Dhanteras 2022: ದೀಪಾವಳಿ ಸಂದರ್ಭದಲ್ಲಿ ಚಿನ್ನದ ಮೇಲಿನ ಹೂಡಿಕೆಗೆ ಐದು ಆಯ್ಕೆಗಳು

| Updated By: Ganapathi Sharma

Updated on: Oct 22, 2022 | 3:02 PM

ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಚಿನ್ನದ ಮೇಲಿನ ಹೂಡಿಕೆ ಮಾಡಲು ನೀವು ಉತ್ಸುಕರಾಗಿದ್ದರೆ ಕೆಲವು ಆಯ್ಕೆಗಳ ಕುರಿತಾದ ವಿವರವನ್ನು ಇಲ್ಲಿ ನೀಡಲಾಗಿದೆ.

Dhanteras 2022: ದೀಪಾವಳಿ ಸಂದರ್ಭದಲ್ಲಿ ಚಿನ್ನದ ಮೇಲಿನ ಹೂಡಿಕೆಗೆ ಐದು ಆಯ್ಕೆಗಳು
ಸಾಂದರ್ಭಿಕ ಚಿತ್ರ
Follow us on

ಚಿನ್ನ (gold) ಖರೀದಿ ಮತ್ತು ಹೂಡಿಕೆಗೆ ದೀಪಾವಳಿಯ (Diwali) ಧನ್​ತೇರಸ್​ (Dhanteras 2022) ಅಥವಾ ಧನತ್ರಯೋದಶಿ ಉತ್ತಮ ದಿನವೆಂದು ಭಾವಿಸಲಾಗಿದೆ. ಈ ಮೊದಲು ಚಿನ್ನ ಖರೀದಿಸುವುದಾದರೆ ಚಿನ್ನದ ರೂಪದಲ್ಲಿಯೇ ಖರೀದಿಸಬೇಕಾಗಿತ್ತು. ಆದರೆ ಈಗ ಹಲವು ರೂಪಗಳಲ್ಲಿ ಖರೀದಿಸಲು ಅವಕಾಶಗಳಿವೆ. ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಚಿನ್ನದ ಮೇಲಿನ ಹೂಡಿಕೆ ಮಾಡಲು ನೀವು ಉತ್ಸುಕರಾಗಿದ್ದರೆ ಕೆಲವು ಆಯ್ಕೆಗಳ ಕುರಿತಾದ ವಿವರವನ್ನು ಇಲ್ಲಿ ನೀಡಲಾಗಿದೆ.

ಚಿನ್ನಾಭರಣ, ಕಾಯಿನ್​ಗಳು

ಚಿನ್ನದ ಕಾಯಿನ್​ಗಳು ಮತ್ತು ಆಭರಣಗಳ ಮೇಲೆ ಮಾಡುವುದು ಸಾಮಾನ್ಯ ಹೂಡಿಕೆ ಪ್ರಕ್ರಿಯೆಯಾಗಿದೆ. ಹಬ್ಬದ ಅವಧಿಯಲ್ಲಿ ಅನೇಕರು ಈ ಹೂಡಿಕೆ ಮಾಡುತ್ತಾರೆ. ಆದರೆ, ಚಿನ್ನಾಭರಣ ಅಥವಾ ಕಾಯಿನ್ ರೂಪದಲ್ಲಿ ಖರೀದಿಸುವುದಾದರೆ ಚಿನ್ನದ ಪರಿಶುದ್ಧತೆ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಈ ವಿಚಾರದಲ್ಲಿ ಮಾಡುವ ಸಣ್ಣ ತಪ್ಪು ಕೂಡ ಲಕ್ಷಾಂತರ ರೂಪಾಯಿ ನಷ್ಟಕ್ಕೆ ಕಾರಣವಾಗಬಹುದು. ಈ ಧನ್​ತೇರಸ್​ನಲ್ಲಿ 22 ಕ್ಯಾರೆಟ್ ಚಿನ್ನಾಭರಣವನ್ನು ಖರೀದಿಸಬಹುದು. ಅದೇ ರೀತಿ 24 ಕ್ಯಾರೆಟ್ ಚಿನ್ನದ ಕಾಯಿನ್​ಗಳನ್ನೂ ಖರೀದಿಸಬಹುದು. ಚಿನ್ನದ ರೂಪದಲ್ಲೇ ಖರೀದಿಸುವಾಗ ಅದರ ಮೇಲೆ ಶೇಕಡಾ 15ರಷ್ಟು ಕಸ್ಟಮ್ಸ್ ಸುಂಕ, ಶೇಕಡಾ 3ರಷ್ಟು ಜಿಎಸ್‌ಟಿ ಮತ್ತು ಶೇಕಡಾ 5ರಷ್ಟು ಮೇಕಿಂಗ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂಬುದು ಗಮನದಲ್ಲಿರಲಿ.

ಇದನ್ನೂ ಓದಿ
SBI FD Rates: ಎಸ್​ಬಿಐಯಿಂದ ದೀಪಾವಳಿ ಕೊಡುಗೆ, ಎಫ್​ಡಿ ಬಡ್ಡಿ ದರ ಹೆಚ್ಚಳ
Petrol Price on October 22: ದೀಪಾವಳಿ ಹಬ್ಬದ ವೇಳೆ ಏರಿಕೆಯಾಗುತ್ತಾ ಪೆಟ್ರೋಲ್ ಬೆಲೆ?; ಇಂದಿನ ಡೀಸೆಲ್ ದರ ಹೀಗಿದೆ
Gold Price Today: ಬೆಳ್ಳಿ ದರ ಸ್ಥಿರ, ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ನೋಡಿ
EPFO Clarification: ವೇತನ ರಹಿತ ರಜೆಯಲ್ಲಿದ್ದಾಗ ಮೃತಪಟ್ಟರೂ ಡೆತ್ ಬೆನಿಫಿಟ್​ ಪಡೆಯಬಹುದು; ಇಪಿಎಫ್​ಒ

ಡಿಜಿಟಲ್ ಚಿನ್ನ

ಈಗ ಚಿನ್ನವನ್ನು ಡಿಜಿಟಲ್ ರೂಪದಲ್ಲಿ, ಅದೂ ಕೇವಲ 1 ರೂ.ಗೆ ಖರೀದಿ ಮಾಡುವ ಆಯ್ಕೆಯೂ ಇದೆ. ಹೂಡಿಕೆದಾರರು ಫೋನ್​ಪೇ, ಗೂಗಲ್​ ಪೇಗಳಂಥ ಯುಪಿಐ ವೇದಿಕೆಗಳ ಮೂಲಕವೂ ಡಿಜಿಟಲ್ ಚಿನ್ನವನ್ನು ಖರೀದಿ ಮಾಡಬಹುದು. ಈ ಮಾದರಿಯಲ್ಲಿ ಖರೀದಿ ಮಾಡುವಾಗ ಚಿನ್ನದ ಮೌಲ್ಯಕ್ಕೆ ಸಮನಾದ ಮೊತ್ತವನ್ನು ಹೂಡಿಕೆದಾರರ ವಾಲೆಟ್​ಗೆ ವರ್ಗಾಯಿಸಲಾಗುತ್ತದೆ. ಇದು ಚಿನ್ನದ ರೂಪದಲ್ಲಿ ಖರೀದಿ ಮಾಡುವುದಕ್ಕಿಂತ ತುಸು ಅಗ್ಗವಾಗಿರಲಿದೆ. ಇಲ್ಲಿ ಬೇರೊಂದು ವ್ಯವಸ್ಥೆಯ ಮೂಲಕ ಖರೀದಿ ಮಾಡಬೇಕಾದ ಸವಾಲು ಹೂಡಿಕೆದಾರರ ಮುಂದಿರುತ್ತದೆ ಎಂದು ‘ಲೈವ್ ಹಿಂದೂಸ್ತಾನ್’ ತಾಣ ವರದಿ ಮಾಡಿದೆ.

ಇದನ್ನೂ ಓದಿ: ದೀಪಾವಳಿಗೆ ಡಿಜಿಟಲ್ ಚಿನ್ನ! ಗೂಗಲ್ ಪೇ, ಪೇಟಿಎಂ ಮೂಲಕ ಖರೀದಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಚಿನ್ನದ ಇಟಿಎಫ್

ನೀವು ಷೇರುಪೇಟೆ ಹೂಡಿಕೆದಾರರಾಗಿದ್ದು ಈ ದೀಪಾವಳಿಗೆ ಚಿನ್ನ ಖರೀದಿಸುವ ಯೋಚನೆ ಮಾಡಿದ್ದರೆ ಚಿನ್ನದ ಇಟಿಎಫ್ ಉತ್ತಮ ಆಯ್ಕೆಯಾಗಿದೆ. ಇಟಿಎಫ್ ಅಂದರೆ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್ ಆಗಿದೆ. ಷೇರುಮಾರುಕಟ್ಟೆ ತೆರೆದಿದ್ದಾಗ ಯಾರೂ ಕೂಡ ಚಿನ್ನದ ಇಟಿಎಫ್​ ಖರೀದಿ ಮಾಡಬಹುದು. ಇಲ್ಲಿ ಚಿನ್ನದ ಪರಿಶುದ್ಧತೆ ಶೇಕಡಾ 99.5 ಅಥವಾ ಅದಕ್ಕಿಂತ ಹೆಚ್ಚಿರುತ್ತದೆ. ಒಂದು ಇಟಿಎಫ್​ ಎಂದರೆ ಒಂದು ಗ್ರಾಂ ಚಿನ್ನವಾಗಿದೆ. ಈ ವಿಧಾನದಲ್ಲಿ ಹೂಡಿಕೆದಾರರು ಜಿಎಸ್​ಟಿ, ಮೇಕಿಂಗ್ ಚಾರ್ಜ್ ಹಾಗೂ ಕಸ್ಟಮ್ಸ್ ಸುಂಕ ನೀಡಬೇಕಾಗಿಲ್ಲ. ಆದರೆ, ಚಿನ್ನದ ಇಟಿಎಫ್ ಖರೀದಿಸಬೇಕಾದರೆ ಡಿಮ್ಯಾಟ್ ಖಾತೆಯನ್ನು ಹೊಂದಿರಲೇಬೇಕು.

ಚಿನ್ನದ ಫಂಡ್​

ಚಿನ್ನದ ಫಂಡ್​ ಅಥವಾ ಗೋಲ್ಡ್ ಫಂಡ್​ಗಳು ಮ್ಯೂಚುವಲ್ ಫಂಡ್ ವಿಧಾನದಲ್ಲಿದ್ದು, ಇದನ್ನು ಖರೀದಿಸಲು ಡಿಮ್ಯಾಟ್ ಖಾತೆಯ ಅಗತ್ಯವಿರುವುದಿಲ್ಲ. ಷೇರುಮಾರುಕಟ್ಟೆಗೆ ಸಂಬಂಧಿಸಿದ ತಾಣದಲ್ಲಿ ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಮಾಡಬೇಕೆಂದಿದ್ದರೆ ಚಿನ್ನದ ಫಂಡ್​ಗಳನ್ನು ಖರೀದಿಸಬಹುದು. ಇದಕ್ಕೂ ಕಸ್ಟಮ್ಸ್ ಸುಂಕ, ಮೇಕಿಂಗ್ ಚಾರ್ಜ್ ಹಾಗೂ ಜಿಎಸ್​ಟಿ ಪಾವತಿ ಮಾಡುವ ಅಗತ್ಯ ಇರುವುದಿಲ್ಲ. ಚಿನ್ನದ ಫಂಡ್​ನಲ್ಲಿ ಹೂಡಿಕೆ ಮಾಡುವುದೆಂದರೆ ಬಹುತೇಕ ಇಟಿಎಫ್​ನಲ್ಲಿ ಹೂಡಿಕೆ ಮಾಡಿದಂತೆಯೇ.

ಸವರಿನ್ ಗೋಲ್ಡ್ ಬಾಂಡ್ಸ್

ಸವರಿನ್ ಗೋಲ್ಡ್ ಬಾಂಡ್​ಗಳ ರೂಪದಲ್ಲಿ ಸರ್ಕಾರದಿಂದಲೂ ಚಿನ್ನವನ್ನು ಖರೀದಿಸಬಹುದು. ಇಲ್ಲಿ ಹೂಡಿಕೆದಾರನಿಗೆ ಸರ್ಕಾರದಿಂದ ಸುರಕ್ಷತೆಯ ಖಾತರಿ ದೊರೆಯುತ್ತದೆ. ಸರಳವಾಗಿ ಹೇಳುವುದಾದರೆ, ಗ್ರಾಂಗಳ ಲೆಕ್ಕದಲ್ಲಿ ಖಾತರಿ ನೀಡಿ ಸರ್ಕಾರದಿಂದ ಪಡೆಯಬಹುದಾದ ಡಿಜಿಟಲ್ ಚಿನ್ನವಿದು. ಸರ್ಕಾರವು ಹೂಡಿಕೆದಾರನಿಗೆ ಪ್ರತಿ ವರ್ಷ ಶೇಕಡಾ 2.50ರ ಬಡ್ಡಿ ನೀಡುತ್ತದೆ. ಮೆಚ್ಯೂರಿಟಿಯ ಸಂದರ್ಭದಲ್ಲಿ ಸರ್ಕಾರವು ಚಿನ್ನದ ನಿಗದಿತ ದರ ಮತ್ತು ಬಡ್ಡಿಯ ಮೊತ್ತವನ್ನು ಪಾವತಿ ಮಾಡುತ್ತದೆ. ಈ ಮಾದರಿಯ ಹೂಡಿಕೆಯಲ್ಲಿ ಹೂಡಿಕೆದಾರರು ಮೇಕಿಂಗ್ ಚಾರ್ಜ್, ಜಿಎಸ್​ಟಿ ಹಾಗೂ ಕಸ್ಟಮ್ಸ್ ಡ್ಯೂಟಿ ಪಾವತಿಸುವ ಅಗತ್ಯ ಇರುವುದಿಲ್ಲ ಎಂದು ವರದಿ ಉಲ್ಲೇಖಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Sat, 22 October 22