Deepavali: ದೀಪಾವಳಿ ಸಂಭ್ರಮದ ಹಿಂದೆ ಪಟಾಕಿ ಉತ್ಪಾದಕರ ಕೊಡುಗೆ

| Updated By: Rakesh Nayak Manchi

Updated on: Oct 24, 2022 | 7:30 AM

ಪ್ರತಿ ವರ್ಷ ಇಡೀ ದೇಶವೇ ದೀಪಾವಳಿ ಹಬ್ಬಕ್ಕಾಗಿ ಕಾಯುತ್ತದೆ. ಆ ಹಬ್ಬ ಇಂದು ಬಂದೇ ಬಿಟ್ಟಿತು. ಇಂದಿನಿಂದ ದೇಶವಾಸಿಗಳು ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದು, ನಾಡಿನೆಲ್ಲೆಡೆ ಸಂಭ್ರಮ ಸಡಗರದ ವಾತಾವರಣ ಮೂಡಿದೆ.

Deepavali: ದೀಪಾವಳಿ ಸಂಭ್ರಮದ ಹಿಂದೆ ಪಟಾಕಿ ಉತ್ಪಾದಕರ ಕೊಡುಗೆ
ಸಾಂದರ್ಭಿಕ ಚಿತ್ರ
Follow us on

ಬೆಳಕಿನ ಹಬ್ಬ ಎಂದೇ ಕರೆಯಲ್ಪಡುವ ದೀಪಾವಳಿ (Deepavali) ಮನೆ ಮತ್ತು ಮನಸ್ಸಿನ ಕತ್ತಲೆಯನ್ನು ಹೋಗಲಾಡಿಸಿ ಬೆಳಕು ತರುವ ಹಬ್ಬವಾಗಿದೆ. ಪ್ರತಿ ವರ್ಷ ಹೊಸತನ ತುಂಬುವ ಹಬ್ಬ ದೀಪಾವಳಿ ಆರಂಭಕ್ಕೆ ಒಂದು ವಾರ ಇರುವಾಗಲೇ ಮನೆಯಲ್ಲಿ ಸಂಭ್ರಮ ಮನೆ ಮಾಡುತ್ತದೆ. ದೀಪಾವಳಿ ಹಬ್ಬ ಇಂದಿಗೂ ಹಳೆತನದ ಬೇರಿನ ಜೊತೆಗೆ ಹೊಸತನದ ಸೊಗಡನ್ನು ಸಾಗಿಸಿಕೊಂಡು ಬರುತ್ತಿದೆ ಎಂಬುದೇ ಒಂದು ಖುಷಿಯ ವಿಚಾರ. ದೀಪಾವಳಿ ಎಂದಾಗ ಮೊದಲಿಗೆ ನೆನಪಾಗುವುದೇ ಪಟಾಕಿ ಸದ್ದು. ಊರಿನ ಒಂದಷ್ಟು ಮನೆಗಳಲ್ಲಿ ಪಟಾಕಿ ಸದ್ದು ಪ್ರತಿ ವರ್ಷ ದೀಪಾವಳಿ ದಿನ ಕಿವಿಗೆ ಬೀಳುತ್ತದೆ. ಹಬ್ಬದ ಮೆರುಗು ಹೆಚ್ಚುವುದೇ ಅಕ್ಕ ಪಕ್ಕದ ಮನೆಯಿಂದ ಕೇಳುವಂತ ಪಟಾಕಿಯ ಶಬ್ದ. ಈ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆಸಿಕೊಂಡು ಬರಲಾಗಿದೆ.

ಪಟಾಕಿ ಇಲ್ಲದ ದೀಪಾವಳಿಯನ್ನು ಇಂದಿಗೂ ಊಹಿಸಲು ಸಾಧ್ಯವಿಲ್ಲ. ದೀಪಗಳ ಬೆಳಕಿನಿಂದ ಸುಂದರಗೊಳ್ಳುವ ಈ ಹಬ್ಬದಂದು ಸಣ್ಣ ಮಕ್ಕಳಿನಿಂದ ಹಿರಿಯರವರೆಗೆ ಎಲ್ಲರೂ ಸಂಜೆ ಯಾವಾಗ ಆಗುತ್ತದೆಯೋ, ಪಟಾಕಿ ಯಾವಾಗ ಸಿಡಿಸುತ್ತೆವೋ ಎಂದು ಕಾಯುತ್ತಿರುತ್ತಾರೆ.
ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬಕ್ಕೆ ವಿವಿಧ ರೀತಿಯಾದ ಪಟಾಕಿಗಳನ್ನು ತಯಾರು ಮಾಡುವ ಉತ್ಪಾದಕರ ಜೀವನ ಹೇಗೆ ಇರುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಏಕೆಂದರೆ ನಾವು ಪಟಕಿಯನ್ನು ಸುಲಭವಾಗಿ ಮರುಕಟ್ಟೆಯಿಂದ ತೆಗೆದುಕೊಳ್ಳಬಹುದು. ಅದರೆ ಪಟಾಕಿ ಮಾಡುವ ಉತ್ಪಾದಕರ ಜೀವನವೇ ಒಂದು ಕಷ್ಟದ ವಿಷಯ. ಬೆಂಕಿಯ ಮೇಲೆ ನಿಂತಾಗಿದೆ ಎಂಬ ಮಾತು ಪಟಾಕಿ ತಯಾರು ಮಾಡುವ ಉತ್ಪಾದಕರಿಗೆ ಹೋಲುತ್ತದೆ. ಅತ್ಯಂತ ಅಪಾಯವಾದ ಕಾರ್ಯವನ್ನು ಮಾಡುವ ಇವರು ಪ್ರತಿ ದಿನವು ತನ್ನ ಜೀವವನ್ನು ಕೈಯಲ್ಲಿ ಇಟ್ಟುಕೊಂಡು ತನ್ನ ಜೀವನ ಉಪಯೋಗಕ್ಕಾಗಿ ಕೆಲಸ ಮಾಡುತ್ತಾರೆ. ಜೀವ ಕೈಯಲ್ಲಿ ಹಿಡಿದುಕೊಂಡು ಪಟಾಕಿಯನ್ನು ತಯಾರಿಸಿ ಎಲ್ಲಾರಿಗೂ ವಿತರಿಸಿ ಸಂತೋಷವನ್ನು ಹಂಚುವವರೆ ಪಟಾಕಿ ಉತ್ಪಾದಕರು.

ಪಟಾಕಿ ಉತ್ಪಾದನೆ ಮಾಡುವುದು ಕೂಡ ಸುಲಭದ ಕೆಲಸ ಅಲ್ಲ ಅದಕ್ಕೆ ಅಷ್ಟೇ ಜಾಗರೂಕತೆ ಕೂಡ ವಹಿಸಬೇಕು. ಪಟಾಕಿ ಉತ್ಪಾದನೆ ಮಾಡುವುದು ಒಂದು ಕಲೆ. ಅನೇಕ ಸಂದರ್ಭದಲ್ಲಿ ಪಟಾಕಿ ತಯಾರಿಸುವಾಗ ಅಪಾಯ ಎದುರಾದ ಉದಾಹರಣೆಗಳನ್ನು ನೀವು ನೋಡಿರಬಹುದು. ಅದರೆ ಅವರಿಗೆ ಜೀವನ ನಡೆಯುವುದೇ ಅ ಕೆಲಸದ ಮೂಲಕ. ಎಷ್ಟು ಕಷ್ಟವಾದರು ಅತ್ಯಂತ ನಿಷ್ಟೆಯಿಂದ ಪಟಾಕಿ ತಯಾರಿಸುತ್ತಾರೆ. ಅದಾಗ್ಯೂ ಪರಿಸರದ ಹಿತದೃಷ್ಟಿಯಿಂದ ಪರಿಸರ ಸ್ನೇಹಿ ಪಟಾಕಿಗಳನ್ನು ಬಳಿಕೆ ಮಾಡುವುದರೊಂದಿಗೆ ಮಿತವಾಗಿ ಸಿಡಿಮದ್ದು ಸಿಡಿಸಿ ಸಂಭ್ರಮಿಸಬೇಕಾಗಿದೆ. ಇದು ಪರಿಸರದ ಹಾಗೂ ಅಕ್ಕಪಕ್ಕದವರ ಆರೋಗ್ಯದ ಕಾಳಜಿ ದೃಷ್ಟಿಯಿಂದ ಉತ್ತಮ.

ಪುಟಾಣಿಗಳಿಗೆ, ಚಿನ್ನರಿಗೆ ಸುರು ಸುರು ಬತ್ತಿ, ನೆಲಚಕ್ರ, ದುರ್ಸು ಹೀಗೆ ಶಬ್ದ ಇಲ್ಲದ ಪಟಾಕಿಗಳೆಂದರೆ ಇಷ್ಟ. ಯುವಕರಾದರೆ ಗರ್ನಲ್, ಮಾಲೆ ಪಟಾಕಿ ಅಂತ ಅದನ್ನೇ ಸಿಡಿಸುತ್ತಾರೆ. ಹಿರಿಯರಾದರೆ ಅವುಗಳನ್ನು ನೋಡಿ ಸಂಭ್ರಮಿಸುತ್ತಾರೆ. ಹೀಗೆ ದೀಪಾವಳಿಯನ್ನು ಮೆರಗನ್ನು ಹೆಚ್ಚಿಸುವ ಪಟಾಕಿಯಿಂದ ಸಂಭ್ರಮವು ಇದೆ. ಎಚ್ಚರ ತಪ್ಪಿದರೆ ಅಪಾಯವು ಕಟ್ಟಿಟ್ಟ ಬುತ್ತಿ. ಹೀಗಾಗಿ ಅತ್ಯಂತ ಜಾಗರೂಕತೆಯಿಂದ ಪಟಾಕಿ ಹಚ್ಚಿ ದೀಪಾವಳಿಯನ್ನು ಸಂಭ್ರಮಿಸಿ.

ಲೇಖನ: ದಿಶಾ ಗೌಡ, ಸುಳ್ಯ

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ