
ಬೆಳಿಗ್ಗೆ ಸೈಕ್ಲಿಂಗ್ ಮಾಡುವುದರಿಂದ ಸಿಗುವ ಪ್ರಯೋಜನ ಯಾವುದೇ ಜಿಮ್ ಗಳಿಗೆ ಹೋದರೂ ಸಿಗುವುದಿಲ್ಲ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಸೈಕ್ಲಿಂಗ್ (Cycling) ಕೇವಲ ವ್ಯಾಯಾಮವಲ್ಲ ಅದೊಂದು ಚಿಕಿತ್ಸೆ ಎಂದು ವೈದ್ಯರು ಹೇಳುತ್ತಾರೆ. ಸೈಕಲ್ ಸವಾರಿ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂಬುದು ಸುಳ್ಳಲ್ಲ. ಈ ಒಂದು ಅಭ್ಯಾಸದಿಂದ ದೇಹದಲ್ಲಿನ ಸ್ನಾಯುಗಳು ಬಲಗೊಳ್ಳುತ್ತವೆ, ಅಡ್ರಿನಾಲಿನ್ ಮಟ್ಟಗಳು ಸುಧಾರಿಸುತ್ತವೆ ಅಷ್ಟೇ ಅಲ್ಲ, ಇದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಹಾಗಾದರೆ, ಪ್ರತಿದಿನ 30 ನಿಮಿಷಗಳ ಕಾಲ ಸೈಕ್ಲಿಂಗ್ (30 Minute Daily Cycling) ಮಾಡುವುದು ದೇಹಕ್ಕೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಪ್ರತಿದಿನ 30 ನಿಮಿಷ ಸೈಕ್ಲಿಂಗ್ ಮಾಡುವುದರಿಂದ ವಾರಕ್ಕೆ 1500 -2000 ಕ್ಯಾಲೊರಿ ಬರ್ನ್ ಆಗುತ್ತದೆ. ಅಷ್ಟೇ ಅಲ್ಲ, ಕಾಲಿನ ಸ್ನಾಯುಗಳು ಬಲಗೊಳ್ಳುತ್ತವೆ, ಜಾಗಿಂಗ್‌ಗೆ ಹೋಲಿಸಿದರೆ ಮೊಣಕಾಲಿನ ಒತ್ತಡ 70% ಕಡಿಮೆ ಇರುತ್ತದೆ, ಹೃದಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ (LDL) ಕಡಿಮೆಯಾಗುತ್ತದೆ. ಹಾರ್ವರ್ಡ್ ಸಂಶೋಧನೆಯ ಪ್ರಕಾರ, ಇದು ಮಧುಮೇಹದ ಅಪಾಯವನ್ನು 40% ವರೆಗೆ ಕಡಿಮೆ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ, ಇದೊಂದು ಉತ್ತಮ ಅಭ್ಯಾಸವಾಗಿದೆ.
ಇದನ್ನೂ ಓದಿ: ಊಟ ಮಾಡಿ ಒಂದು ಸಣ್ಣ ವಾಕ್ ಹೋಗುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಸ್ಟೋರಿ ನಿಮಗಾಗಿ
ನಿಮಗೆ ಗೊತ್ತಾ? ಸೈಕ್ಲಿಂಗ್ ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು. ಏಕೆಂದರೆ ಸೈಕ್ಲಿಂಗ್ ಮಾಡುವಾಗ ಸಂತೋಷದ ಹಾರ್ಮೋನುಗಳಾದ ಎಂಡಾರ್ಫಿನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತವೆ. ಒತ್ತಡ ಮತ್ತು ಆತಂಕವು 50% ರಷ್ಟು ಕಡಿಮೆಯಾಗುತ್ತದೆ. ಅದರಲ್ಲಿಯೂ ಹೊರಾಂಗಣದಲ್ಲಿ ಸೈಕ್ಲಿಂಗ್ ಮಾಡುವುದರಿಂದ ಸಾಕಷ್ಟು ವಿಟಮಿನ್ ಡಿ ಕೂಡ ಸಿಗುತ್ತದೆ. ಇದರಿಂದ ಮೂಳೆಗಳು ಬಲಗೊಳ್ಳುತ್ತವೆ, ಮನಸ್ಥಿತಿ ಸುಧಾರಿಸುತ್ತದೆ. ನಿದ್ರೆಯೂ ಚೆನ್ನಾಗಿ ಬರುತ್ತದೆ. ಅಷ್ಟೇ ಅಲ್ಲ, ಮೆದುಳು ಕೂಡ ಚುರುಕಾಗಿ ಕೆಲಸ ಮಾಡುತ್ತದೆ. ಡ್ಯಾನಿಶ್ ಅಧ್ಯಯನದ ಪ್ರಕಾರ, ಪ್ರತಿದಿನ ಸೈಕ್ಲಿಂಗ್ ಮಾಡುವವರು ಖಿನ್ನತೆಯಿಂದ ಬಳಲುವ ಸಾಧ್ಯತೆ 20% ನಷ್ಟು ಕಡಿಮೆ ಎಂಬುದು ಸಾಬೀತು ಪಡಿಸಿದೆ. ಹಾಗಾಗಿ ಸೈಕ್ಲಿಂಗ್‌ನಂತಹ ಲಾಭದಾಯಕ ವ್ಯಾಯಾಮ ಇನ್ನೊಂದಿಲ್ಲ. ಹಾಗಾದರೆ ನೀವು ಕೂಡ ನಾಳೆಯಿಂದಲೇ ಸೈಕ್ಲಿಂಗ್ ಪ್ರಾರಂಭಿಸಿ!, ಆರೋಗ್ಯವಾಗಿರಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ