ಇತ್ತೀಚೆಗೆ ಯುವಜನರಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿದೆ. ಸ್ತನ ಕ್ಯಾನ್ಸರ್ಗೆ ಅನೇಕ ಅಂಶಗಳು ಕಾರಣವಾಗುತ್ತವೆ. ಆದರೆ, ಈ ಬಗ್ಗೆ ಹೆಚ್ಚಿನ ಜಾಗೃತಿ ಇಲ್ಲದ ಕಾರಣದಿಂದ ಹೆಚ್ಚಿನ ಯುವತಿಯರಿಗೆ ಸ್ತನ ಕ್ಯಾನ್ಸರ್ ಆರಂಭದಲ್ಲಿ ಗೊತ್ತಾಗುವುದೇ ಇಲ್ಲ. ಆರಂಭಿಕ ಹಂತದಲ್ಲಿ ಪತ್ತೆಯಾದರೆ ಸ್ತನ ಕ್ಯಾನ್ಸರ್ಗೆ ಸರಿಯಾದ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿಸ್ಟ್ ಕನ್ಸಲ್ಟೆಂಟ್ ಡಾ. ವಿನು ಸಾರಥಿ ಈ ಬಗ್ಗೆ ಹಿಂದುಸ್ತಾನ್ ಟೈಮ್ಸ್ಗೆ ಸಂದರ್ಶನ ನೀಡಿದ್ದಾರೆ. ಆ ಬಗ್ಗೆ ಕೆಲವು ಆಯ್ದ ಸಂಗತಿಗಳು ಇಲ್ಲಿವೆ.
ಈ ಹಿಂದೆ ಸ್ತನ ಕ್ಯಾನ್ಸರ್ ಅನ್ನು ವಯಸ್ಸಾದವರಿಗೆ ಬರುವ ಕಾಯಿಲೆ ಎಂದು ಪರಿಗಣಿಸಲಾಗುತ್ತಿತ್ತು. 50 ಅಥವಾ 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಾವು 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರನ್ನು ಹೆಚ್ಚು ನಿಯಮಿತವಾಗಿ ಪರೀಕ್ಷಿಸುತ್ತಿದ್ದೇವೆ. ಆದ್ದರಿಂದ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿವೆ. ಪ್ರಸ್ತುತ ಜೀವನಶೈಲಿಯ ಬದಲಾವಣೆ, ಜಡ ಜೀವನಶೈಲಿ, ಹೆಚ್ಚು ಪಾಶ್ಚಿಮಾತ್ಯ ಆಹಾರ, ಹೆಚ್ಚು ಸ್ಯಾಚುರೇಟೆಡ್ ಕೊಬ್ಬು, ಕಡಿಮೆ ಫೈಬರ್, ಕಡಿಮೆ ಚಟುವಟಿಕೆ ಮತ್ತು ಹೆಚ್ಚಿನ ಒತ್ತಡದಿಂದ ಸ್ತನ ಕ್ಯಾನ್ಸರ್ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಾಯು ಮಾಲಿನ್ಯದಿಂದ ಕ್ಯಾನ್ಸರ್, ಹೃದಯಾಘಾತ ಹೆಚ್ಚಳ; ಏನಿದು ಶಾಕಿಂಗ್ ವಿಷಯ?
ಸ್ತನ ಕ್ಯಾನ್ಸರ್ನ ರೋಗಲಕ್ಷಣಗಳು:
– ಸ್ತನದಲ್ಲಿ ಗಡ್ಡೆ ಉಂಟಾಗುವುದು.
– ಸ್ತನದ ಗಾತ್ರ, ಆಕಾರದಲ್ಲಿ ಬದಲಾವಣೆ.
– ಎದೆಯ ಮೇಲಿನ ಚರ್ಮದ ಬದಲಾವಣೆಗಳು.
– ಜೋತುಬಿದ್ದ ಮೊಲೆತೊಟ್ಟುಗಳು.
– ಸ್ತನದ ಚರ್ಮದ ಸುತ್ತಲಿನ ಚರ್ಮದ ಸಿಪ್ಪೆಸುಲಿಯುವಿಕೆ.
– ಕಿತ್ತಳೆಯ ಸಿಪ್ಪೆಯಂತೆ ನಿಮ್ಮ ಎದೆಯ ಮೇಲೆ ಆರೆಂಜ್ ಬಣ್ಣ ಮೂಡುವುದು.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, 2020ರಲ್ಲಿ ಜಗತ್ತಿನಾದ್ಯಂತ 6,85,000 ಜನರು ಸ್ತನ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. 23 ಲಕ್ಷ ಜನರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗಿದೆ. ಹಾಗೇ, ಈ ಕ್ಯಾನ್ಸರ್‌ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಇದನ್ನೂ ಓದಿ: ಸ್ತನ ಕ್ಯಾನ್ಸರ್ ಬಗ್ಗೆ ಇರುವ 15 ತಪ್ಪು ಕಲ್ಪನೆಗಳಿವು
ಮಹಿಳೆಯರು ಸಾಮಾನ್ಯವಾಗಿ ತಮಗೆ ತಿಳಿದಿರುವ ಸ್ತನ ಕ್ಯಾನ್ಸರ್ನ ಲಕ್ಷಣಗಳು ಗೊತ್ತಾದ ನಂತರವೇ ತಪಾಸಣೆಗೆ ಬರುತ್ತಾರೆ. ಇದರಿಂದ ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಲು ನಿಧಾನವಾಗುತ್ತಿವೆ. ಮಹಿಳೆಯರು ನಿಯಮಿತವಾಗಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆದರೆ, ಮಹಿಳೆಯರು ಇದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ನಾವು ಆರೋಗ್ಯಕರ ಜೀವನಶೈಲಿ, ಒತ್ತಡಮುಕ್ತ ಜೀವನ, ಆರೋಗ್ಯಕರ ಆಹಾರ, ದೈಹಿಕ ವ್ಯಾಯಾಮ, ಏರೋಬಿಕ್ಸ್ ರೀತಿಯ ಚಟುವಟಿಕೆಗಳನ್ನು ಹೆಚ್ಚೆಚ್ಚು ಮಾಡಿದರೆ ಸ್ತನ ಕ್ಯಾನ್ಸರ್ ನಿಯಂತ್ರಿಸಲು ಸಾಧ್ಯವಿದೆ. ಭಾರತದಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಬೇರೆ ದೇಶಗಳಿಗಿಂತ ಹೆಚ್ಚಾಗುತ್ತಿದೆ. ಹೀಗಾಗಿ, ವೈದ್ಯಕೀಯ ಕ್ಷೇತ್ರದ ಅನೇಕ ತಜ್ಞರು ಸ್ತನ ಕ್ಯಾನ್ಸರ್ ಬಗ್ಗೆ ಅಧ್ಯಯನ ನಡೆಸಲು ಏಷ್ಯನ್ ಮತ್ತು ಭಾರತೀಯ ಜನರ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ