ಸಾಮಾನ್ಯವಾಗಿ ಮೊಟ್ಟೆಗಳನ್ನು ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಇದು ಪೌಷ್ಠಿಕಾಂಶದ ಶಕ್ತಿ ಕೇಂದ್ರವಾಗಿದ್ದು, ಪ್ರೋಟೀನ್ ಮತ್ತು ಅಗತ್ಯ ಜೀವಸತ್ವಗಳಿಂದ ಸಮೃದ್ಧವಾಗಿದೆ. ನೀವು ಸೇವನೆ ಮಾಡುವ ಆರೋಗ್ಯಕರ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸುವುದು ಬಹಳ ಉತ್ತಮ ಎಂದು ಹೇಳುತ್ತಾರೆ. ಆದರೆ ಅನೇಕ ಜನರು ಬೇಯಿಸಿದ ಮೊಟ್ಟೆಗಳು ಮತ್ತು ಆಮ್ಲೆಟ್ಗಳ ನಡುವೆ ಯಾವುದು ಒಳ್ಳೆಯದು ಅಥವಾ ಆರೋಗ್ಯಕರ ಆಯ್ಕೆಗೆ ಯಾವುದು ಉತ್ತಮ ಎಂದು ಯೋಚಿಸುತ್ತಾರೆ. ಈ ಎರಡೂ ರೀತಿಯ ಆಹಾರಗಳನ್ನು ಹೆಚ್ಚಿನ ಜನರು ಉಪಾಹಾರಗಳಲ್ಲಿ ಸೇವನೆ ಮಾಡುತ್ತಾರೆ. ಇವೆರಡು ಆಯ್ಕೆಗಳು ರುಚಿಕರ ಮತ್ತು ಅನುಕೂಲಕರವಾಗಿದ್ದರೂ, ಅವುಗಳಲ್ಲಿರುವ ಪೌಷ್ಠಿಕಾಂಶದ ಅಂಶ, ಕ್ಯಾಲೊರಿ ಮತ್ತು ಆರೋಗ್ಯ ಪ್ರಯೋಜನಗಳ ವಿಷಯದಲ್ಲಿ ಅವು ಭಿನ್ನವಾಗಿವೆ. ಹಾಗಾದರೆ ಇವುಗಳಲ್ಲಿ ಯಾವುದು ಉತ್ತಮ? ಯಾವುದರ ಸೇವನೆ ಒಳ್ಳೆಯದು ತಿಳಿದುಕೊಳ್ಳಿ.
ಮೊಟ್ಟೆಗಳನ್ನು ಬೇಯಿಸಿ ತಿನ್ನುವುದು ಆರೋಗ್ಯಕರ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಹೆಚ್ಚುವರಿ ಪದಾರ್ಥಗಳನ್ನು ಸೇರಿಸದೆ ಅವುಗಳಲ್ಲಿರುವ ಹೆಚ್ಚಿನ ಪೋಷಕಾಂಶಗಳನ್ನು ಪಡೆದುಕೊಳ್ಳಲು ಈ ವಿಧಾನ ಸಹಕಾರಿಯಾಗಿದೆ. ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ (ಯುಎಸ್ಡಿಎ) ಪ್ರಕಾರ, ಬೇಯಿಸಿದ ಮೊಟ್ಟೆಯಲ್ಲಿ ಸುಮಾರು 6 ಗ್ರಾಂ ನಷ್ಟು ಉತ್ತಮ ಗುಣಮಟ್ಟದ ಪ್ರೋಟೀನ್ ಇರುತ್ತದೆ, ಇದು ಸ್ನಾಯುಗಳ ಬೆಳವಣಿಗೆ ಮತ್ತು ಅದನ್ನು ಗಟ್ಟಿಗೊಳಿಸಲು ಅತ್ಯುತ್ತಮ ಆಯ್ಕೆಯಾಗಿದೆ. ಅದಲ್ಲದೆ ಬೇಯಿಸಿದ ಮೊಟ್ಟೆಗಳು ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಸತುವಿನಂತಹ ಖನಿಜಗಳ ಜೊತೆಗೆ ಬಿ 12, ಎ ಮತ್ತು ಡಿ ನಂತಹ ಅಗತ್ಯ ಜೀವಸತ್ವಗಳನ್ನು ಒದಗಿಸುತ್ತವೆ. ಇದು ದೇಹಕ್ಕೆ ತುಂಬಾ ಒಳ್ಳೆಯದು. ಜೊತೆಗೆ ಅನಗತ್ಯವಾಗಿ ಕಾಡುವ ಕಡುಬಯಕೆಗಳನ್ನು ಕಡಿಮೆ ಮಾಡಿ ತೂಕ ಹೆಚ್ಚಳವಾಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ, ಬೇಯಿಸಿದ ಮೊಟ್ಟೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ, ಇದು ವಯಸ್ಸಿಗೆ ಸಂಬಂಧಿಸಿ ಬರುವಂತಹ ಕಣ್ಣಿನ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ನಲ್ಲಿ ಪ್ರಕಟವಾದ ಅಧ್ಯಯನವು ಒಟ್ಟಾರೆ ಆರೋಗ್ಯಕ್ಕೆ ಇದು ಎಷ್ಟು ಅವಶ್ಯಕ ಎಂಬುದನ್ನು ಕೂಡ ತಿಳಿಸಿದೆ.
ಸಾಮಾನ್ಯವಾಗಿ ಆಮ್ಲೆಟ್ ಗಳಿಗೆ ತರಕಾರಿ, ಚೀಸ್ ಮತ್ತು ಮಾಂಸ ಹೀಗೆ ವಿವಿಧ ರೀತಿಯ ಪದಾರ್ಥಗಳನ್ನು ಸೇರಿಸುವುದರಿಂದ ಮೊಟ್ಟೆಗಳನ್ನು ಬೇರೆ ಬೇರೆ ರೀತಿಯ ರುಚಿಯಲ್ಲಿ ಆನಂದಿಸಲು ಸುಲಭವಾಗುತ್ತದೆ. ಇದು ಪೌಷ್ಠಿಕಾಂಶದ ಮೌಲ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಉದಾಹರಣೆಗೆ, ತರಕಾರಿಗಳನ್ನು ಸೇರಿಸುವುದರಿಂದ ಫೈಬರ್ ಅಂಶ ಹೆಚ್ಚಾಗುತ್ತದೆ ಮತ್ತು ಹೆಚ್ಚುವರಿ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ. ಆದರೆ ಆಮ್ಲೆಟ್ ನ ಪೌಷ್ಠಿಕಾಂಶದ ಮೌಲ್ಯ, ನೀವು ಅದಕ್ಕೆ ಬಳಸಿರುವ ಪದಾರ್ಥಗಳನ್ನು ಅವಲಂಬಿಸಿ ಬದಲಾಗಬಹುದು. ಕೇವಲ ಮೊಟ್ಟೆಗಳಿಂದ ತಯಾರಿಸಿದ ಆಮ್ಲೆಟ್ ಬೇಯಿಸಿದ ಮೊಟ್ಟೆಗಳಿಗೆ ಹೋಲುವ ಪ್ರೋಟೀನ್ ಅಂಶವನ್ನು ಹೊಂದಿದ್ದರೂ ಕೂಡ ಚೀಸ್ ಅಥವಾ ಅಡುಗೆ ಎಣ್ಣೆಗಳನ್ನು ಸೇರಿಸುವುದರಿಂದ ಕ್ಯಾಲೊರಿಗಳು ಮತ್ತು ಅನಾರೋಗ್ಯಕರ ಕೊಬ್ಬುಗಳು ಹೆಚ್ಚಾಗಬಹುದು.
ಆಮ್ಲೆಟ್ ಗಳು ಮೊಟ್ಟೆಗಳಿಂದ ಆರೋಗ್ಯಕರ ಕೊಬ್ಬನ್ನು ಸಹ ಹೊಂದಿರುತ್ತವೆ, ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಈ ಕೊಬ್ಬುಗಳಲ್ಲಿ ಮೊನೊಸ್ಯಾಚುರೇಟೆಡ್ ಮತ್ತು ಪಾಲಿಅನ್ ಸ್ಯಾಚುರೇಟೆಡ್ ಕೊಬ್ಬುಗಳು ಸೇರಿವೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಅತಿಯಾದ ಕ್ಯಾಲೊರಿ ಸೇವನೆಯನ್ನು ತಪ್ಪಿಸಲು ಅಡುಗೆಯ ಸಮಯದಲ್ಲಿ ಎಷ್ಟು ಚೀಸ್ ಅಥವಾ ಅದಕ್ಕೆ ಯಾವ ಪ್ರಮಾಣದಲ್ಲಿ ಎಣ್ಣೆಯನ್ನು ಸೇರಿಸುತ್ತಿರಿ ಎಂಬುದರ ಬಗ್ಗೆ ಜಾಗರೂಕರಾಗಿರುವುದು ಮುಖ್ಯ.
ಇದನ್ನೂ ಓದಿ: ಆಹಾರದಲ್ಲಿ ಮಶ್ರೂಮ್ ಸೇರಿಸಬೇಕು ಎನ್ನುವುದಕ್ಕೆ ಇಲ್ಲಿದೆ ಕಾರಣ
ಬೇಯಿಸಿದ ಮೊಟ್ಟೆಗಳು, ಕ್ಯಾಲೊರಿ ಅಥವಾ ಅನಾರೋಗ್ಯಕರ ಕೊಬ್ಬು, ಹೆಚ್ಚುವರಿ ಪದಾರ್ಥಗಳಿಲ್ಲದೆ ಸುಲಭ ಮತ್ತು ಪೋಷಕಾಂಶ ಸಾಂದ್ರವಾಗಿರುವ ಆಹಾರವಾಗಿದೆ. ಅದರಲ್ಲಿಯೂ ಕಡಿಮೆ ಸಮಯದಲ್ಲಿ ಇದು ತಯಾರಾಗುತ್ತದೆ. ನಿಮಗೆ ತಕ್ಷಣಕ್ಕೆ ಪ್ರೋಟೀನ್ ಸಮೃದ್ಧ ಊಟ ಮಾಡಬೇಕು ಎನಿಸಿದರೆ ಆಗ ಈ ಆಯ್ಕೆ ಹೆಚ್ಚು ಸೂಕ್ತವಾಗಿರುತ್ತದೆ. ಮತ್ತೊಂದೆಡೆ ಆಮ್ಲೆಟ್ಗಳು ತರಕಾರಿಗಳಂತಹ ಹೆಚ್ಚುವರಿ ಸೇರ್ಪಡೆಗಳನ್ನು ಮಾಡಿ ಅದರ ಜೊತೆಗೆ ಹೆಚ್ಚಿನ ಪ್ರಮಾಣದ ಚೀಸ್ ಅಥವಾ ಹಾನಿಕಾರಕ ತೈಲಗಳನ್ನು ಉಪಯೋಗಿಸಿ ತಯಾರಿಸುವುದರಿಂದ ಪೌಷ್ಠಿಕಾಂಶದ ಮೌಲ್ಯದಲ್ಲಿ ಏರುಪೇರಾಗಬಹುದು. ಆದರೆ ಬೇಯಿಸಿದ ಮೊಟ್ಟೆಗಳು ಮತ್ತು ಆಮ್ಲೆಟ್ ಗಳು ತಮ್ಮದೇ ಆದ ವೈಯಕ್ತಿಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಬೇಯಿಸಿದ ಮೊಟ್ಟೆಗಳು ಕಡಿಮೆ ಕ್ಯಾಲೊರಿ ಇರುವ ತುಂಬಾ ಸರಳವಾದ ಆಹಾರ. ಆಮ್ಲೆಟ್ಗಳು ನೀವು ಅದಕ್ಕೆ ಸೇರಿಸುವ ಪದಾರ್ಥಗಳ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಇದೆಲ್ಲದರ ಹೊರತಾಗಿ ನಿಮ್ಮ ವೈಯಕ್ತಿಕ ಆದ್ಯತೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ