ದೀಪಾವಳಿ (Deepavali) ಬೆಳಕಿನ ಹಬ್ಬ. ಈ ಬೆಳಕಿನ ಹಬ್ಬದ ವಿಶೇಷತೆ ಹಣತೆಗಳು. ಆದರೆ ಹಣತೆಗಳನ್ನು ಖರೀದಿಸುವವರೆ ಇಲ್ಲದಂತಾಗಿದೆ. ತರಹೇವಾರಿ ವಿದ್ಯುತ್ ದೀಪಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದರಿಂದ ಒಂದಕ್ಕೊಂದು ದೀಪಗಳು ಗ್ರಾಹಕರನ್ನು ಆಕರ್ಷಣೆ ಮಾಡುತ್ತಿವೆ. ಆದರೆ ಮಣ್ಣಿನಿಂದ ಮಾಡಿದ ಕುಂಬಾರರ ಹಣತೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿದ್ದು ಕುಂಬಾರರಿಗೆ ಹೊಡೆತಕೊಟ್ಟಿದೆ. ಚೀನಿ ಹಣತೆಗಳು, ಹೊಳಪಿಗೆ ಕಲಾ ಚಿತ್ತಾರಕ್ಕೆ ಜನರು ಮಾರುಹೋಗಿದ್ದೇ ಕುಂಬಾರರ ಸಂಕಷ್ಟಕ್ಕೆ ಕಾರಣವಾಗಿದೆ.
ಕಾರ್ತಿಕ ಮಾಸ ಆರಂಭದ ನಂತರ ಪ್ರತಿ ಮನೆಗಳಲ್ಲೂ ಬೆಳಗುವ ದೀಪಗಳ ಸಾಲು ದೀಪವಾಳಿ ವೇಳೆಗೆ ವಿಶೇಷ ಮೆರುಗು ಪಡೆಯುತ್ತವೆ. ಹತ್ತಿಯ ಬತ್ತಿ ಹೊಸೆದು ಮಣ್ಣಿನ ಹಣತೆಯಲ್ಲಿ ಎಳ್ಳಿನ ಎಣ್ಣೆ ಸುರಿದು ಮನೆಯ ಮುಂದೆ ಸಾಲಾಗಿ ಜೋಡಿಸಿ ಹಣತೆ ಉರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಇಂತಹ ಹಣತೆಗಳೂ ಇಂದು ಆಧುನಿಕ ಸ್ಪರ್ಶ ಪಡೆದಿದ್ದು, ಮಣ್ಣಿನ ದೀಪಗಳ ಸ್ಥಾನದಲ್ಲಿ ಪಿಂಗಾಣಿ ಹಣತೆಗಳು ಲಗ್ಗೆಯಿಟ್ಟಿವೆ. ಮಣ್ಣಿನಿಂದ ತಯಾರಿಸುವ ಸಾಂಪ್ರದಾಯಿಕ ಹಣತೆಗಳಿಗಿಂತ ಹೆಚ್ಚು ಆಕರ್ಷಕವಾಗಿರುವ ಆ ಹಣತೆಗಳು ಎಲ್ಲೆಡೆ ಕಾಣುತ್ತಿವೆ. ಬಹುವಿನ್ಯಾಸ ಹೊಂದಿರುವ ಇಂತಹ ಹಣತೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ಚೀನಿ ಮಣ್ಣಿನ ಹೊಳಪಿನ ಎದುರು ಮಣ್ಣಿನ ಹಣತೆಗಳು ಅಕ್ಷರಶಃ ಕಳೆಗುಂದಿವೆ. ಆಧುನಿಕತೆಗೆ ಒಗ್ಗಿಕೊಂಡ ಜನರು ಚೀನಿ ಹಣತೆ ಖರೀದಿಸಿ ಮನೆಯ ದೀಪದ ಅಲಂಕಾರ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಬೀದರ್ ಮಾರುಕಟ್ಟೆಯಲ್ಲಿ ಚೀನಾದ ಪಿಂಗಾಣಿ ಜೋಡಿ ದೀಪದ ಹಣತೆ ಒಂದಕ್ಕೆ 10 ರಿಂದ 15 ಯಂತೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದರೇ ನಾವು ಮಾಡಿದ ದೀಪವನ್ನ ಯಾರು ಕೊಳ್ಳುತ್ತಿಲ್ಲ. ನಗರದ ಹೊರವಲಯಗಳಿಂದ ದುಬಾರಿ ಬೆಲೆ ತೆತ್ತು ಜೇಡಿ ಮಣ್ಣು ತಂದು, ಹದ ಮಾಡಿ, ಕುಶಲ ಕರ್ಮಿಗಳ ನೆರವಿನಿಂದ ವಿವಿಧ ವಿನ್ಯಾಸದ ದೀಪ ತಯಾರಿಸುತ್ತೇವೆ. 15ರಿಂದ 20ಗೆ ಒಂದು ಡಜನ್ ಬೆಲೆ ನಿಗದಿ ಮಾಡಿದರೂ, ಗ್ರಾಹಕರು ಖರೀದಿಸುತ್ತಿಲ್ಲ. ಇದರಿಂದ ಸಾಕಷ್ಟು ನಷ್ಟ ಅನುಭವಿಸುತ್ತಿದ್ದೇವೆ ಇದಕ್ಕೆ ಸರಕಾರವೇ ಏನಾದರು ಮಾಡಬೇಕು, ಕುಂಬಾರರನ್ನು ಉಳಿಸಬೇಕೆಂದು ಕಂಬಾರರು ವಿನಂತಿಸುತ್ತಿದ್ದಾರೆ.
ದಶಕದ ಹಿಂದೆ ಲಕ್ಷ ಲಕ್ಷ ಹಣತೆಗಳನ್ನು ತಮ್ಮ ಮನೆ ಮುಂದೆ ಮಾರಾಟ ಮಾಡುತ್ತಿದ್ದ ಕುಂಬಾರ ಕುಟುಂಬಗಳು. ಐದಾರು ವರ್ಷಗಳಿಂದ ಸಾವಿರ ಲೆಕ್ಕದಲ್ಲಿ ಹಣತೆಗಳನ್ನು ಮಾರಾಟ ಮಾಡಿ ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಹಣತೆ ತಯಾರಿಸಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರು ಈಗ ಬೇರೆ ವೃತ್ತಿಯತ್ತ ಮುಖ ಮಾಡಿದ್ದಾರೆ. ದಶಕದ ಹಿಂದಿನವರೆಗೂ ಹಣತೆ ಮಾಡುವ ಕುಂಬಾರರ ಕುಟುಂಬಗಳಿಗೆ ದೀಪಾವಳಿ ಬಂತೆಂದರೆ ಅದೊಂದು ಅಕ್ಷರಶಃ ಅವರ ಬದುಕಿನ ಬೆಳಕಿನ ಹಬ್ಬವೇ ಆಗಿತ್ತು. ದೀಪಾವಳಿಗೆ ಎರಡು ತಿಂಗಳು ಮುಂಚೆಯೇ ಲಾರಿಗಟ್ಟಲೆ ಜೇಡಿ ಮಣ್ಣನ್ನು ತಂದು ಹದ ಮಾಡಿ ಮನೆಯೊಳಗೆ, ಅಂಗಳ, ಖಾಲಿ ಜಾಗೆ ಇದ್ದಲ್ಲೆಲ್ಲ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹಣತೆಗಳನ್ನು ಮಾಡಿ ಆರಲು ಇಡುತ್ತಿದ್ದರು. ಬಳಿಕ ಅದನ್ನು ಚೆನ್ನಾಗಿ ಸುಟ್ಟು ಮಾರುಕಟ್ಟೆಗೆ ತರುತ್ತಿದ್ದರು. ಗ್ರಾಹಕರಂತೂ ಮುಗಿಬಿದ್ದು ಮಣ್ಣಿನ ಹಣತೆಗಳನ್ನು ಒಬ್ಬೊಬ್ಬರು 30-40 ಹಣತೆಗಳನ್ನು ಒಯ್ಯುತ್ತಿದ್ದರು. ಈಗ ಅದೆಲ್ಲವೂ ಇತಿಹಾಸವಾಗಿದೆ.
ಬೆರಳೆಣಿಕೆ ಸಂಖ್ಯೆಯಲ್ಲಿ ಮಣ್ಣಿನ ಹಣತೆ ಒಯ್ಯುವರ ಸಂಖ್ಯೆಯೂ ವಿರಳವಾಗುತ್ತಿದೆ. ಹೀಗಾಗಿ ಕುಂಬಾರರ ಬಾಳಿಗೆ ದೀಪಾವಳಿ ಬೆಳಕು ನೀಡುವ ಹಬ್ಬವಾಗಿ ಉಳಿದಿಲ್ಲ ಎನ್ನುತ್ತಾರೆ ಇಲ್ಲಿನ ಜನರು. ಚೀನಿ ಮಣ್ಣಿನ ಹಣತೆಗಳು, ಹೊಳಪಿನ ಮೈಮಾಟವುಳ್ಳ, ವೈವಿಧ್ಯಮಯ ಕಲಾ ಚಿತ್ತಾರ ಹೊಂದಿರುವ ಪಿಂಗಾಣಿ ಹಣತೆಗಳಿಗೆ ಬಹುತೇಕ ಜನರು ಮಾರುಹೋಗಿದ್ದಾರೆ. ಕುಂಬಾರರ ಕೈಯಲ್ಲರಳಿದ ಮಣ್ಣಿನ ಸಾಂಪ್ರದಾಯಿಕ ಹಣತೆಗಳು ವಿವಿಧ ಗಾತ್ರಗಳಲ್ಲಿ ಸಿದ್ಧವಾಗಿ ಮಾರುಕಟ್ಟೆಗೆ ಬಂದಿವೆಯಾದರೂ ಗ್ರಾಹಕರ ಅವುಗಳನ್ನು ಕೊಂಡುಕೊಳ್ಳಲು ಹಿಂದೆಟು ಹಾಕುತ್ತಿದ್ದಾರೆ. ನಮ್ಮ ಕುಂಬಾರರು ಮಾಡಿದ ಹಣತೆಯನ್ನ ಕೊಂಡು ಅವರಿಗೆ ಪ್ರೋತ್ಸಾಹ ನೀಡಿ ಎಂದು ಇಲ್ಲಿನ ಜನರು ಗ್ರಾಹಕರಿಗೆ ವಿನಂತಿಸುತ್ತಿದ್ದಾರೆ. ಆದರೆ ಕುಂಬಾರರು ಮಾತ್ರ ಹಣತೆಯನ್ನ ಮಾಡಿಕೊಂಡು ಮಾರುಕಟ್ಟೆಗೆ ತಂದರು ಕೆಳೋರು ಇಲ್ಲದಂತಾ ಸ್ಥಿತಿ ನಿರ್ಮಾಣವಾಗಿದೆ ಎಂದು ಕುಬಾರರು ತಮ್ಮ ಅಳಳನ್ನ ತೋಡಿಕೊಳ್ಳುತ್ತಿದ್ದಾರೆ.
ಆಧುನಿಕತೆಯ ಭರಾಟೆಗೆ ಸಿಲುಕುತ್ತಿರುವ ಕುಂಬಾರರ ಬದುಕು ಬೀದಿಗೆ ಬೀದ್ದದೆ. ಹಬ್ಬ ಹರಿದಿನಗಳಲ್ಲಿ ಕುಂಬಾರರ ಮಾಡಿದ ಮಣ್ಣಿನ ವಸ್ತುಗಳನ್ನು ಖರೀದಿಸಬೇಕಾಗದ ಜನರು ಅಂಲಕಾರಕ್ಕೆ ಮರಳಾಗುತ್ತಿರುವುದು ಕುಂಬಾರರಿಗೆ ದಿಕ್ಕು ತೋಚದತಾಗಿದ್ದು ಕುಂಬಾರಿಕೆ ನಂಬಿಕೊಂಡವರು ಬೀದಿಗೆ ಬಿಳುವ ಸ್ಥಿತಿ ಎದುರಾಗಿದೆ. ಏನೇ ಇರಲಿ ನೂರಾರು ವರ್ಷಗಳಿಂದ ಕುಂಬಾರಿಕೆಯಲ್ಲಿಯೇ ಜೀವನ ಸಾಗಿಸುತ್ತಿರುವ ಕುಂಬಾರರಿಗೆ ಅವರು ತಯಾರಿಸುವ ವಸ್ತುಗಳನ್ನ ಖರೀಧಿಸಿ ಅವರಿಗೆ ಪ್ರೋತ್ಸಾಹ ಮಾಡಿ ಅನ್ನುವುದೇ ನಮ್ಮ ಆಸೆಯವಾಗಿದೆ.
ವರದಿ-ಸುರೇಶ್ ನಾಯಕ್ ಟಿವಿ9 ಬೀದರ್