಯ ಈ ಸಂದರ್ಭದಲ್ಲಿ ವಿಜಯ್ ಅವರು ಈ ದಿಗ್ಗಜರ ಸಾಲಿಗೆ ಸೇರಬಲ್ಲರೇ ಎಂಬುದು ಸದ್ಯದ ಕುತೂಹಲ.

ಬದಲಾದ ರಾಜಕೀಯ ಚಿತ್ರಣ:

ಈ ಹಿಂದೆ ‘ಕ್ಯಾಪ್ಟನ್’ ವಿಜಯಕಾಂತ್ ಅವರು ಡಿಎಂಡಿಕೆ ಮೂಲಕ ಅಲ್ಪಾವಧಿಯಲ್ಲಿ ವಿರೋಧ ಪಕ್ಷದ ಸ್ಥಾನಕ್ಕೇರಿ ಅಚ್ಚರಿ ಮೂಡಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಕಮಲ್ ಹಾಸನ್ ಅವರ ‘ಮಕ್ಕಳ್ ನೀಧಿ ಮೈಯಂ’ ಆಡಳಿತ ಸುಧಾರಣೆಯ ಮಾತನಾಡುತ್ತಾ ಮತದಾರರ ಗಮನ ಸೆಳೆದಿತ್ತು. ಆದರೆ, ದಳಪತಿ ವಿಜಯ್ ಅವರ ಎಂಟ್ರಿ ಇವೆಲ್ಲಕ್ಕಿಂತ ಭಿನ್ನವಾಗಿದೆ. ಅಪಾರ ಯುವ ಸಮೂಹವನ್ನು ಹೊಂದಿರುವ ವಿಜಯ್, ಚುನಾವಣಾ ಕಣದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದಾರೆ.

ಇದನ್ನೂ ಓದಿ: ಮತ ಎಣಿಕೆ ದಿನ ತಿರುಪತಿಯಲ್ಲಿ ತ್ರಿಷಾ; ವಿಜಯ್​​ಗೋಸ್ಕರ ವಿಶೇಷ ಪೂಜೆ?

ಮತ ಎಣಿಕೆಯತ್ತ ಎಲ್ಲರ ಚಿತ್ತ:

ಚುನಾವಣೋತ್ತರ ಸಮೀಕ್ಷೆಗಳು ಮತ್ತು ರಾಜಕೀಯ ವಿಶ್ಲೇಷಕರು ವಿಜಯ್ ಅವರ ಪ್ರಭಾವದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಒಂದು ಕಾಲದಲ್ಲಿ ಸಿನಿಮಾ ತಾರೆಗಳೇ ಆಳುತ್ತಿದ್ದ ತಮಿಳುನಾಡಿನಲ್ಲಿ, ಈಗಿನ ಮತದಾರರು ನಟ ವಿಜಯ್ ಅವರಿಗೆ ‘ಪವರ್’ ನೀಡುತ್ತಾರಾ? ಅಥವಾ ಹಳೆಯ ದ್ರಾವಿಡ ಪಕ್ಷಗಳೇ ಅಧಿಪತ್ಯ ಮುಂದುವರಿಸುತ್ತವೆಯೇ? ಎಂಬ ಪ್ರಶ್ನೆಗೆ ಮತ ಎಣಿಕೆಯ ಅಂತ್ಯದಲ್ಲಿ ಉತ್ತರ ಸಿಗಲಿದೆ. ವಿಜಯ್ ಅವರ ಈ ಹೊಸ ಇನ್ನಿಂಗ್ಸ್ ತಮಿಳು ರಾಜಕೀಯದ ಭವಿಷ್ಯವನ್ನು ನಿರ್ಧರಿಸಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us