ನೀವು ಕುಡಿಯುವ ಕಾಫಿಯನ್ನು ಆರೋಗ್ಯಕರವಾಗಿಸುವುದು ಹೇಗೆ?

|

Updated on: Jan 23, 2024 | 2:05 PM

ಕಾಫಿಯಲ್ಲಿ ಕೆಫೀನ್ ಅಂಶವಿರುತ್ತದೆ. ಇದರ ಅತಿಯಾದ ಸೇವನೆಯಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಕಾಫಿಗೆ ಸಕ್ಕರೆ ಮತ್ತು ಹಾಲು ಹಾಕಿ ಸೇವಿಸುವುದರಿಂದ ಇನ್ನಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹಾಗಾದರೆ ನಾವು ಕುಡಿಯುವ ಕಾಫಿಯನ್ನು ಆರೋಗ್ಯಕರವಾಗಿಸುವುದು ಹೇಗೆ?

ನೀವು ಕುಡಿಯುವ ಕಾಫಿಯನ್ನು ಆರೋಗ್ಯಕರವಾಗಿಸುವುದು ಹೇಗೆ?
ಕಾಫಿ
Image Credit source: iStock
Follow us on

ಕಾಫಿಯ ವಿಷಯಕ್ಕೆ ಬಂದಾಗ ಅನೇಕರಿಗೆ ದಿನ ಶುರುವಾಗುವುದೇ ಕಾಫಿ ಕುಡಿಯುವುದರಿಂದ. ಒಂದು ಸ್ಟ್ರಾಂಗ್ ಕಾಫಿ ಎಂಥವರ ಮೂಡ್ ಅನ್ನು ಬೇಕಾದರೂ ಬದಲಾಯಿಸಿಬಿಡುತ್ತದೆ. ಕೆಫೀನ್ ಸೇವನೆ ನಮ್ಮ ಆರೋಗ್ಯಕ್ಕೆ ಒಳ್ಳೆಯದಾ? ಕೆಟ್ಟದ್ದಾ? ಎಂಬ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಕೆಫೀನ್ ಅನ್ನು ಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ತೊಂದರೆಯಿಲ್ಲ. ಹಾಗೇ, ಕೆಫೀನ್ ಅನ್ನು ಯಾವ ಸಮಯದಲ್ಲಿ ಸೇವಿಸುತ್ತೇವೆ ಎಂಬುದು ಕೂಡ ಮುಖ್ಯವಾಗುತ್ತದೆ. ನೀವು ಕುಡಿಯುವ ಕಾಫಿಯನ್ನು ಆರೋಗ್ಯಕರವಾಗಿಸುವುದು ಹೇಗೆಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ನಿಮ್ಮ ಕಾಫಿಗೆ ಸಕ್ಕರೆ, ಕೊಬ್ಬಿನ ಅಂಶವಿರುವ ಹಾಲು, ಹಾಲಿನ ಕ್ರೀಂ ಮತ್ತು ಚಾಕೊಲೇಟ್ ಅನ್ನು ಸೇರಿಸುವುದರಿಂದ ಅದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹೀಗಾಗಿ, ಆದಷ್ಟೂ ಕೆಫೆಗಳಲ್ಲಿ ಸಿಗುವ ಕಾಫಿಯನ್ನು ಸೇವಿಸುವುದನ್ನು ಮಿತಗೊಳಿಸಿ. ಫಿಲ್ಟರ್ ಕಾಫಿಯಿಂದ ಹೆಚ್ಚೇನೂ ಅಪಾಯವಿಲ್ಲ. ಆದರೆ, ಇದು ಕೂಡ ಮಿತವಾಗಿದ್ದಷ್ಟೂ ಒಳ್ಳೆಯದು.

ಇದನ್ನೂ ಓದಿ: ಹೃದಯದ ಆರೋಗ್ಯದಿಂದ ಜೀರ್ಣಕ್ರಿಯೆವರೆಗೆ; ನಿಮ್ಮ ಡಯೆಟ್​ನಲ್ಲಿ ಎಪ್ರಿಕಾಟ್ ಪಾತ್ರವೇನು?

ಕೆಫೀನ್ ಕಾಫಿಯಲ್ಲಿ ಕಂಡುಬರುವ ಪ್ರಮುಖ ಉತ್ತೇಜಕಗಳಲ್ಲಿ ಒಂದಾಗಿದೆ. ಇದು ತ್ವರಿತ ಶಕ್ತಿ ಮತ್ತು ವರ್ಧಕವನ್ನು ಒದಗಿಸುತ್ತದೆ. ಕೆಫೀನ್ ಅನ್ನು ಸಂಜೆಯ ನಂತರ ಸೇವಿಸುವುದು ಒಳ್ಳೆಯದಲ್ಲ. ಇದರಿಂದ ನಿಮ್ಮ ನಿದ್ರೆಗೆ ತೊಂದರೆಯಾಗುತ್ತದೆ. ಕೆಫೀನ್ ಸೇವನೆಯಿಂದ ನಿದ್ರೆ ನಿವಾರಣೆಯಾಗುತ್ತದೆ. ಹೀಗಾಗಿ, ಮಲಗುವುದಕ್ಕಿಂತ ನಾಲ್ಕೈದು ಗಂಟೆಗಳ ಮೊದಲು ಕೆಫೀನ್ ಸೇವಿಸುವುದು ಒಳ್ಳೆಯದಲ್ಲ.

ನಿಮ್ಮ ಕಾಫಿಗೆ ಸಕ್ಕರೆ ಸೇರಿಸುವುದು ಕೂಡ ಒಳ್ಳೆಯ ಅಭ್ಯಾಸವಲ್ಲ. ಕಾಫಿಗೆ ಹಾಕಲಾಗುವ ಸಂಸ್ಕರಿಸಿದ ಸಕ್ಕರೆಯು ಫ್ರಕ್ಟೋಸ್ ಅನ್ನು ಹೊಂದಿರುತ್ತದೆ. ಇದು ಹಲವಾರು ಹೃದಯದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇದರಿಂದ ಮಧುಮೇಹ ಉಂಟಾಗುತ್ತದೆ. ಒಂದುವೇಳೆ ನಿಮಗೆ ಕಾಫಿಯನ್ನು ಬಿಡಲು ಆಗುವುದೇ ಇಲ್ಲವೆಂದಾದರೆ ಬೆಳಗ್ಗೆ ಒಂದು ಲೋಟ ಮತ್ತು ಮಧ್ಯಾಹ್ನದ ನಂತರ ಒಂದು ಲೋಟ ಎಂದು ನಿಮ್ಮ ಕಾಫಿ ಸೇವನೆಯನ್ನು ಮಿತಿಗೊಳಿಸಿ.

ಇದನ್ನೂ ಓದಿ: ಸಕ್ಕರೆ ಬಳಸುವುದನ್ನು ಕಡಿಮೆ ಮಾಡಿದರೆ ನಮ್ಮ ದೇಹದಲ್ಲಾಗುವ ಬದಲಾವಣೆಯೇನು?

ನೀವು ಕಾಫಿಗೆ ಕ್ರೀಮರ್‌ಗಳನ್ನು ಸೇರಿಸಲು ಇಷ್ಟಪಡುತ್ತೀರಾ? ನಿಮ್ಮ ಕಾಫಿಗೆ ಹೆಚ್ಚಿನ ಕೊಬ್ಬಿನ ಕ್ರೀಮರ್‌ಗಳನ್ನು ಸೇರಿಸುವುದರಿಂದ ಆರೋಗ್ಯಕ್ಕೆ ತೊಂದರೆ ಆಗಬಹುದು. ಕೃತಕ ಕ್ರೀಮರ್‌ಗಳು ಮತ್ತು ಪೂರ್ಣ ಕೊಬ್ಬಿನ ಸಂಸ್ಕರಿಸಿದ ಹಾಲಿನಿಂದ ಮಾಡಲಾಗುವ ಕಾಫಿಗೆ ಹೋಲಿಸಿದರೆ ಫಿಲ್ಟರ್ ಕಾಫಿ ಅಥವಾ ಬ್ರೂ ಕಾಫಿ ಅತ್ಯಲ್ಪ ಕ್ಯಾಲೊರಿಗಳನ್ನು ಹೊಂದಿರುತ್ತದೆ. ನಿಮ್ಮ ಕಾಫಿಗೆ ಸುವಾಸನೆ, ಕ್ರೀಮರ್‌ಗಳು ಮತ್ತು ಸಿರಪ್‌ಗಳನ್ನು ಸೇರಿಸುವುದರಿಂದ ಕಾಫಿಗೆ ಅನಗತ್ಯ ಕ್ಯಾಲೊರಿಗಳನ್ನು ಸೇರಿಸಿದಂತಾಗುತ್ತದೆ.

ನಿಮ್ಮ ಕಾಫಿ ಸೇವನೆಯನ್ನು ದಿನಕ್ಕೆ 2ರಿಂದ 3 ಕಪ್‌ಗಳಿಗೆ ಮಿತಿಗೊಳಿಸಿ. ಹೆಚ್ಚು ಕಾಫಿ ಸೇವನೆಯು ನಿದ್ರಾಹೀನತೆ, ಆತಂಕ, ಸ್ನಾಯುಗಳ ನಡುಕ ಮತ್ತು ಹೆಚ್ಚಿದ ಹೃದಯ ಬಡಿತಕ್ಕೆ ಕಾರಣವಾಗಬಹುದು. ಹೀಗಾಗಿ, ಕಾಫಿ ಸೇವಿಸುವಾಗ ಆದಷ್ಟೂ ಸರಳವಾಗಿ ಕಾಫಿಯನ್ನು ತಯಾರಿಸಿ, ಬ್ಲಾಕ್ ಕಾಫಿ ಸೇವನೆಗೆ ಆದ್ಯತೆ ನೀಡಿ. ಸಕ್ಕರೆ ಬಳಕೆಯನ್ನು ಕಡಿಮೆ ಮಾಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ